ರಾಜ್ಯಕ್ಕೆ ನಬಾರ್ಡ್ ನೀಡುವ ಸಾಲದಲ್ಲಿ ಇಳಿಕೆ.. ರಾಜ್ಯದ ರೈತರಿಗೆ ಮಾಡುತ್ತಿರುವ ಅನ್ಯಾಯ: CM Siddaramaiah

CM Siddaramaiah
Published on

ನವದೆಹಲಿ: ನಬಾರ್ಡ್ ನೀಡುವ ಸಾಲದ ಮೊತ್ತದಲ್ಲಿ ಅರ್ಧದಷ್ಟು ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕುಗಳಿಗೆ ಹೋಗಬೇಕಾಗುತ್ತದೆ. ವಾಣಿಜ್ಯ ಬ್ಯಾಂಕುಗಳಲ್ಲಿ 10 ರಿಂದ 12 ಪ್ರತಿಶತ ಬಡ್ಡಿ ಹಾಕುತ್ತಾರೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಲ್ಲವೇ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ಪ್ರಶ್ನಿಸಿದರು.

ನವದೆಹಲಿಯಲ್ಲಿ ಗುರುವಾರ (ನ.21) ಮಾಧ್ಯಮದವರೊಂದಿಗೆ ಮಾತನಾಡಿದರು.

ಈ ಬಗ್ಗೆ ಪ್ರಧಾನಮಂತ್ರಿ, ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದು, ಇದನ್ನು ಆರ್.ಬಿ.ಐ ಒಪ್ಪಿಲ್ಲ ಎಂದು ಸಚಿವರು ಉತ್ತರವನ್ನೂ ಬರೆದಿದ್ದಾರೆ. ನಬಾರ್ಡ್ ಕೇಂದ್ರ ಸರ್ಕಾರದ ಕೆಳೆಗೆ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸಚಿವರೇ ಅಸಹಾಯಕತೆಯನು ವ್ಯಕ್ತಪಡಿಸಿದರೆ ಹೇಗೆ? ಎಂದರು.

ನಬಾರ್ಡ್ ನಲ್ಲಿ ಕಳೆದ ವರ್ಷ 5,600 ಕೋಟಿ ರೂ.ಗಳನ್ನು ಅಲ್ಪಾವಧಿ ಸಾಲಕ್ಕಾಗಿ ನೀಡಲಾಗಿತ್ತು. ಈ ವರ್ಷ 2,340 ಕೊಟಿ ರೂ.ಗಳನ್ನು ನೀಡಿದ್ದಾರೆ. 3,220 ಕೋಟಿ ರೂ.ಗಳನ್ನು ಕಡಿತಗೊಳಿಸಲಾಗಿದೆ. 58% ರಷ್ಟು ಕಡಿಮೆ ಮಾಡಿರುವುದು ರೈತರಿಗೆ ಮಾಡಿರುವ ದ್ರೋಹ. ನಬಾರ್ಡ್ 4.50% ಬಡ್ಡಿ ದರದಲ್ಲಿ ಸಾಲ ಕೊಡುತ್ತಾರೆ. 5 ವರ್ಷಗಳ ಅಂಕಿಅಂಶಗಳನ್ನು ತೆಗೆದು ನೋಡಿದರೆ 5,000 ಕೋಟಿ ರೂ.ಗಳಿದೆ. ಸಾಲ ಕೊಡುವುದು ಯಾವಾಗಲೂ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.

ಎಲ್ಲಾ ರಾಜ್ಯಗಳಿಗೂ ಕಡಿತ ಮಾಡಲಾಗಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ವಿವರಿಸಲಾಗಿದೆ. ಆರು ವರ್ಷಗಳಿಂದ ಜಾಸ್ತಿ ಕೊಟ್ಟಿದ್ದು, ಈಗ ಕಡಿಮೆ ಮಾಡಿದರೆ ಹೇಗೆ? ನಮ್ಮ ಸರ್ಕಾರದ ವತಿಯಿಂದ 5 ಲಕ್ಷದವರೆಗೆ ಬಡ್ಡಿರಹಿತವಾಗಿ ಸಾಲ ನೀಡಲಾಗುತ್ತಿದೆ. 4.50% ಬಡ್ಡಿ ಕೊಡುವುದು ನಮ್ಮ ಸರ್ಕಾರ ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲವನ್ನು 5-15 ಲಕ್ಷದವರೆಗೆ 3% ಬಡ್ಡಿದರದಲ್ಲಿ ನೀಡಲಾಗುತ್ತಿದೆ. 1,200 ಕೋಟಿಗಳಿಗಿಂತಲೂ ಹೆಚ್ಚು ಬಡ್ಡಿಯನ್ನು ನೀಡುತ್ತೇವೆ. ಈ ಬಗ್ಗೆ ಆರ್.ಅಶೋಕ್, ಬಿ.ಎಸ್.ಯಡಿಯೂರಪ್ಪ, ಯತ್ನಾಳ್, ಸಿ.ಟಿ.ರವಿ, ಹೆಚ್.ಡಿ.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ ಮಾತನಾಡುವುದಿಲ್ಲ ಎಂದು ಸಿಎಂ ವ್ಯಂಗ್ಯವಾಡಿದರು.

ಬಿಜೆಪಿಗೆ ಬಡವರ ಕುರಿತು ಯಾವ ಕಾಳಜಿಯೂ ಇಲ್ಲ

ಸರ್ಕಾರಿ ನೌಕರರು, ತೆರಿಗೆದಾರರನ್ನು ಬಿಟ್ಟು ಬೇರೆಯಾರನ್ನೂ ಬಿಪಿಎಲ್ ಕಾರ್ಡಿನಿಂದ ತೆಗೆಯಬೇಡಿ ಎಂದು ಸೂಚಿಸಿರುವುದಾಗಿ ಸ್ಪಷ್ಟಪಡಿಸಿದ ಸಿಎಂ, ಬಿಜೆಪಿಯವರು ರಾಜಕೀಯಕ್ಕಾಗಿ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ. ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಯಾರು? ಅದನ್ನು ಜಾರಿಗೆ ತಂದಿದ್ದು ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್. ರಾಜ್ಯಸಭೆಯಲ್ಲಿ ಮಂಡಿಸಿದಾಗ ಮುರಳಿ ಮನೋಹರ್ ಜೋಶಿ ಅದನ್ನು ವಿರೋಧಿಸಿ ಭಾಷಣ ಮಾಡಿದ್ದಾರೆ. ಅದು ಆಹಾರ ಭದ್ರತಾ ಕಾಯ್ದೆಯಲ್ಲ, ಮತ ಭದ್ರತಾ ಕಾಯ್ದೆ ಎಂದು ಕರೆದಿದ್ದರು . ಅಂದರೆ ಆಹಾರ ಭದ್ರತಾ ಕಾಯ್ದೆಗೆ ಅವರು ವಿರೋಧವಾಗಿದ್ದರು. ಇವರಿಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ ? ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net