

ಕಳಸ: ಸಮುದಾಯ ಅರೋಗ್ಯ ಕೇಂದ್ರದಲ್ಲಿ ಖಾಲಿ ಹುದ್ದೆಗಳ ಶೀಘ್ರ ನಿಯೋಜನೆ ಹಾಗೂ ಕಳಸ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯಾನಿಸ್ಟ್ ಪಕ್ಷ ದಿಂದ ಸೋಮವಾರ ಕಳಸ ಸರ್ಕಾರಿ ಆಸ್ಪತ್ರೆ ಮುಂಭಾಗ ಧರಣಿ ಆರಂಭಿಸಲಾಗಿದೆ.
ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಆಸ್ಪತ್ರೆಯ ಮುಂಭಾಗ ಧರಣಿ ಆರಂಭಿಸಿದರು.
ಪಕ್ಷದ ಮುಖಂಡ ಲಕ್ಷ್ಮಣಾಚಾರ್ ಮಾತನಾಡಿ, ಕಳಸ ಆಸ್ಪತ್ರೆಯಲ್ಲಿ ನಾಲ್ಕು ಕಾಯಂ ವೈದ್ಯರು ಇರಬೇಕಾಗಿದ್ದು ಇಲ್ಲಿ ಒಬ್ಬರೂ ವೈದ್ಯರಿಲ್ಲ. 39 ಹುದ್ದೆಗಳ ಪೈಕಿ ಕೇವಲ 8 ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಷ್ಟೊಂದು ಸಮಸ್ಯೆ ಇದ್ದರೂ ಕೂಡ ಇತ್ತೀಚೆಗೆ ಇಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ನೌಕರರನ್ನು ಬೇರೆಡೆಗೆ ನಿಯೋಜನೆ ಮಾಡಿದ್ದಾರೆ.
ಆಸ್ಪತ್ರೆಯ ಖಾಲಿ ಹುದ್ದೆಗಳ ನಿಯೋಜನೆ ಮಾಡದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ಈ ಹಿಂದೆಯೇ ಸಚಿವರಿಗೆ, ಶಾಸಕರಿಗೆ, ಉಸ್ತುವಾರಿ, ಕಂದಾಯ ಸಚಿವರಿಗೆ, ಜಿಲ್ಲಾ ಮತ್ತು ತಾಲೂಕು ವೈದ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಆದರೆ ಈ ಬಗ್ಗೆ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡ ಗಮನಹರಿಸಿಲ್ಲ. ಕ್ಷೇತ್ರದ ಶಾಸಕರು ಈ ಬಗ್ಗೆ ಸ್ಪಂದಿಸಿಲ್ಲ.
ಕಳಸ ಆಸ್ಪತ್ರೆಗೆ ಕಾಯಂ ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡಲು ಸಾಧ್ಯವಿಲ್ಲ ಎಂದಾದರೆ ಕ್ಷೇತ್ರದ ಶಾಸಕರು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳು ಸೇರಿ ಆಸ್ಪತ್ರೆಗೆ ಬೀಗ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ವೈದ್ಯಾಧಿಕಾರಿ ಸುಂದರೇಶ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಮೊದಲು ವೈದ್ಯರ ನೇಮಕ ಮಾಡಿ ನಂತರ ಸಂಧಾನಕ್ಕೆ ಬನ್ನಿ. ಇಂದು ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದರೆ ನಾಳೆಯಿಂದ ಪ್ರತಿಭಟನೆ ಬೇರೆ ಸ್ವರೂಪ ಪಡೆದುಕೊಳ್ಳುತ್ತದೆ. ಅದಕ್ಕೆ ಆಸ್ಪದ ಕೊಡಬೇಡಿ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪಕ್ಷದ ತಾಲೂಕು ಕಾರ್ಯದರ್ಶಿ ಗೋಪಾಲ ಶೆಟ್ಟಿ, ಎಐವೈಎ್ ತಾಲೂಕು ಅಧ್ಯಕ್ಷ ಮೋಹನ್ ಹಿರೇಬೈಲು, ಮುಖಂಡರಾದ ರಮೇಶ್ ಕೆಳಗೂರು, ಗೋಪಾಲ ಹಡ್ಲು, ಸುಂದರ, ತನಿಯಪ್ಪ, ಆನಂದ ಹಿರೇಬೈಲು, ಬೇಬಿ, ವಸಂತಿ, ಜಯಂತಿ, ಸೀನಾ, ಅಣ್ಣಪ್ಪ, ಕೃಷ್ಣಪ್ಪ, ಮಂಜನಾಯ್ಕ ಇತರರಿದ್ದರು.