

|ಹರೀಶ್ ಬೇಲೂರು ಬೆಂಗಳೂರು
ಆಹಾರ ಕಲಬೆರಕೆ ತಡೆಗೆ ಸಿಬ್ಬಂದಿ ಕೊರತೆ, ಮುಂಬಡ್ತಿ ಸಿಗದೆ ಅಧಿಕಾರಿಗಳ ಪರದಾಟ, ಇಲಿ ಮತ್ತು ಹೆಗ್ಗಣಗಳ ಕಾಟದಿಂದ ದಾಖಲೆಗಳನ್ನು ರಕ್ಷಿಸಿಕೊಳ್ಳಲು ಹೆಣಗಾಟ, ಭೂತದ ಬಂಗಲೆಯಂತೆ ಕಾಣುತ್ತಿರುವ ಕಚೇರಿ... ಇವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎದುರಿಸುತ್ತಿರುವ ಸಮಸ್ಯೆಗಳ ಕೆಲ ಸ್ಯಾಂಪಲ್.
2013-14ರಲ್ಲಿ ಆರೋಗ್ಯ ಇಲಾಖೆಯಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವನ್ನು ಸೃಜಿಸಲಾಯಿತು. ಈ ಸಂದರ್ಭದಲ್ಲಿ 383 ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ಆರೋಗ್ಯ ಇಲಾಖೆಯಿಂದ ಕೆಲ ಅಧಿಕಾರಿಗಳು ಮತ್ತು ನೌಕರರನ್ನು ನೀಡಲಾಯಿತು. ವೃಂದ ಮತ್ತು ನೇಮಕಾತಿ (ಸಿ ಆಂಡ್ ಆರ್) ಆಧಾರದಲ್ಲಿ ಅಂಕಿತಾಧಿಕಾರಿ, ಆಹಾರ ಸುರಕ್ಷತಾಧಿಕಾರಿ, ಕಿರಿಯ ಆಹಾರ ವಿಶ್ಲೇಷಕ, ಆಹಾರ ವಿಶ್ಲೇಷಕ ಹಾಗೂ ಪ್ರಥಮ ದರ್ಜೆ ಸಹಾಯಕ ಸೇರಿ ಇತರ ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ, 9 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಪ್ರಾಧಿಕಾರದಲ್ಲಿ ಈಗಾಗಲೆ ಕಾರ್ಯನಿರ್ವಹಿಸುತ್ತಿರುವ ಆಹಾರ ಸುರಕ್ಷತಾಧಿಕಾರಿಗಳು ಮುಂಬಡ್ತಿ ಸಿಗದೆ ವಂಚಿತರಾಗಿದ್ದಾರೆ.
264 ಹುದ್ದೆಗಳು ಖಾಲಿ: ಪ್ರಾಧಿಕಾರದಲ್ಲಿ ಒಟ್ಟು ಮಂಜೂರಾದ 383 ಹುದ್ದೆಗಳ ಪೈಕಿ 119 ಹುದ್ದೆಗಳು ಭರ್ತಿಯಾಗಿದ್ದು, ಬರೋಬ್ಬರಿ 264 ಹುದ್ದೆಗಳು ಖಾಲಿ ಉಳಿದಿವೆ.
ಇದರಿಂದ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಪರೀಕ್ಷೆ ತಯಾರಿ ನಡೆಸುತ್ತಿರುವ ಪ್ರತಿಭಾವಂತ ನಿರುದ್ಯೋಗಿಗಳಿಗೆ ಅನ್ಯಾಯವಾಗಿದೆ. ಆರೋಗ್ಯ ಇಲಾಖೆಯಿಂದ ನಿಯೋಜನೆ ಮೇರೆಗೆ ಪ್ರಾಧಿಕಾರಕ್ಕೆ ಬಂದಿರುವ 45 ವೈದ್ಯರು ಖಾಲಿ ಉಳಿದಿರುವ ಹುದ್ದೆಗಳನ್ನು ದುರ್ಬಳಕೆ ಮಾಡಿಕೊಂಡು ಹಲವು ವರ್ಷಗಳಿಂದ ಅಕ್ರಮವಾಗಿ ಉಪ ಆಯುಕ್ತ(ಆಡಳಿತ), ಉಪ ಆಯುಕ್ತ (ಸ್ಕ್ವಾಡ್), ಅಂಕಿತಾಧಿಕಾರಿ ಹಾಗೂ ಆಹಾರ ಸುರಕ್ಷತಾಧಿಕಾರಿ ಹುದ್ದೆಗಳಲ್ಲಿ ಕುಳಿತು ಕಾರ್ಯಭಾರ ಮಾಡುತ್ತಿರುವುದು ಬಹಿರಂಗವಾಗಿದೆ. ಆರೋಗ್ಯ ಇಲಾಖೆಯಲ್ಲಿ 85 ಸಾವಿರ ರೂ. ವಿಶೇಷ ಭತ್ಯೆ ಸಿಕ್ಕರೂ ಅದನ್ನು ಬಿಟ್ಟು ಹೆಚ್ಚು ವೈದ್ಯರು ಪ್ರಾಧಿಕಾರಕ್ಕೆ ನಿಯೋಜನೆಗೆ ಮೇರೆಗೆ ಬರುತ್ತಿದ್ದಾರೆ.
ಬಿಸಿಯೂಟ ಆಹಾರಧಾನ್ಯದಲ್ಲಿ ಹುಳು, ಮುಗ್ಗಲು!
ಬೆಂಗಳೂರು: ಶಾಲೆಗಳ ಮಧ್ಯಾಹ್ನದ ಬಿಸಿ ಊಟದ ಆಹಾರಧಾನ್ಯಗಳು ಮೂಟೆಯಲ್ಲಿ ಮುಗ್ಗಲು ಹಿಡಿಯುತ್ತಿರುವ ಹಾಗೂ ಈ ಆಹಾರವನ್ನೇ ಬಳಸಿ ಬಿಸಿ ಊಟ ಸಿದ್ಧಪಡಿಸುತ್ತಿರುವ ಬಗ್ಗೆ ಪಿ.ಎಂ. ಪೋಷಣ್ ಶಕ್ತಿ ನಿರ್ವಣ್ ಇಲಾಖೆಗೆ ಸಾರ್ವಜನಿಕರಿಂದ ಸಾಕಷ್ಟು ದೂರವಾಣಿ ಕರೆಗಳು ಬರುತ್ತಿವೆ. ಇಂಥ ದೂರುಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರು ಶಾಲಾ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಿ ಎಲ್ಲ ಶಾಲೆಗಳಲ್ಲಿ ಆಹಾರ ದಾಸ್ತಾನು ಸಮರ್ಪಕವಾಗಿ ನಿರ್ವಹಿಸಿ, ಸ್ವಚ್ಛವಾಗಿ ಇರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಶಾಲೆಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ಆಹಾರಧಾನ್ಯಗಳ ಸ್ವಚ್ಛತೆ ಮತ್ತು ಗುಣಮಟ್ಟದ ನಿರ್ವಹಣೆ ಬಗ್ಗೆ ತಪಾಸಣೆ ನಡೆಸಬೇಕು. ಸುರಕ್ಷತೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಲ್ಲಿ ಮುಖ್ಯಶಿಕ್ಷಕರು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಬೇಕು. ಯಾವುದೇ ಲೋಪದೋಷಗಳು ಉಂಟಾದಲ್ಲಿ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡುವುದಾಗಿ ಪಿ.ಎಂ. ಪೋಷಣ್ ಶಕ್ತಿ ನಿರ್ವಣ್ ಯೋಜನೆಯ ನಿರ್ದೇಶಕಿ ಅನಿತಾ ವಿ. ನಾಜರೆ ಸೂಚಿಸಿ ಜ್ಞಾನಪನಾ ಪತ್ರ ಹೊರಡಿಸಿದ್ದಾರೆ.
ಹೊರಗುತ್ತಿಗೆ ಆಧಾರದಲ್ಲಿ ಕೆಲ ನೌಕರರು ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನೇಮಕಾತಿ ಪ್ರಕ್ರಿಯೆ ನಡೆಯದ ಹಿನ್ನೆಲೆಯಲ್ಲಿ ಇನ್ನುಳಿದ ಹುದ್ದೆಗಳಿಗೆ ಯಾರೂ ಬರುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ದೈನಂದಿನ ಕಾರ್ಯ ಒತ್ತಡದಿಂದ ಕೆಲಸ ಮಾಡುತ್ತಿದ್ದೇವೆ. ಇಲಿ ಮತ್ತು ಹೆಗ್ಗಣಗಳ ಕಾಟವೂ ಹೆಚ್ಚಿದೆ.
| ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸಿಬ್ಬಂದಿ
ಕಲಬೆರಕೆ ತಡೆಗೆ ನಿರ್ಲಕ್ಷ್ಯ: ಹಾಲಿಗೆ ಯೂರಿಯಾ, ಕಾಫಿ ಮತ್ತು ಟೀ ಪುಡಿಗೆ ಮರದ ಹೊಟ್ಟು, ಅಡುಗೆ ಎಣ್ಣೆಗೆ ನಕಲಿ ಎಣ್ಣೆ, ಬೆಣ್ಣೆಗೆ ಕೊಬ್ಬು, ಧಾನ್ಯ ಮತ್ತು ಕಾಳುಗಳಿಗೆ ಬಣ್ಣ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ದಂಧೆಯೂ ಹೆಚ್ಚಿದೆ. ಕರಿದ ಪದಾರ್ಥಗಳಿಗೆ ರುಚಿ ಹೆಚ್ಚಿಸಲು, ಹಣ್ಣು ಮತ್ತು ತರಕಾರಿಗಳನ್ನು ಆಕರ್ಷಕವಾಗಿ ಕಾಣಲು ಅಪಾಯಕಾರಿ ರಾಸಾಯನಿಕ ಅಂಶವನ್ನು ಬಳಸುತ್ತಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಸಿಬ್ಬಂದಿ ಕೊರತೆಯಿಂದ ಪರಿಣಾಮಕಾರಿ ಕಲಬೆರಕೆ ತಡೆಗಟ್ಟಲು ಪ್ರಾಧಿಕಾರ ಮಂಕಾಗಿದೆ. ಕಲಬೆರಕೆ ಆಹಾರಗಳನ್ನು ಪರೀಕ್ಷಿಸಲು ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಆಹಾರ ಪ್ರಯೋಗಾಲಯಗಳಿಗೆ ಹಲವು ವರ್ಷಗಳಿಂದ ರಾಷ್ಟ್ರೀಯ ಮಾನ್ಯತೆ ಮಂಡಳಿಯಿಂದ (ಎನ್ಎಬಿಎಲ್) ಮಾನ್ಯತೆ ಸಿಕ್ಕಿರಲಿಲ್ಲ. ಇದರಿಂದ ಕಲಬೆರಕೆ ಮಾರಾಟಗಾರರ ವಿರುದ್ಧ ಕೇಸ್ ದಾಖಲಿಸಿ ಬಿಗಿ ಕ್ರಮಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗಷ್ಟೇ ಆಹಾರ ಪ್ರಯೋಗಾಲಯಗಳಿಗೆ ಎನ್ಎಬಿಎಲ್ ಸಿಕ್ಕಿದೆ.
ಹೆಗ್ಗಣಗಳ ಕಾಟ: ಬೆಂಗಳೂರಿನ ಕೆ.ಆರ್.ವೃತ್ತದ ಬಳಿ ಇರುವ ಪ್ರಾಧಿಕಾರದ ಆಯುಕ್ತಾಲಯ ಕಚೇರಿಯಲ್ಲಿ ಇಲಿ ಮತ್ತು ಹೆಗ್ಗಣಗಳ ಉಪಟಳ ಹೆಚ್ಚಿದೆ. ಇವುಗಳಿಂದ ಬೇಸತ್ತಿರುವ ನೌಕರರು ದಾಖಲೆ ರಕ್ಷಿಸಿಕೊಳ್ಳಲು ಪರದಾಡುವಂತಾಗಿದೆ. ಸಂಜೆ ಯಾಗುತ್ತಿದ್ದಂತೆ ಸೊಳ್ಳೆ ಕಾಟವೂ ವಿಪರೀತವಾಗಿದೆ. ಅಲ್ಲದೆ, ಭೂತದ ಬಂಗಲೆಯಂತೆ ಕಾಣುತ್ತಿರುವ ಕಚೇರಿಯಲ್ಲಿ ಸಮರ್ಪಕವಾಗಿ ಸೌಕರ್ಯ ಇಲ್ಲದಂತಾಗಿದೆ.