

ಬೆಂಗಳೂರು: ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ಕರ್ನಾಟಕ ಹಲವಾರು ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂದು ಬೀಗುವ ರಾಜ್ಯ ಸರ್ಕಾರ, ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಒದಗಿಸುವಲ್ಲಿ ವಿಫಲವಾಗಿದೆ. ಜಿಲ್ಲಾ ಹಾಗೂ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿರುವ ಅರ್ಧಕ್ಕರ್ಧ ಡಯಾಲಿಸಿಸ್ ಯಂತ್ರಗಳ ಕಾರ್ಯ ಸ್ಥಗಿತಗೊಂಡಿರುವ ಪರಿಣಾಮ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿರುವುದು ವಿಜಯವಾಣಿ ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದೆ. ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿನ ಡಯಾಲಿಸಿಸ್ ಕೇಂದ್ರಗಳು ಹಾಗೂ ಅಲ್ಲಿನ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದಾಗಿ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳೇ ದಿಕ್ಕಾಗಿದೆ. ಆದರೆ ಆರ್ಥಿಕ ಸಂಕಷ್ಟದಲ್ಲಿರುವವರು ಖಾಸಗಿ ಆಸ್ಪತ್ರೆ ಮೆಟ್ಟಿಲೇರಲಾಗದೆ ನೋವಿನಲ್ಲೇ ದಿನ ದೂಡುತ್ತಿದ್ದಾರೆ. ಮತ್ತೊಂದೆಡೆ ಖಾಸಗಿ ಸಹಭಾಗಿತ್ವದಲ್ಲಿ
ನಡೆಯುತ್ತಿರುವ ಬಹುತೇಕ ಕೇಂದ್ರಗಳಲ್ಲಿ 2 ತಿಂಗಳಿಂದ ಸಿಬ್ಬಂದಿಗೆ ವೇತನವನ್ನೇ ನೀಡದಿರುವುದರಿಂದ ರೋಗಿಗಳಿಗೆ ಚಿಕಿತ್ಸೆಯ ಮೇಲೆ ಪರಿಣಾಮ ಬೀರಿದೆ. ಬೆಂಗಳೂರು ಸೇರಿದಂತೆ ಬಹುತೇಕ ಕೇಂದ್ರಗಳಲ್ಲಿ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳ ದುರಸ್ತಿ ಕಾರ್ಯವೂ ಆಗದೆ ರೋಗಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಇದರಿಂದ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಪ್ರಮುಖವಾಗಿ ಜಿಲ್ಲಾ ಆಸ್ಪತ್ರೆಗಳ ಡಯಾಲಿಸಿಸ್ ಘಟಕಗಳಲ್ಲಿನ ಸೌಲಭ್ಯ ಹಾಗೂ ಸೇವೆಯ ಕೊರತೆಯಿಂದಾಗಿ ರೋಗಿಗಳು ಬೆಂಗಳೂರಿನತ್ತ ಬರುವ ಸ್ಥಿತಿ ಇದೆ.
ನೆಫ್ರೋ ಮೇಲೆ ಹೆಚ್ಚಿದ ಒತ್ತಡ: ಬೆಂಗಳೂರಿನಲ್ಲಿ ಕಿಡ್ನಿ ಚಿಕಿತ್ಸೆಗೆ ಹೆಸರಾಗಿರುವ ಸರ್ಕಾರಿ ಸ್ವಾಮ್ಯದ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ನಿತ್ಯ ಸಾವಿರಾರು ರೋಗಿಗಳು ಹೊರರೋಗಿಗಳಾಗಿ ಹಾಗೂ ನೂರಾರು ರೋಗಿಗಳು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಸ್ಥೆಯಲ್ಲಿ 40 ಡಯಾಲಿಸಿಸ್ ಯಂತ್ರಗಳಿದ್ದು, 24 ಗಂಟೆಗಳ ಕಾಲ ನಿರಂತರ ಸೇವೆ ಒದಗಿಸುತ್ತಿದೆ. ನಿತ್ಯ 90 ಮಂದಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಆದಾಗಿಯೂ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಆಯಾ ಜಿಲ್ಲೆಯ ಜಿಲ್ಲಾ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಲು ಸೂಚಿಸಲಾಗುತ್ತಿದೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಾಧಿಕಾರಿಗಳು. ಇನ್ನು ಬೌರಿಂಗ್ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ 6 ಯಂತ್ರಗಳಿದ್ದು, ನಿತ್ಯ 14-16 ಮಂದಿಗೆ ಸೇವೆ ನೀಡಲಾಗುತ್ತಿದ್ದು, ಇಲ್ಲಿ ಒತ್ತಡ ಹೆಚ್ಚಾದರೆ ಅವರನ್ನೂ ನೆಫ್ರೋ ಯುರಾಲಜಿ ಸಂಸ್ಥೆಗೆ ರೆಫರ್ ಮಾಡಲಾಗುವುದು ಎನ್ನುತ್ತಾರೆ ವೈದ್ಯರು.
ಕಾಡುತ್ತಿದೆ ಸಾಮಗ್ರಿ ಕೊರತೆ: ಬಾಗಲಕೋಟೆ, ದಾವಣಗೆರೆ, ಕಾರವಾರ, ಚಿತ್ರದುರ್ಗ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ, ಕೊಡಗು, ಗದಗ, ಬಳ್ಳಾರಿ, ರಾಯಚೂರು, ಕೋಲಾರ, ಕಲಬುರಗಿ, ಬೆಳಗಾವಿ, ವಿಜಯಪುರ, ಕೊಪ್ಪಳ, ಯಾದಗಿರಿ, ಬೀದರ್ ಸೇರಿದಂತೆ ಬಹುತೇಕ ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಔಷಧ ಹಾಗೂ ಕೆಲ ವೈದ್ಯಕೀಯ ಉಪಕರಣಗಳ ಕೊರತೆ ಎದುರಾಗಿದ್ದು, ರೋಗಿಗಳೇ ಖರೀದಿಸಿ ತರಬೇಕಾಗಿದೆ. ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವವರು 3 ರಿಂದ 4,500 ರೂ. ವರೆಗೆ ಖರ್ಚು ಮಾಡಬೇಕಿದೆ. ಹೀಗಾಗಿ ಬಡವರು ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ ಎನ್ನುವುದು ರೋಗಿಗಳ ಆಳಲು. ಕೆಲವೆಡೆ ಯಂತ್ರಗಳ ಕೊರತೆ ಇದೆ.
ಬೆಳಗಾವಿ: ಈವರೆಗೆ ಬಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಪ್ರತಿದಿನ 70 ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆ ಮಾಡಲಾಗುತ್ತಿತ್ತು; ಈಗ 10 ಯಂತ್ರಗಳಲ್ಲಿ 8 ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಎರಡು ದುರಸ್ತಿಯಲ್ಲಿದ್ದು, ಚಿಕಿತ್ಸೆಗೆ ಸಮಸ್ಯೆ.
ಕಲಬುರಗಿ: ಡಯಾಲಿಸಿಸ್ ಕೇಂದ್ರದಲ್ಲಿ 13 ಬೆಡ್ಗಳ ವ್ಯವಸ್ಥೆ ಇದೆ. ಆದರೆ ಸಕಾಲಕ್ಕೆ ಅಗತ್ಯ ಸಾಮಗ್ರಿ ಪೂರೈಕೆ ಆಗ್ತಿಲ್ಲ; ಸಿಬ್ಬಂದಿ ರೋಗಿಗಳಿಗೆ ಹೊರಗಡೆಯಿಂದ ಸಾಮಗ್ರಿ ತರಲು ಹೇಳುತ್ತಿದ್ದಾರೆ, ತಾಲೂಕು ಕೇಂದ್ರಗಳಲ್ಲಿ ಸಮಸ್ಯೆ ಹೆಚ್ಚಿದೆ.
ಯಾದಗಿರಿ: ಜಿಲ್ಲಾಸ್ಪತ್ರೆಗೆ 10 ಬೆಡ್ಗಳ ಡಯಾಲಿಸಿಸ್ ಘಟಕ ಮಂಜೂರಾದರೂ ಸದ್ಯ ಇರುವುದು 5 ಬೆಡ್ ಮಾತ್ರ; ಯಂತ್ರ ಕೆಟ್ಟು ತಿಂಗಳು ಕಳೆದಿದೆ.
ಬೀದರ್: ಬ್ರಿಮ್ಸ್ ಆಸ್ಪತ್ರೆಯಲ್ಲಿ 8 ಬೆಡ್ಗಳ ಡಯಾಲಿಸಿಸ್ ಘಟಕ ಇದೆ. 9 ಯಂತ್ರಗಳಿದ್ದು, ಇದರಲ್ಲಿ ಎರಡು ಕೆಟ್ಟಿವೆ.
ಕೊಪ್ಪಳ: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಇಲ್ಲೇ ನೀಡಿದ್ದರಿಂದ ಡಯಾಲಿಸೀಸ್ ರೋಗಿಗಳಿಗೆ ಸಮಸ್ಯೆಗಳಾದವು. ಸೋಂಕು ಇಳಿಕೆಯಾದ ಬಳಿಕವೂ ಸಮಸ್ಯೆ ಮುಂದುವರಿದಿವೆ. ಕೆಲ ಇಂಜೆಕ್ಷನ್ ಹೊರಗಿಂದ ತರಿಸುತ್ತಾರೆ.
ಗದಗ: ಜಿಮ್ಸ್ನಲ್ಲಿ ನಿತ್ಯ ಕನಿಷ್ಠ 20-22 ರೋಗಿಗಳಿಗೆ ಚಿಕಿತ್ಸೆ, ಶಿಫಾರಸು ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ಬೇಗನೆ ಸಿಗುತ್ತದೆ ಎಂಬ ಆರೋಪವೂ ಇದೆ.
ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ 58 ಜನರು ಡಯಾಲಿಸಿಸ್ಗೆ ನೋಂದಣಿಯಾಗಿದ್ದು, ಎಲ್ಲರಿಗೂ ಸಕಾಲದಲ್ಲಿ ಸಿಗುತ್ತಿದೆ; ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಯಂತ್ರವಿದ್ದರೂ ಡೀಸೆಲ್ ಇಲ್ಲ ಎಂಬ ನೆಪ; ತಾಲೂಕು ಕೇಂದ್ರಗಳಲ್ಲಿ ವಿದ್ಯುತ್, ಜನರೇಟರ್ ಸಮಸ್ಯೆ ಇದೆ.
ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ಗಳ ಡಯಾಲಿಸಿಸ್ ಕೇಂದ್ರವಿದ್ದು, ದಿನಕ್ಕೆ 3 ಸರದಿಯಲ್ಲಿ ಚಿಕಿತ್ಸೆ; ತಿಂಗಳಿಗೆ 90 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 50 ರೋಗಿಗಳು ಸೇವೆಗಾಗಿ ಕಾಯುತ್ತಿದ್ದಾರೆ; ಕಾರ್ಕಳದಲ್ಲಿ 2, ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿಗೆ ವೇತನ ನೀಡಿಲ್ಲ.
ಬಳ್ಳಾರಿ: ಜಿಲ್ಲಾಸ್ಪತ್ರೆ ಮತ್ತು ವಿಮ್ಸ್ನಲ್ಲಿ ಸಕಾಲಕ್ಕೆ ಡಯಾಲಿಸಿಸ್ ಚಿಕಿತ್ಸೆ ದೊರೆಯುತ್ತಿಲ್ಲ. ಸಿಬ್ಬಂದಿ ಕೊರತೆ ಇದೆ; ಯಂತ್ರಗಳ ದುರಸ್ತಿ ಇರುವುದರಿಂದ ರೋಗಿಗಳು ಖಾಸಗಿಯತ್ತ ಮುಖ ಮಾಡುತ್ತಿದ್ದಾರೆ.
ರಾಯಚೂರು: ರಿಮ್ಸ್ನಲ್ಲಿ ಡಯಾಲಿಸಿಸ್ ಯಂತ್ರಕ್ಕೆ ಬೇಕಾದ ಎಫ್6 ಡಯಾಲಜರ್ ಕೊರತೆ ಉಂಟಾಗಿತ್ತು. ಈಗ ಸರಿ ಇದೆ.
ಮಂಡ್ಯ: ಮಿಮ್ಸ್ನಲ್ಲಿ 19 ಡಯಾಲಿಸಿಸ್ ಯಂತ್ರಗಳಿವೆ. ಈ ಪೈಕಿ ಜಾಗಕ್ಕೆ ಸರಿ ಹೊಂದುವಂತೆ 17 ಯಂತ್ರ ಹಾಕಿದೆ
ಕೊಡಗು: ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಸ್ಥಗಿತಗೊಂಡಿದೆ. ಇಲ್ಲಿ 80 ಜನ ಚಿಕಿತ್ಸೆ ಪಡೆಯುತ್ತಿದ್ದರು. ವಿರಾಜಪೇಟೆ ಘಟಕದಲ್ಲಿ ಪ್ರತಿನಿತ್ಯ 12 ಜನ ಚಿಕಿತ್ಸೆ
ಶಿವಮೊಗ್ಗ: ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಸೇವೆ ಸಿಗುತ್ತಿದೆ
ಮೈಸೂರು: ಡಯಾಲಿಸಿಸ್ಗಾಗಿ ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ಘಟಕ ಆರಂಭಿಸಿದ್ದು, ಸಮಸ್ಯೆ ಇಲ್ಲ
ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ 12 ಯಂತ್ರದಲ್ಲಿ 11 ಚಾಲ್ತಿಯಲ್ಲಿವೆ. 92 ಮಂದಿ ಸೇವೆ ಪಡೆಯುತ್ತಿದ್ದಾರೆ. ಡಯಾಲಿಸಿಸ್ಗೆ ಬೇಡಿಕೆ ಹೆಚ್ಚಿದ್ದು ಮುಂದಿನ ವರ್ಷದಲ್ಲಿ 25 ಹಾಸಿಗೆ ಹೆಚ್ಚಿಸಲು ಯೋಜನೆ
ಹಾಸನ: ಹಿಮ್ಸ್ ಆಸ್ಪತ್ರೆಯಲ್ಲಿ 16 ಡಯಾಲಿಸಿಸ್ ಯಂತ್ರಗಳಿದ್ದು ಸದ್ಯ ನಿತ್ಯವೂ 31 ಜನರಿಗೆ ಚಿಕಿತ್ಸೆ; ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿನ ಐದು ಯಂತ್ರಗಳಲ್ಲಿ 2 ಯಂತ್ರಗಳು ಕೆಟ್ಟು ತಿಂಗಳಾಯ್ತು
ಚಾಮರಾಜನಗರ: ಕೊಳ್ಳೇಗಾಲದ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡುವ ಸಿಬ್ಬಂದಿಗೆ ಸಂಬಳ ನೀಡಿಲ್ಲ ಎಂದು ಕೆಲಸ ಸ್ಥಗಿತ
ರಾಮನಗರ: ಘಟಕಗಳ ನಿರ್ವಹಣೆ ಮತ್ತು ಚಿಕಿತ್ಸೆ ಕೊಡುವ ಜವಾಬ್ದಾರಿ ಹೊತ್ತಿದ್ದ ಸಂಸ್ಥೆಗೆ ಸರ್ಕಾರ ಹಣ ಕೊಟ್ಟಿಲ್ಲ; ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಇಲ್ಲದ ಕಾರಣ ಆರೋಗ್ಯ ಇಲಾಖೆಯಿಂದಲೂ ನಿರ್ವಹಣೆ ಸಾಧ್ಯವಾಗುತ್ತಿಲ್ಲ.
ಕೋಲಾರ: ಎಲ್ಲಾ ಆಸ್ಪತ್ರೆಯಲ್ಲಿ 10 ಡಯಾಲಿಸಿಸ್ ಯಂತ್ರಗಳಲ್ಲಿ 3 ಕೆಲಸ ಮಾಡುತ್ತಿವೆ. 6 ಯಂತ್ರಗಳು ಕೆಟ್ಟಿವೆ; ಕೇಂದ್ರಕ್ಕೆ ಕಾಯಂ ಆಗಿ ತಜ್ಞ ವೈದ್ಯರೊಬ್ಬರು ಇರಬೇಕು, ಇಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಟ; ತಾಲೂಕು ಕೇಂದ್ರಗಳಲ್ಲೂ ತಲಾ 2 ಯಂತ್ರಗಳಿದ್ದರೂ ಸಿಬ್ಬಂದಿ ಕೊರತೆ ಇದೆ.
ಚಿಕ್ಕಬಳ್ಳಾಪುರ: ತಾಂತ್ರಿಕ ಸಿಬ್ಬಂದಿ ಗೈರು, ತಾಂತ್ರಿಕ ಸಮಸ್ಯೆ ಹೆಸರಿನಲ್ಲಿ ರೋಗಿಗಳನ್ನು ಅಲೆದಾಡಿಸುತ್ತಾರೆ; ಸ್ವಲ್ಪ ಹಣ ಕೊಟ್ಟರೆ ಸೇವೆ ಒದಗಿಸುವ ಆರೋಪಗಳು ಸಾಮಾನ್ಯವಾಗಿವೆ.
ದಕ್ಷಿಣಕನ್ನಡ: ರೋಗಿಗಳ ಸಂಖ್ಯೆ ಹೆಚ್ಚು ಇರುವ ಹಿನ್ನೆಲೆಯಲ್ಲಿ ಘಟಕಗಳ ಕೊರತೆ ಕಾಡುತ್ತಿದೆ.
ಉತ್ತರ ಕನ್ನಡ: ನಿರ್ವಹಣೆ ಜವಾಬ್ದಾರಿ ಗೊಂದಲದ ಕಾರಣ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಡಯಾಲಿಸಿಸ್ಗೆ ಬೇಕಾದ ಗ್ಲೌಸ್, ಇಂಜೆಕ್ಷನ್ ಸೇರಿ ಬೇಕಾದ ಸಾಮಗ್ರಿಗಳು ಪೂರೈಕೆಯಾಗುತ್ತಿಲ್ಲ.
ದಾವಣಗೆರೆ: ಏಜೆನ್ಸಿಯವರು ಬಿಟ್ಟು ಹೋಗಿದ್ದರಿಂದ ಸಮಸ್ಯೆ. ರೋಗಿಗಳಿಗೆ ತೃಪ್ತಿಕರ ಸೇವೆ ದೊರೆಯುತ್ತಿಲ್ಲ. ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಟ್ಯೂಬ್ ಅನ್ನು ಹೊರಗಿನಿಂದ ತರುವಂತೆ ಹೇಳುತ್ತಾರೆ.
ಬಾಗಲಕೋಟೆ: ಡಯಾಲಿಸಿಸ್ಗೆ ಅಗತ್ಯವಿರುವ ಶುದ್ಧ ನೀರು ಸಮರ್ಪಕವಾಗಿ ಒದಗಿಸುತ್ತಿಲ್ಲ. ಆಗಾಗ ಕೈ ಕೊಡುವ ಯಂತ್ರಗಳನ್ನು ಸಕಾಲಕ್ಕೆ ದುರಸ್ತಿಗೊಳಿಸುತ್ತಿಲ್ಲ.