

ಬೆಂಗಳೂರು: ಕರೊನಾ ಸಂಕಷ್ಟ ಕಾಲದಲ್ಲಿ ನೊಂದವರಿಗೆ ಉಚಿತ ಪಡಿತರ ಹಂಚಿಕೆ ಕುರಿತು ಆರಂಭಿಕವಾಗಿ ಕೆಲವು ಲೋಪಗಳು ಪತ್ತೆಯಾದ ನಂತರ ಜಾಗ್ರತೆ ವಹಿಸಿ, ನನ್ನನ್ನೂ ಒಳಗೊಂಡು ಹಿರಿಯ ಅಧಿಕಾರಿಗಳ 5 ತಂಡ ರಚಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದರಿಂದ ಸೋರಿಕೆಗೆ ಕಡಿವಾಣ ಹಾಕಲು ಸಾಧ್ಯವಾಯಿತು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಗೋಪಾಲಯ್ಯ ಹೇಳಿದರು. ವಿಜಯವಾಣಿ ಫೋನ್-ಇನ್ ಹಾಗೂ ಸಂವಾದದಲ್ಲಿ ಭಾಗವಹಿಸಿದ ಅವರು, ಈ ಕಾರ್ಯ ತಂತ್ರದ ವೇಳೆ ನಿವೃತ್ತ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಕ್ರಮವಹಿಸಿದ್ದರಿಂದ ಅರ್ಹರಿಗೆ ಸಕಾಲಕ್ಕೆ ಸಮರ್ಪಕ ಪಡಿತರ ಹಂಚಿಕೆಯಾಗಿದ್ದು, ಕಾಲಮಿತಿಯೊಳಗೆ ಶೇ. 94 ಜನರಿಗೆ ತಲುಪಿಸಿರುವುದು ಇಲಾಖೆಯಲ್ಲಿ ಹೊಸ ದಾಖಲೆಯಾಗಿದೆ ಎಂದರು.
ಜನರಿಗೆ ಹತ್ತಿರವಾದ ಈ ಇಲಾಖೆ ಬಗ್ಗೆ ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ಕುಂದು-ಕೊರತೆಗಳ ಸಾಕಷ್ಟು ದೂರುಗಳನ್ನು ಗಮನಿಸಿದ್ದೆ. ಈ ಕಾರಣಕ್ಕೆ ಅಧಿಕಾರಿಗಳ ಜತೆಗೆ ಹಗಲು-ರಾತ್ರಿ ಸಭೆ ನಡೆಸಿ ಕಾರ್ಯಕ್ಷಮತೆ ಹೆಚ್ಚಿಸಲು ಬೇಕಾದ ಕ್ರಮಗಳಿಗೆ ಯೋಚಿಸುತ್ತಿರುವಾಗ ಕರೊನಾ ಸವಾಲು ಎದುರಾಯಿತು ಎಂದರು.
64 ಲಕ್ಷ ರೂ. ದಂಡ: ತೂಕ ಮತ್ತು ಅಳತೆ ಇಲಾಖೆ ಮೂಲಕವೂ ನಿರಂತರ ತಪಾಸಣೆ ಹಾಗೂ ಹಠಾತ್ ಭೇಟಿ ಮೂಲಕ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈವರೆಗೆ 64 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಈ ಪೈಕಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಹೆಚ್ಚಿನ ಬೆಲೆಗೆ ಮಾರಾಟ, ಅಂಗಡಿಗಳ ತಪಾಸಣೆ, ತೂಕದಲ್ಲಿ ವ್ಯತ್ಯಾಸ ಪತ್ತೆ ಇನ್ನಿತರ ಲೋಪಗಳನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡುವ ಮೂಲಕ ಎಚ್ಚರಿಕೆ ನೀಡಲಾಗಿದೆ ಎಂದರು.
ಇಷ್ಟರಲ್ಲೇ ಆನ್ಲೈನ್ ಮೂಲಕ ಅರ್ಜಿ
ಕರೊನಾ ಕಾರಣಕ್ಕೆ ಮಾರ್ಚ್ನಿಂದ ಹೊಸ ಪಡಿತರ ಚೀಟಿ ವಿತರಣೆ ನಿಲ್ಲಿಸಿದ್ದು, ಇನ್ನೂ 15 ದಿನಗಳೊಳಗೆ ಆನ್ಲೈನ್ ಮೂಲಕ ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಜತೆಗೆ 3 ತಿಂಗಳೊಳಗೆ ಒಮ್ಮೆಯೂ ಪಡಿತರ ಪಡೆಯದವರ ಚೀಟಿಗಳು ರದ್ದಾಗಲಿದ್ದು, ಅಂಥವರೂ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
ಜುಲೈನಿಂದ ಪ್ರಾದೇಶಿಕ ಧಾನ್ಯ
ಜನಪ್ರತಿನಿಧಿಗಳು, ಸಂಘಟನೆಗಳು ಹಾಗೂ ಪಡಿತರ ಚೀಟಿದಾರರ ಅಪೇಕ್ಷೆಗೆ ಸ್ಪಂದಿಸಿ ಮಾಸಿಕ ಪಡಿತರ ವಿತರಣೆಯಲ್ಲಿ ಅಕ್ಕಿ ಜತೆಗೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ರಾಗಿ ಅಥವಾ ಜೋಳ ಸೇರಿಸುವುದಕ್ಕೆ ಕ್ರಮವಹಿಸಿದ್ದು, ಜುಲೈನಿಂದ ಜಾರಿಗೆ ಬರಲಿದೆ ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ಪ್ರಕಟಿಸಿದರು. ‘ವಿಜಯವಾಣಿ’ ಕಚೇರಿಯಲ್ಲಿ ಫೋನ್-ಇನ್ ಕಾರ್ಯಕ್ರಮದ ಮಧ್ಯೆ ಸಂವಾದದಲ್ಲಿ ಪ್ರತಿಕ್ರಿಯಿಸಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ತಲಾ ಪೂರೈಕೆ ಪ್ರಮಾಣದಲ್ಲಿ ವ್ಯತ್ಯಾಸವಾಗದಂತೆ ಅಕ್ಕಿಯೊಂದಿಗೆ ಆಯಾ ಪ್ರಾಂತದ ಆಹಾರ ಧಾನ್ಯ ಹಂಚಿಕೆಗೆ ನಿರ್ಧರಿಸಲಾಗಿದೆ ಎಂದರು. ಜುಲೈನಿಂದ ಡಿಸೆಂಬರ್ವರೆಗೆ ದಕ್ಷಿಣ ಕರ್ನಾಟಕ ಭಾಗದ ಪಡಿತರ ಚೀಟಿದಾರರಿಗೆ 3 ಕೆಜಿ ಅಕ್ಕಿ ಜತೆಗೆ 2 ಕೆಜಿ ರಾಗಿ ವಿತರಿಸಲಿದ್ದು, ಅಗತ್ಯವಿರುವ 1.70 ಲಕ್ಷ ಮೆಟ್ರಿಕ್ಟನ್ ರಾಗಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಅದೇ ರೀತಿ ಉತ್ತರ ಕರ್ನಾಟಕ ಪ್ರಾಂತದವರಿಗೆ ತಲಾ 2 ಕೆಜಿ ಜೋಳ ಹಂಚುವುದಕ್ಕಾಗಿ 3,000 ಮೆಟ್ರಿಕ್ ಟನ್ ಜೋಳ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.