

ಬೆಂಗಳೂರು: ದೇಶದ ಐದು ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿಯಲ್ಲಿ ಅನುಮೋದನೆ ನೀಡಲು ಶಿಾರಸು ಮಾಡಲಾಗಿದೆ. ಅದರಲ್ಲಿ ಬೆಂಗಳೂರಿನ "ನಮ್ಮ ಮೆಟ್ರೋ' ಮೂರನೇ ಹಂತವೂ ಸೇರಿದೆ.
ಮೇಘಾಲಯ, ಗೋವಾ ಮತ್ತು ಅಸ್ಸಾಂನ ಹೆದ್ದಾರಿ ಯೋಜನೆಗಳು, ಬಿಹಾರದ ರೈಲ್& ಓವರ್& ರೈಲ್ ಬಲ್ಬ್ ಲೈನ್ ನಿರ್ಮಾಣ, ಬೆಂಗಳೂರು ಮತ್ತು ದೆಹಲಿ/ ಎನ್ಸಿಆರ್ನಲ್ಲಿ ನಗರ ಮೆಟ್ರೋ ಸಾರಿಗೆ ಯೋಜನೆಗಳ ವಿವರಗಳನ್ನು ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲ್ಯಾನ್ (ಎನ್ಎಂಪಿ) ಮ್ಯಾಪಿಂಗ್ ಆಧರಿಸಿ ಪರಿಶೀಲಿಸಲಾಗಿದೆ. 65ನೇ ನೆಟ್ವರ್ಕ್ ಪ್ಲ್ಯಾನಿಂಗ್ ಗ್ರೂಪ್ (ಎನ್ಪಿಜಿ) ಸಭೆಯಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಬಳಿಕ ಅನುಮೋದನೆಗೆ ಶಿಾರಸು ಮಾಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡಲು ಸಮಗ್ರ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಯೋಜನೆಯನ್ನು ಎನ್ಪಿಜಿ ಆರಂಭಿಸಿದೆ. 500 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಹೊಂದಿರುವ ಯೋಜನೆಗಳಿಗೆ ಸಾರ್ವಜನಿಕ ಹೂಡಿಕೆ ಮಂಡಳಿ ಅಥವಾ ಹಣಕಾಸು ಸಚಿವಾಲಯದ ಅಡಿಯಲ್ಲಿ ವೆಚ್ಚ ಇಲಾಖೆಯಿಂದ ಅನುಮತಿ ನೀಡುವ ಮೊದಲು ಎನ್ಪಿಜಿಯ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರ (32.15 ಕಿ.ಮೀ.), ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆ (12 ಕಿ.ಮೀ.) ಹಾಗೂ ಸರ್ಜಾಪುರದಿಂದ ಹೆಬ್ಬಾಳವರೆಗೆ (37 ಕಿ.ಮೀ.) ಮೂರು ಕಾರಿಡಾರ್ಗಳನ್ನು ಹೊಂದಿದೆ. ಒಟ್ಟು 81.15 ಕಿ.ಮೀ. ಉದ್ದದ ಈ ಮಾರ್ಗ ನಿರ್ಮಾಣ ಕಾಮಗಾರಿ ವರ್ಷಾಂತ್ಯದೊಳಗೆ ಆರಂಭವಾಗುವ ಸಾಧ್ಯತೆ ಇದೆ.