ಈ ಗುಣಗಳನ್ನು ಹೊಂದಿರುವ ಜನರನ್ನು ಯಾವುದೇ ಕಾರಣಕ್ಕೂ ನಂಬಲೇಬೇಡಿ! Relationship Tips

Relationship Tips
Published on

Relationship Tips : ನಾವು ಎಷ್ಟೇ ದೊಡ್ಡ ಕುಟುಂಬದಲ್ಲಿ ಬೆಳೆದರೂ, ನಮಗೆ ಕೆಲ ಸ್ನೇಹಿತರು ಇರಲೇಬೇಕು. ಏಕೆಂದರೆ, ಕುಟುಂಬದೊಂದಿಗೆ ಹಂಚಿಕೊಳ್ಳಲಾಗದ ಎಷ್ಟೋ ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ. ಇದರಿಂದ ಮನಸ್ಸಿನ ಭಾರ ಇಳಿಯುತ್ತದೆ ಎಂದು ನಂಬಲಾಗಿದೆ.

ಆದರೆ, ಯಾವುದೇ ಸಂಬಂಧಕ್ಕೆ ನಂಬಿಕೆಯೇ ಅಡಿಪಾಯ. ಅದು ಸ್ನೇಹಕ್ಕೂ ಕೂಡ ಹೊರತಾಗಿಲ್ಲ. ನಂಬಿಕೆ ಇದ್ದರೆ ಮಾತ್ರ ಯಾವುದೇ ಸಂಬಂಧ ಉಳಿಯುತ್ತದೆ. ನಾವು ನಮ್ಮ ಭಾವನೆಗಳನ್ನು ಮತ್ತು ರಹಸ್ಯಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳುತ್ತೇವೆ ಅಂದರೆ ನಾವು ಅವರ ಮೇಲೆ ಇಟ್ಟಿರುವ ನಂಬಿಕೆಯೇ ಕಾರಣ. ಆದರೆ, ಕೆಲವೊಮ್ಮೆ ಆ ನಂಬಿಕೆ ಸುಳ್ಳಾಗಿಬಿಡುತ್ತದೆ. ಏಕೆಂದರೆ, ನಮ್ಮಿಂದ ಎಲ್ಲವನ್ನು ತಿಳಿದುಕೊಂಡು ಅದನ್ನು ಬೇರೊಬ್ಬರ ಜತೆ ಹಂಚಿಕೊಳ್ಳುತ್ತಾರೆ. ಈ ರೀತಿ ಆದಾಗ ಬಹಳಷ್ಟು ತೊಂದರೆಗಳು ಉಂಟಾಗುತ್ತವೆ. ಹೀಗಾಗಿ ನಾವು ಯಾವ ರೀತಿಯ ಸ್ನೇಹಿತರನ್ನು ಆರಿಸಿಕೊಳ್ಳುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಅದಕ್ಕೆ ಹಿರಿಯರು ಹೇಳೋದು ನೋಡಿ ಮಾಡಿ ಸ್ನೇಹ ಮಾಡಿ ಎಂದು. ಯಾವ ರೀತಿಯ ಜನರೊಂದಿಗೆ ಸ್ನೇಹ ಬೆಳೆಸಬೇಕೆಂಬುದಕ್ಕೆ ಕೆಲವೊಂದು ಸಲಹೆಗಳು ಇಲ್ಲಿವೆ.

* ನಿಮ್ಮ ಮುಖಕ್ಕೆ ಹೊಡೆದಂತೆ ನೇರವಾಗಿ ಮಾತನಾಡುವ ಜನರು ತುಂಬಾ ಪ್ರಾಮಾಣಿಕರು. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಅಂತಹ ವ್ಯಕ್ತಿ ಇದ್ದರೆ, ಅವರನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬೇಡಿ. ನೀವು ತಪ್ಪು ದಾರಿಯಲ್ಲಿ ಹೋಗುತ್ತಿದ್ದರೆ ಅವರು ಗಮನಿಸುತ್ತಾರೆ ಮತ್ತು ನೇರವಾಗಿ ಹೇಳುತ್ತಾರೆ. ಹೀಗಾಗಿ ಅಂತಹ ಜನರನ್ನು ನಂಬುವುದರಲ್ಲಿ ಯಾವುದೇ ತಪ್ಪಿಲ್ಲ.

* ಕೆಲವರು ನಿಮ್ಮೊಂದಿಗೆ ನಗು ನಗುತ್ತಲೇ ಮಾತನಾಡಿ, ವಿಶ್ವಾಸವನ್ನು ಗಳಿಸುತ್ತಾರೆ. ಸುಖಾ ಸುಮ್ಮನೇ ನಿಮ್ಮನ್ನು ಹೊಗಳುತ್ತಲೇ ಇರುತ್ತಾರೆ ಮತ್ತು ನಿಮ್ಮ ದೌರ್ಬಲ್ಯಗಳನ್ನು ನಿಮಗೇ ಗೊತ್ತಿಲ್ಲದೇ ತಿಳಿದುಕೊಳ್ಳುತ್ತಾರೆ. ಅಂತಹ ಜನರೊಂದಿಗೆ ಜಗಳವಾದಾಗ ಅವರು ತಮ್ಮ ಮುಖವಾಡವನ್ನು ಕಳಚುತ್ತಾರೆ. ನಿಮ್ಮ ರಹಸ್ಯಗಳನ್ನು ಇತರರಿಗೆ ಹೇಳುತ್ತಾರೆ ಮತ್ತು ನಿಮ್ಮ ದೌರ್ಬಲ್ಯಗಳೊಂದಿಗೆ ಆಟವಾಡಲು ಪ್ರಯತ್ನಿಸುತ್ತಾರೆ. ಆದ್ದರಿಂದ, ಸುಖಾ ಸುಮ್ಮನೇ ನಿಮ್ಮನ್ನು ಹೊಗಳುವವರನ್ನು ಯಾವುದೇ ಕಾರಣಕ್ಕೂ ನಂಬಬೇಡಿ.

* ನನಗೆ ಅವರ ಬಗ್ಗೆ ಗೊತ್ತಿದೆ, ಇವರ ಬಗ್ಗೆಯೂ ತಿಳಿದಿದೆ ಎಂದು ಕೊಚ್ಚಿಕೊಳ್ಳುವವರಿದ್ದಾರೆ. ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ನಾನದನ್ನು ನೋಡಿಕೊಳ್ಳುತ್ತೇನೆ ಅಂತ ಹೇಳ್ತಾರೆ. ಆದರೆ, ಸಮಯಕ್ಕೆ ಸರಿಯಾಗಿ ಕೈಕೊಡುತ್ತಾರೆ. ಹೀಗಾಗಿ ಅಂತಹ ಜನರನ್ನು ನಂಬಬಾರದು. ನೀವು ಅವರನ್ನು ನಂಬಿದ ತಕ್ಷಣ ಅವರು ನಿಮಗೆ ಮೋಸ ಮಾಡುತ್ತಾರೆ. ಅಂದರೆ, ಮಾತಿನಲ್ಲೇ ಮರಳು ಮಾಡುವ ಜನರನ್ನು ನಂಬಬೇಡಿ. ನಂಬಿದರೆ ನಿಮ್ಮ ರಹಸ್ಯಗಳನ್ನು ತಿಳಿದುಕೊಂಡು ಬೇರೆಯವರ ಜತೆ ಹಂಚಿಕೊಳ್ಳುತ್ತಾರೆ.

* ಕೆಲವರು ಅಸಂಬದ್ಧವಾಗಿ ಮಾತನಾಡುತ್ತಾ ಸಮಯ ಕಳೆಯುತ್ತಾರೆ. ಬೇರೆಯವರು ಹೇಳಿದ್ದನ್ನು ನಿಮಗೆ ಹೇಳುತ್ತಾರೆ ಮತ್ತು ನೀವು ಹೇಳಿದ್ದನ್ನು ಬೇರೆಯವರ ಬಳಿ ಹಂಚಿಕೊಳ್ಳುತ್ತಾರೆ. ಇಂತಹ ಜನರೊಂದಿಗೆ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಅಂತಹ ಜನರು ತಮ್ಮ ವಾಚಾಳಿತನದಿಂದ ತೊಂದರೆಗೆ ಸಿಲುಕುತ್ತಾರೆ. ಸಾಲದ್ದಕ್ಕೆ ಇತರರನ್ನು ಸಹ ತೊಂದರೆಗೆ ಸಿಲುಕಿಸುತ್ತಾರೆ. ನೀವು ನಿಮ್ಮ ರಹಸ್ಯಗಳನ್ನು ಸುಳ್ಳುಗಾರನಿಗೆ ಹೇಳಿದರೆ, ಆ ರಹಸ್ಯಗಳೆಲ್ಲ ಬಹಿರಂಗವಾಗಿಬಿಡುತ್ತವೆ. ಆದ್ದರಿಂದ, ಸುಳ್ಳುಗಾರರೊಂದಿಗೆ ಜಾಗರೂಕರಾಗಿರಿ.

* ಸಂಬಂಧವಿಲ್ಲದ ವಿಷಯಗಳನ್ನು ತಿಳಿದುಕೊಳ್ಳಲು ಕೆಲವರು ಉತ್ಸುಕರಾಗಿರುತ್ತಾರೆ. ನಾವು ಆಕಸ್ಮಿಕವಾಗಿ ಅವರೊಂದಿಗೆ ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡರೂ ಸಹ, ಅವರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುವ ಮೂಲಕ ಕಿರಿಕಿರಿ ಉಂಟುಮಾಡುತ್ತಾರೆ. ಇತರರ ನೋವನ್ನು ಅರ್ಥಮಾಡಿಕೊಳ್ಳುವ ಪ್ರವೃತ್ತಿ ಅವರಿಗೆ ಕಡಿಮೆ ಇರುತ್ತದೆ. ಹೀಗಾಗಿ ಅವರ ಬಗ್ಗೆ ಎಚ್ಚರವಿರಲಿ.

* ಒಳ್ಳೆಯ ಹೃದಯವುಳ್ಳ ಜನರು ಸುಲಭವಾಗಿ ನೋಯಿಸಿಕೊಳ್ಳುತ್ತಾರೆ ಮತ್ತು ಸಣ್ಣ ವಿಷಯಗಳಿಗೂ ಕಣ್ಣೀರು ಸುರಿಸುತ್ತಾರೆ. ಅಂತಹ ಜನರನ್ನು ಬಿಟ್ಟುಕೊಡಬೇಡಿ. ಏಕೆಂದರೆ ಅವರಿಗೆ ಮೋಸ ಮಾಡುವುದು ಹೇಗೆಂದು ತಿಳಿದಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net