ಹತ್ತು ತಿಂಗಳ ಮಗು ಅನುಮಾನಾಸ್ಪದ ಸಾವು; ತಾಯಿ-ತಂದೆಯಿಂದ ಪರಸ್ಪರ ಕೊಲೆ ಆರೋಪ!

Untitled-1
Published on

ಧಾರವಾಡ: ಹತ್ತು ತಿಂಗಳ ಮಗುವೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ತಾಯಿ-ತಂದೆಯಿಂದ ಪರಸ್ಪರ ಕೊಲೆ ಆರೋಪ ವ್ಯಕ್ತವಾಗಿದೆ. ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ತನ್ವೀರ್ ಅಗಸಿಮನಿ ಎಂಬ ಹತ್ತು ತಿಂಗಳ ಮಗು ಸಾವಿಗೀಡಾಗಿದೆ.

ತಂದೆ ಮಹಮದ್​ ಅಲಿ ಹಾಗೂ ತಾಯಿ ಸಮ್ರೀನ್​ ಮಗುವಿನ ಸಾವಿನ ಕುರಿತಂತೆ ಪರಸ್ಪರ ಆರೋಪ ಹೊರಿಸುತ್ತಿದ್ದಾರೆ. ನಿನ್ನೆ ಏಕಾಏಕಿ ಅಸ್ವಸ್ಥಗೊಂಡಿದ್ದ ಮಗುವನ್ನು ಜಿಲ್ಲಾಸ್ಪತ್ರೆಗೆ ತರುವಷ್ಟರಲ್ಲಿ ಅದು ಮೃತಪಟ್ಟಿತ್ತು. ಮಗುವಿನ ಶವದಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ವಿಷಪ್ರಾಶನ ಮಾಡಿಸಿರುವ ಶಂಕೆಯೂ ಮೂಡಿದೆ.

ತಂದೆ-ತಾಯಿಯ ಜಗಳದಿಂದಾಗಿ ಮಗುವಿನ ಶವ ಜಿಲ್ಲಾಸ್ಪತ್ರೆಯ ಶವಗಾರದಲ್ಲೇ ಉಳಿದಿದೆ. ಪ್ರಕರಣ ಧಾರವಾಡ ಗ್ರಾಮೀಣ ಪೊಲೀಸ್​ ಠಾಣೆ ಮೆಟ್ಟಿಲನ್ನೇರಿದ್ದು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಂದೆ-ತಾಯಿ ಇಬ್ಬರನ್ನೂ ವಿಚಾರಣೆ ನಡೆಸುತ್ತಿರುವ ಪೊಲೀಸರು, ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಎಫ್​ಎಸ್​ಎಲ್​ಗೆ ಕಳಿಸಲು ನಿರ್ಧರಿಸಿದ್ದಾರೆ. ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net