

ಬೆಂಗಳೂರು: ವಿದೇಶಿ ವಿವಿಗಳಲ್ಲಿ 2 ವರ್ಷ ಪೂರಕ (ಬ್ರಿಜ್) ಕೋರ್ಸ್ ಪೂರ್ಣಗೊಳಿಸಿ ಪದವಿ ಪಡೆದಿರುವ ಭಾರತೀಯರು ಎಐಬಿಇ ಪರೀಕ್ಷೆ ಹೊರತುಪಡಿಸಿ ಬೇರಾವುದೇ ಕೋರ್ಸ್ ಮಾಡುವಂತೆ ಒತ್ತಾಯಿಸದೆ ಅವರಿಗೆ ನೋಂದಣಿ ನೀಡಬೇಕು ಎಂದು ರಾಜ್ಯ ವಕೀಲರ ಪರಿಷತ್ಗೆ (ಕೆಎಸ್ಬಿಸಿ) ಹೈಕೋರ್ಟ್ ನಿರ್ದೇಶಿಸಿದೆ. ವಿದೇಶಿ ಕಾನೂನು ಪಡೆದಿರುವ ಭಾರತೀಯರು ಅರ್ಹತಾ ಪರೀಕ್ಷೆ ಬರೆಯುವುದನ್ನು ಕಡ್ಡಾಯಗೊಳಿಸಿರುವ ಬಿಸಿಐ (ಬಾರ್ ಕೌನ್ಸಿಲ್ ಆಫ್ ಇಂಡಿಯಾ) 2020ರಂದು ಹೊರಡಿಸಿದ್ದ ಅಧಿಸೂಚನೆಯ ನಿರ್ದಿಷ್ಟ ಭಾಗ ವಜಾ ಕೋರಿ ಕರಣ್ ಧನಂಜಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.
2023ರ ಮಾ.21ರಂದು ಭಾರತೀಯ ವಕೀಲರ ಪರಿಷತ್ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಅರ್ಹತಾ ಪರೀಕ್ಷೆ ಹೊರತುಪಡಿಸಿ ಬೇರಾವುದೇ ಪರೀಕ್ಷೆ ತೆಗೆದುಕೊಳ್ಳಬೇಕಾಗಿಲ್ಲ. ಮೂರನೇ ಪ್ರತಿವಾದಿಯಾಗಿರುವ ಕೆಎಸ್ಬಿಸಿಯು ಬೇರಾವುದೇ ಅರ್ಹತಾ ಪರೀಕ್ಷೆ ತೆಗೆದುಕೊಳ್ಳುವಂತೆ ಒತ್ತಾಯ ಮಾಡದೆ ಪೂರಕ ಕೋರ್ಸ್ ಫಲಿತಾಂಶ ಆಧರಿಸಿ ಅರ್ಜಿದಾರರನ್ನು ನೋಂದಾಯಿಸಿಕೊಳ್ಳಬೇಕು ಎಂದು ಪೀಠ ಹೇಳಿದೆ. ಕರಣ್ ಅವರು ದ್ವಿತೀಯ ಪಿಯು ಪರೀಕ್ಷೆಯ ಬಳಿಕ ಬರ್ವಿುಂಗ್ಹ್ಯಾಮ್ ಸಿಟಿ ವಿವಿಯಲ್ಲಿ ಬ್ಯಾಚುಲರ್ ಆಫ್ ಲಾ ವಿತ್ ಆನರ್ಸ್ಗೆ ಪ್ರವೇಶ ಪಡೆದಿದ್ದರು.
ಇದು ಬಿಸಿಐ ಪರಿಗಣಿಸಿರುವ ವಿದೇಶಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿದೆ. ಕರಣ್ 2020ರಲ್ಲಿ ಬ್ಯಾಚುಲರ್ ಆಫ್ ಲಾ ವಿತ್ ಆನರ್ಸ್ ಪದವಿ ಪಡೆದಿದ್ದು 2017 ರಿಂದ 2020ರವರೆಗೆ ಮೂರು ವರ್ಷ ಅಧ್ಯಯನ ಮಾಡಿದ್ದರು. ಭಾರತಕ್ಕೆ ಮರಳಿದ್ದ ಕರಣ್ ಅವರು ಎನ್ಎಲ್ಎಸ್ಐಯು (ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ) ನಲ್ಲಿ 2023ರಲ್ಲಿ ಪೂರಕ ಕೋರ್ಸ್ ಪೂರ್ಣಗೊಳಿಸಿದ್ದರು. ಆದರೆ, ವಿದೇಶಿ ಕಾನೂನು ಪದವಿ ಪಡೆದಿರುವ ಭಾರತೀಯರಿಗೆ ಅಗತ್ಯವಿರುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದರು.
ಭಾರತದಲ್ಲಿನ ಅಧಿಸೂಚನೆ ಪ್ರಕಾರ ವಿದೇಶಿ ವಿವಿಯಲ್ಲಿ ಕಾನೂನು ಪದವಿ ಪಡೆದಿರುವ ಅಭ್ಯರ್ಥಿಗಳು, ಅಗತ್ಯವಾಗಿ ಬೇಕಿರುವ ಒಂದು ಅಥವಾ ಎರಡು ವರ್ಷ ಪೂರಕ ಪದವಿ ಕೋರ್ಸ್ ಮಾಡಬೇಕಿದೆ. 2017ರಿಂದ ವಿದೇಶಿ ವಿವಿಯಲ್ಲಿ ಕಾನೂನು ಪದವಿ ಪಡೆದಿರುವವರಿಗೆ ಪೂರಕ ಕೋರ್ಸ್ ಪರಿಚಯಿಸಲಾಗಿದೆ. ಬಿಸಿಐ ಉಲ್ಲೇಖಿಸಿರುವ ದೇಶದ ಮಹತ್ವದ ಕಾನೂನು ಕಾಲೇಜಿನಲ್ಲಿ ಪೂರಕ ಕೋರ್ಸ್ ಪೂರ್ಣಗೊಳಿಸಿರುವುದರಿಂದ ಬಿಸಿಐ ಸೂಚಿಸಿರುವ ಇನ್ನೊಂದು ಪರೀಕ್ಷೆ ಬರೆಯುವುದು ಆಶ್ಚರ್ಯಕರವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.