

ಬೆಂಗಳೂರು: ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ 1,244 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿ ವರ್ಷವಾದರೂ ನೇಮಕಾತಿ ಪೂರ್ಣಗೊಂಡಿಲ್ಲ. 8 ತಿಂಗಳ ಹಿಂದೆ ದೈಹಿಕ ಪರೀಕ್ಷೆ ನಡೆದಿದ್ದು, ಮುಂದಿನ ಪ್ರಕ್ರಿಯೆ ನಡೆದಿಲ್ಲ. ಇದರಿಂದಾಗಿ ಉದ್ಯೋಗಾಕಾಂಕ್ಷಿಗಳು ಸ್ಥಿತಿ ಡೋಲಾಯ ಮಾನವಾಗಿದೆ. ಇಲಾಖೆ ಯಲ್ಲಿ ಖಾಲಿ ಇರುವ ಅಗ್ನಿ ಶಾಮಕ, ಚಾಲಕ ಮತ್ತು ತಂತ್ರಜ್ಞ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. 2020ರ ಜುಲೈ 20 ಕೊನೆಯ ದಿನಾಂಕವಾಗಿತ್ತು. ನೌಕರಿ ಬಯಸಿ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದರು. ಆಯ್ಕೆ ವಿಧಾನ ದೈಹಿಕ, ವಾಹನ ಚಾಲನ ಮತ್ತು ವೈದ್ಯಕೀಯ ಪರೀಕ್ಷೆ ಎಂದು ಮೂರು ಹಂತದಲ್ಲಿ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ, 10 ತಿಂಗಳ ಬಳಿಕ 2021ರ ಏಪ್ರಿಲ್ 23ರಂದು ದೈಹಿಕ ಪರೀಕ್ಷೆ ನಡೆಸಲಾಯಿತು. ವಾಹನ ಚಾಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಿರಲಿಲ್ಲ. ಇದೀಗ ಜನವರಿ ಅಂತ್ಯಕ್ಕೆ 440 ಜನರಿಗೆ ವೈದ್ಯಕೀಯ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ. ಆದರೆ, ಕರೊನಾ ಮಾರ್ಗಸೂಚಿ ಅನ್ವಯ ಆಗಿರುವ ಕಾರಣ ಮತ್ತಷ್ಟು ವಿಳಂಬ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ನೇಮಕಾತಿಗೆ ಅಡ್ಡಿ ಏನು?: ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಅಂಕಪಟ್ಟಿ ಮತ್ತು ಪ್ರಮಾಣ ಪತ್ರದಲ್ಲಿ ತಾಂತ್ರಿಕ ಗೊಂದಲ ಗಳು ಇದ್ದವು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಬಗೆಹರಿಸಿಕೊಳ್ಳಲು ತಡವಾಗಿದೆ. ಜತೆಗೆ ಕರೊನಾ ಲಾಕ್ಡೌನ್ ಕೂಡ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ನೇಮಕಾತಿಗೆ ಅಧಿಕಾರಿಗಳೇ ಆಸಕ್ತಿ ತೋರಿಲ್ಲ ಎಂಬ ಆರೋಪ ಕೇಳಿಬಂದಿದೆ. ನೋಟಿಫಿಕೇಷನ್ ಹೊರಡಿಸಿ ಅರ್ಜಿ ಸ್ವೀಕರಿಸಿದ ಮೇಲೆ ಹಂತ ಹಂತವಾಗಿ ವಿಶೇಷ ತಂಡ ರಚನೆ ಮಾಡಿ ನೇರ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಹಿರಿಯ ಅಧಿಕಾರಿಗಳು ಕೈ ಜೋಡಿಸದ ಕಾರಣ ತಡವಾಗುತ್ತಿದೆ. ಇದೀಗ ಪ್ರಕ್ರಿಯೆಯನ್ನು ಸಿಐಡಿಗೆ ವಹಿಸಲಾಗಿದೆ ಎನ್ನಲಾಗಿದೆ.
ಸಹಾಯಕ್ಕೆ ಬಾರದ ಹೆಲ್ಪ್ಲೈನ್: ನೇಮಕಾತಿ ಸಂಬಂಧಪಟ್ಟ ವಿಚಾರವಾಗಿ ಸಹಾಯ ಬೇಕಾದರೆ ಕರೆ ಮಾಡುವಂತೆ ಸಹಾಯವಾಣಿ ಸಂಖ್ಯೆ 080-2294 3346 ನೀಡಲಾಗಿದೆ. ಆದರೆ, ಈ ನಂಬರ್ಗೆ ಕರೆ ಮಾಡಿದರೆ ಸ್ವೀಕರಿಸುವರೇ ಇರುವುದಿಲ್ಲ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆ ಏನಾಯಿತು ಎಂದು ತಿಳಿಯಲು ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿಲ್ಲ.