ತಂತ್ರಜ್ಞರ 'ಕಬ್ಜ'ದಲ್ಲಿ ಉಪೇಂದ್ರ; ಸಿನಿಮಾ ಬಗ್ಗೆ ಮಾತು ಮಂಥನ

Upendra
Published on
‘ಇದು ಒನ್​ವ್ಯಾನ್ ಶೋ ಅಲ್ಲ. ಇದೊಂದು ತಂತ್ರಜ್ಞರ ಸಿನಿಮಾ. ಅದರಲ್ಲೂ ನಿರ್ದೇಶಕ ಚಂದ್ರು ಅವರ ಕನಸು ...’ ಉಪೇಂದ್ರ ಪದೇಪದೇ ಹೇಳುತ್ತಲೇ ಹೋದರು. ‘ಕಬ್ಜ’ ಬರೀ ತಮ್ಮ ಚಿತ್ರ ಅಲ್ಲ, ತಂತ್ರಜ್ಞನರ ಸಿನಿಮಾ ಎಂದು ಪುನರುಚ್ಛರಿಸಿದರು. ಇದು ಒನ್​ವ್ಯಾನ್ ಶೋ ಅಲ್ಲ ಎಂದು ಅವರು ಹೇಳಿದರೂ, ಆ ದಿವಸ ಅದು ಒನ್​ವ್ಯಾನ್ ಶೋನೇ ಆಗಿತ್ತು. ಏಕೆಂದರೆ, ವೇದಿಕೆಯಲ್ಲಿ ಇದ್ದಿದ್ದು ಅವರೊಬ್ಬರೇ. ಚಿತ್ರತಂಡದವರೆಲ್ಲ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರಿಂದ, ಉಪೇಂದ್ರ ಒಬ್ಬರೇ ಮಾತನಾಡಿದರು. ಸಿನಿಮಾ ಮೂಡಿಬಂದ ರೀತಿ, ಮಾರುಕಟ್ಟೆ, ಕರೊನಾ ನಂತರ ಆದ ಬದಲಾವಣೆಗಳು ... ಹೀಗೆ ಹಲವು ವಿಷಯಗಳನ್ನು ಹಂಚಿಕೊಂಡರು.

| ಚೇತನ್ ನಾಡಿಗೇರ್ ಬೆಂಗಳೂರು

ಒಂದು ಪೈಸೆಯಷ್ಟೂ ಪಾಲಿಲ್ಲ ...

ಉಪೇಂದ್ರ ನಿರ್ದೇಶಕರೂ ಆಗಿರುವುದರಿಂದ ಅವರು ನಟನಾಗಿ ಅಭಿನಯಿಸುವ ಚಿತ್ರಗಳಲ್ಲೂ ಅವರ ಕೈವಾಡ ಇರುತ್ತದೆ ಎಂಬ ನಂಬಿಕೆ ಇದೆ. ಆದರೆ, ಈ ಚಿತ್ರದಲ್ಲಿ ಒಂದು ಪೈಸೆಯಷ್ಟೂ ತಮ್ಮ ಕೈವಾಡವಿಲ್ಲ ಎನ್ನುತ್ತಾರೆ ಅವರು. ‘ಚಂದ್ರು ಈ ಕಥೆ ಹೇಳಿದಾಗಲೇ, ಅವರು ಹೇಗೆ ಚಿತ್ರ ಮಾಡುತ್ತಾರೆ ಎಂಬ ಕುತೂಹಲವಿತ್ತು ಏಕೆಂದರೆ, ಇದೊಂದು ಬೇರೆ ಕಾಲಘಟ್ಟದ ಚಿತ್ರವಷ್ಟೇ ಅಲ್ಲ, ಬಜೆಟ್ ಮತ್ತು ಸೆಟಪ್ ಎರಡೂ ದೊಡ್ಡದು. ಅದೊಂದು ಅದ್ಭುತವಾದ ಲೋಕ. ಹಾಗಾಗಿ, ಹೇಗೆ ಮಾಡ್ತೀರಾ? ಎಂದು ಕೇಳಿದೆ. ಫೋಟೋಶೂಟ್​ಗೆ ಹೋದಾಗ ನಂಬಿಕೆ ಬಂತು. ಚಂದ್ರು ಒಂದು ಅದ್ಭುತವಾದ ಲೋಕವನ್ನು ಸೃಷ್ಟಿಸಿದ್ದರು. ಇದು ಅವರ ಕನಸು. ಆ ಕನಸಿಗೆ ಸಪೋರ್ಟ್ ಮಾಡಿಕೊಂಡು ಬಂದೆ. ಇದೊಂದು ತಂತ್ರಜ್ಞರ ಸಿನಿಮಾ. ಛಾಯಾಗ್ರಹಣ, ಸಂಗೀತ, ಸಂಕಲನ, ಕಲಾ ನಿರ್ದೇಶನ, ಗ್ರಾಫಿಕ್ಸ್ ಕೊಡುಗೆ ಜಾಸ್ತಿ ಇದೆ. ಎಲ್ಲರೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಈಗಾಗಲೇ ಟ್ರೇಲರ್ ನೋಡಿದವರು ಮೆಚ್ಚಿ ಮಾತನಾಡಿದ್ದಾರೆ. ದೆಹಲಿ, ಕೊಲ್ಕತ್ತಾದಿಂದೆಲ್ಲ ಫೋನ್ ಮಾಡುತ್ತಿದ್ದಾರೆ’ ಎನ್ನುತ್ತಾರೆ ಉಪೇಂದ್ರ.

ಇದು ಚಂದ್ರು ಕನಸು ...

‘ಕಬ್ಜ’ ಉಪೇಂದ್ರ ಅವರ ವೃತ್ತಿಜೀವನದಲ್ಲೇ ದೊಡ್ಡ ಸಿನಿಮಾ. ಅಷ್ಟೇ ಅಲ್ಲ, ಅವರು ಹೆಚ್ಚು ಸಮಯ ತೊಡಗಿಸಿ ಕೊಂಡ ಚಿತ್ರವೂ ಹೌದು. ಈ ಕುರಿತು ಮಾತನಾಡುವ ಅವರು, ‘ಈ ಚಿತ್ರಕ್ಕೆ 140 ದಿನ ಡೇಟ್ಸ್ ಕೊಟ್ಟಿದ್ದೇನೆ. ಚಿತ್ರ ಸುಮ್ಮನೆ ತಡವಾಗಿಲ್ಲ. ಕರೊನಾ, ಎರಡು ಲಾಕ್​ಡೌನ್, ಡೇಟ್ಸ್ ಸಮಸ್ಯೆ ... ಹೀಗೆ ಹಲವು ಕಾರಣಗಳಿವೆ. ಇನ್ನು, ಇದು ದೊಡ್ಡ ಸ್ಕೇಲ್​ನ ಸಿನಿಮಾ. ಎಷ್ಟೋ ಬಾರಿ ಬೆಳಗ್ಗೆಯೇ ಎದ್ದು ಚಿತ್ರೀಕರಣಕ್ಕೆ ಹೋಗಿದ್ದರೂ, ನನ್ನ ಭಾಗದ ಚಿತ್ರೀಕರಣ ಶುರುವಾಗುತ್ತಿದ್ದೇ ಮಧ್ಯಾಹ್ನದ ಮೇಲೆ. ಆದರೆ, ನನಗೆ ಯಾವತ್ತೂ ಬೇಸರವಾಗಲಿಲ್ಲ. ಪ್ರತಿದಿನವನ್ನೂ ಎಂಜಾಯ್ ಮಾಡಿದ್ದೇನೆ. ಅದಕ್ಕೆ ಕಾರಣ, ಇದು ಚಂದ್ರು ಅವರು ಕನಸು, ಇದು ಸಂಪೂರ್ಣ ಅವರ ಕಲ್ಪನೆ’ ಎನ್ನುತ್ತಾರೆ ಉಪೇಂದ್ರ.

ಮೊದಲು ಕೆಲಸ ಮಾಡಬೇಕು ...

ಚಿತ್ರರಂಗದಲ್ಲಾಗಿರುವ ಬದಲಾವಣೆ ಮತ್ತು ಬೆಳವಣಿಗೆಗಳ ಕುರಿತು ಮಾತನಾಡುವ ಅವರು, ‘ಮುಂಚೆ ಒಂದು ಚಿತ್ರ ಹಿಟ್ ಆದರೆ, ಅದನ್ನು ಬೇರೆ ಭಾಷೆಗೆ ರಿಮೇಕ್ ಅಥವಾ ಡಬ್ ಮಾಡಲಾಗುತ್ತಿತ್ತು. ಈಗ ಒಂದು ಚಿತ್ರ ಬಿಡುಗಡೆಯಾಗಿ, ಗೆಲ್ಲಲೇಬೇಕು ಅಂತಿಲ್ಲ. ಟ್ರೇಲರ್ ಯಶಸ್ವಿಯಾದರೆ ಸಾಕು, ಅಲ್ಲಿಂದಲೇ ಮಾರ್ಕೆಟಿಂಗ್ ಶುರುವಾಗುತ್ತದೆ. ನಾವು ಒಂದು ಚಿತ್ರವನ್ನು ಕೂತು ಮಾರ್ಕೆಟಿಂಗ್ ಮಾಡೋಕೆ ಆಗಲ್ಲ. ಮೊದಲು ಸಿನಿಮಾ ಮಾತಾಡಬೇಕು. ಆಗ ಎಲ್ಲವೂ ತನ್ನಿಂತಾನೇ ಆಗುತ್ತದೆ. ಒಂದು ಚಿತ್ರದ ಟ್ರೇಲರ್ ಜನರಿಗೆ ಇಷ್ಟವಾದರೆ, ಬಿಜಿನೆಸ್ ಆಗುತ್ತದೆ. ಹಾಗಾಗಿ ಮೊದಲು ನಮ್ಮ ಕೆಲಸ ಮಾತಾಡಬೇಕು’ ಎಂಬುದು ಉಪೇಂದ್ರ ಅವರ ಅಭಿಪ್ರಾಯ.

ಹೋಲಿಕೆಯೇ ಸರಿಯಲ್ಲ ...

ಕನ್ನಡ ಚಿತ್ರರಂಗ ಏರುಗತಿಯಲ್ಲಿದೆ, ಒಳ್ಳೆಯ ಸಿನಿಮಾಗಳು ಬರುತ್ತಿವೆ ಎಂಬೆಲ್ಲ ಮಾತುಗಳನ್ನು ಉಪೇಂದ್ರ ಒಪು್ಪವುದಿಲ್ಲ. ‘ಹಿಂದೆಯೂ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದರು. ಆಗಲೂ ಏಳು ಬೀಳುಗಳು ಇದ್ದವು. ಕೆಲವರು ಅದ್ಭುತ ಸಿನಿಮಾಗಳು ಮಾಡಿದ್ದಾರೆ. ಅವೆಲ್ಲ ಬೇರೆ ಭಾಷೆಗಳಿಗೆ ಡಬ್, ರಿಮೇಕ್ ಆಗುತ್ತಿದ್ದವು. ಪ್ಯಾನ್ ಇಂಡಿಯಾ ತರಹ ಅವೆಲ್ಲವೂ ಒಟ್ಟಿಗೆ ಬಿಡುಗಡೆ ಆಗದಿರಬಹುದು. ಆ ಚಿತ್ರಗಳಿಗೆ ಹೋಲಿಸೋದು ಕಷ್ಟ. ಅದನ್ನು ನೋಡಿದರೆ, ನಾವು ಏನು ಮಾಡುತ್ತಿದ್ದೇವೆ ಅಂತ ಒಮ್ಮೊಮ್ಮೆ ಅನಿಸುತ್ತದೆ. ಸಿಂಗೀತಂ ಶ್ರೀನಿವಾಸ ರಾವ್, ಪುಟ್ಟಣ್ಣ, ಸಿದ್ಧಲಿಂಗಯ್ಯ, ರಾಜೇಂದ್ರ ಸಿಂಗ್ ಬಾಬು, ಡಿ. ರಾಜೇಂದ್ರ ಬಾಬು ಎಲ್ಲರೂ ಅದ್ಭುತ ಸಿನಿಮಾಗಳನ್ನು ಮಾಡಿದ್ದರು. ಈಗ ಯೋಗರಾಜ್ ಭಟ್, ಸೂರಿ ಎಲ್ಲ ಒಳ್ಳೆಯ ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ, ಹೋಲಿಕೆ ಸರಿಯಲ್ಲ’ ಎನ್ನುವುದು ಉಪೇಂದ್ರ ಅಭಿಪ್ರಾಯ.

ಪ್ಲಾನ್ ಮಾಡಿದ್ದು ಪ್ರಜಾಕೀಯ ಮಾತ್ರ

ಉಪೇಂದ್ರ ಈಗ ದೊಡ್ಡ ಸಿನಿಮಾ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರಕ್ಕೆ ಹೀರೋ ಆಗಿದ್ದಾರೆ. ಮುಂದೆ ಸಹ ಅವರು ಅಂತಹ ಚಿತ್ರಗಳಲ್ಲೇ ನಟಿಸುತ್ತಾರಾ? ಅಥವಾ ಕಡಿಮೆ ಬಜೆಟ್​ನ ಮತ್ತು ಕಡಿಮೆ ಅವಧಿಯ ಚಿತ್ರಗಳಲ್ಲೂ ನಟಿಸುತ್ತಾರಾ ಎಂಬ ಪ್ರಶ್ನೆ ಸಹಜ. ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ‘ಅಣ್ಣಾವು› ಎಲ್ಲ ತರಹದ ಸಿನಿಮಾಗಳನ್ನೂ ಮಾಡಿದರು. ಒಂದು ದೊಡ್ಡ ಸಿನಿಮಾ ಮಾಡಿ, ತಕ್ಷಣ ಸಣ್ಣ ಸಿನಿಮಾ ಮಾಡುತ್ತಿದ್ದರು. ಯಾವುದಕ್ಕೂ ಸ್ಟಿಕ್ ಆನ್ ಆಗುತ್ತಿರಲಿಲ್ಲ. ಕಥೆಗೆ ಬಜೆಟ್ ಹೊರತು, ಬಜೆಟ್​ಗೆ ಕಥೆ ಅಲ್ಲ. ನಾನು ಯಾವತ್ತೂ ಆ ತರಹ ಸಿನಿಮಾ ಮಾಡಬೇಕು, ಈ ತರಹದ ಸಿನಿಮಾ ಮಾಡಬೇಕು ಎಂದು ಪ್ಲಾನ್ ಮಾಡಿಲ್ಲ. ಪ್ಲಾನ್ ಮಾಡಿದ್ದು ಪ್ರಜಾಕೀಯ ಮಾತ್ರ. ಮಿಕ್ಕಿದ್ದೆಲ್ಲವನ್ನೂ ಸಿನಿಮಾದಲ್ಲಿ ಹೇಳಿದ್ದೀನಿ’ ಎಂದು ಉತ್ತರಿಸುತ್ತಾರೆ ಉಪೇಂದ್ರ.

4500 ಚಿತ್ರಮಂದಿರಗಳಲ್ಲಿ ...

ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರವು ಇಂದು ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ, 4500 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಸುದ್ದಿಯಲ್ಲಿರುವ ಈ ಚಿತ್ರದ ತಮಿಳಿನ ಅವತರಣಿಕೆಯ ವಿತರಣೆ ಹಕ್ಕುಗಳನ್ನು ಲೈಕಾ ಪ್ರೊಡಕ್ಷನ್ಸ್ ಖರೀದಿಸಿದರೆ, ಉತ್ತರ ಭಾರತದಲ್ಲಿ ಹಿಂದಿ ಚಿತ್ರವನ್ನು ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್​ನಡಿ ಆನಂದ್ ಪಂಡಿತ್ ಬಿಡುಗಡೆ ಮಾಡುತ್ತಿದ್ದಾರೆ. ಇನ್ನು, ಉಪೇಂದ್ರ ಜತೆಗೆ ಸುದೀಪ್, ಶಿವರಾಜಕುಮಾರ್, ಶ್ರೇಯಾ ಶರಣ್, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಸುದೀಪ್ ಅವರ ಪಾತ್ರದ ಕುರಿತು ಮಾತನಾಡುವ ಉಪೇಂದ್ರ, ‘ಸುದೀಪ್ ಅವರ ಪಾತ್ರ ಮೊದಲೇ ಇತ್ತು. ಅದು ಮಧ್ಯದಲ್ಲಿ ಸೇರಿಕೊಂಡಿದ್ದಲ್ಲ. ಅದನ್ನು ಯಾರಿಂದ ಮಾಡಿಸಬೇಕು ಎಂಬ ತೀರ್ವನವಾಗಿರಲಿಲ್ಲ. ಕೊನೆಗೆ ಸುದೀಪ್ ಒಪ್ಪಿದರು. ಇನ್ನು, ಶಿವಣ್ಣ ಅವರು ‘ಕಬ್ಜ 2’ಗೆ ಲೀಡ್ ಕೊಡಲಿದ್ದಾರೆ’ ಎಂದಷ್ಟೇ ಹೇಳುತ್ತಾರೆ ಉಪೇಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net