

ಬೆಂಗಳೂರು: ಆರ್ಥಿಕ ಹಿಂಜರಿತದ ನಂತರ ಕರೊನಾ ಕಾರಣಕ್ಕೆ ಜಝುರಿತವಾಗಿದ್ದ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಿಬಿಎಂಪಿ ಕಾಯ್ದೆಯಿಂದ ಮರುಜೀವ ಲಭಿಸುವ ಲಕ್ಷಣಗಳು ಗೋಚರಿಸಿವೆ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ 110 ಹಳ್ಳಿಗಳು ಸೇರಿ ಇಡೀ ಬೆಂಗಳೂರನ್ನು ನಿಭಾಯಿಸಲು ಪ್ರತ್ಯೇಕ ಕಾಯ್ದೆಗೆ ವಿಧಾನಮಂಡಲದಲ್ಲಿ ಒಪ್ಪಿಗೆ ಲಭಿಸುವ ಸಾಧ್ಯತೆಯಿದ್ದು, ಉತ್ತಮ ಮೂಲಸೌಕರ್ಯ ಲಭಿಸುವ ಆಶಾಭಾವನೆಯಿದೆ. ಅನೇಕ ಆಡಳಿತಾತ್ಮಕ ಸುಧಾರಣೆಯಿಂದ ಬೆಂಗಳೂರಿನಲ್ಲಿ ಜೀವಿಸುವುದು ಆರಾಮದಾಯಕವಾಗುತ್ತದೆ ಎನ್ನುವ ಕಾರಣಕ್ಕೆ ಮುಖ್ಯವಾಗಿ ಹೊರವಲಯದಲ್ಲಿ ಹೂಡಿಕೆ ಮಾಡುವವರು ಮುಂದೆ ಬರುತ್ತಿದ್ದಾರೆ.
ಮೂಲಸೌಕರ್ಯದ ನಿರೀಕ್ಷೆ: 2007-08ರಲ್ಲಿ ಪಾಲಿಕೆ 110 ಹಳ್ಳಿಗಳನ್ನು ಸೇರ್ಪಡೆ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಲಾಗಿದೆ. ಆದರೆ, ಆ ಪ್ರದೇಶ ಗಳಿಂದ ಪರಿಣಾಮಕಾರಿ ತೆರಿಗೆ ಸಂಗ್ರಹವಾಗದ ಕಾರಣಕ್ಕೆ ಮೂಲಸೌಕರ್ಯ ಒದಗಿಸುವಲ್ಲಿ ಹಿನ್ನಡೆ ಆಗಿತ್ತು. ಭವಿಷ್ಯದಲ್ಲಿ ಕುಡಿಯಲು ಕಾವೇರಿ ನೀರು, ಒಳಚರಂಡಿ ವ್ಯವಸ್ಥೆ, ರಸ್ತೆಯಂತಹ ಮೂಲಸೌಕರ್ಯ ಲಭಿಸುತ್ತದೆ ಎಂಬ ನಿರೀಕ್ಷೆಯಲ್ಲೆ ಅನೇಕರು ಹೂಡಿಕೆ ಮಾಡಿದ್ದರು,ಬೃಹತ್ ಲೇಔಟ್ಗಳು, ಅಪಾರ್ಟ್ವೆುಂಟ್ಗಳು ತಲೆಯೆತ್ತಿದ್ದವು. ಇತ್ತೀಚಿನ
ವರ್ಷ ಗಳಲ್ಲಿ ಈ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ಕಾರ್ಯ ಭರದಿಂದ ಸಾಗಿದೆ. ಬೆಳೆಯುತ್ತಿರುವ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ಬೇಕೆಂಬ ಕೂಗಿನ ಹಿನ್ನೆಲೆಯಲ್ಲಿ ಬಿಬಿಎಂಪಿ ಕಾಯ್ದೆ ಜಾರಿಯಾಗಬೇಕೆಂದು ವಿಧಾನ ಮಂಡಲದಲ್ಲಿ ಮಂಡಿಸಿದಾಗ ಅದರಲ್ಲಿನ ಲೋಪದೋಷಗಳನ್ನು ತಿದ್ದಲು ಜಂಟಿ ಸದನ ಸಮಿತಿ ರಚನೆ ಮಾಡಲಾಗಿದೆ. ಮೇಯರ್ ಅವಧಿಯನ್ನು ಈಗಿನ ಒಂದು ವರ್ಷದಿಂದ ಎರಡೂವರೆ ವರ್ಷಕ್ಕೆ ಹೆಚ್ಚಿಸುವುದು, 198 ವಾರ್ಡ್ಗಳನ್ನು 250ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಮಂಡಿಸಲಾಗಿದೆ. ಪ್ರತ್ಯೇಕ ಕಾಯ್ದೆ ಜಾರಿಯಾದರೆ ಬೆಂಗಳೂರಿನ ಅಭಿವೃದ್ಧಿ ಯೋಜಿತವಾಗಿ ನಡೆಯುತ್ತದೆ. ಇದರಿಂದ ಮೂಲಸೌಕರ್ಯ ಉತ್ತಮಗೊಳ್ಳುತ್ತದೆ. ಈ ಪ್ರಕ್ರಿಯೆಯ ನೇರ ಪರಿಣಾಮ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಬೀಳುತ್ತದೆ.
ಹಳೆಯ ಬೆಂಗಳೂರಿನಲ್ಲಿ ಸಾಮಾನ್ಯರು ಹೂಡಿಕೆ ಮಾಡಲಾಗದಷ್ಟು ದರಗಳು ಗಗನಕ್ಕೇರಿವೆ. ಹೊಸ ಪ್ರದೇಶಗಳಲ್ಲಿ ಹಾಗೂ ಬೆಂಗಳೂರು ಹೊರವಲಯದಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಹೂಡಿಕೆ ಮೊತ್ತ ಗಣನೀಯವಾಗಿ ಏರಿಕೆಯಾಗುವ ಎಲ್ಲ ಸಾಧ್ಯತೆಗಳಿವೆ.
ಅನುಕೂಲಗಳು
65 ಹಳ್ಳಿ ಸೇರ್ಪಡೆ ಸಾಧ್ಯತೆ
ಬಿಬಿಎಂಪಿ ಕಾಯ್ದೆ ಕುರಿತ ಸಮಿತಿ ಇತ್ತೀಚಿನ ದಿನಗಳಲ್ಲಿ ಭರದಿಂದ ಸಭೆಗಳನ್ನು ನಡೆಸುತ್ತಿದ್ದು, ಈಗಿನ ಬೆಂಗಳೂರಿಗೆ 65 ಹೊಸ ಹಳ್ಳಿಗಳನ್ನು ಸೇರ್ಪಡೆ ಮಾಡುವ ಚರ್ಚೆ ನಡೆಯುತ್ತಿದೆ. ಈ ಪ್ರದೇಶದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಚೇತರಿಕೆ ಕಂಡುಬಂದಿದೆ. ಹಿಂದೆ ಸೇರ್ಪಡೆಯಾದ 110 ಹಳ್ಳಿಗಳ ನಂತರದಲ್ಲಿರುವ ಈ ಹಳ್ಳಿಗಳಲ್ಲಿ ಕಳೆದ ದಶಕದಿಂದಲೇ ರಿಯಲ್ ಎಸ್ಟೇಟ್ ವ್ಯಾಪಾರ ನಡೆಯುತ್ತಿದೆ. ಆದರೂ ಬಿಬಿಎಂಪಿಗೆ ಸೇರ್ಪಡೆಯಾಗುವ ಕುರಿತು ಅನುಮಾನಗಳಿದ್ದದ್ದರಿಂದ ಹೂಡಿಕೆದಾರರು ಹಿಂಜರಿಯುತ್ತಿದ್ದರು. ಸೇರ್ಪಡೆ ಕುರಿತು ಸರ್ಕಾರದಿಂದ ಅಧಿಕೃತ ಹೇಳಿಕೆ ಬಂದಿಲ್ಲವಾದರೂ ಈ ಕುರಿತ ಚರ್ಚೆಗಳು ನಡೆಯುತ್ತಿರುವುದನ್ನು ಸರ್ಕಾರವೇ ತಿಳಿಸಿರುವುದು ಹೂಡಿಕೆ
ದಾರರಲ್ಲಿ ವಿಶ್ವಾಸ ಮೂಡಿಸಿದೆ. ಈ 65 ಹೊಸ ಹಳ್ಳಿಗಳಲ್ಲಿ ಹೊಸ ಲೇಔಟ್ಗಳ ನಿರ್ಮಾಣ ಕಾರ್ಯಕ್ಕೆ ವೇಗ ಸಿಗುವ ಜತೆಗೆ ಹಳೆಯ ಲೇಔಟ್ಗಳಲ್ಲಿ ಮಾರಾಟವಾಗದೇ ಉಳಿದಿದ್ದ ನಿವೇಶನಗಳಿಗೆ ಡಿಮಾಂಡ್ ಹೆಚ್ಚುತ್ತಿದೆ. ಈಗಾಗಲೆ ಖರೀದಿ ಮಾಡಿರುವ ವರ ಹೂಡಿಕೆ ವೇಗವಾಗಿ ಹೆಚ್ಚಳವಾಗುತ್ತಿದೆ. ಕೆಲವೇ ತಿಂಗಳಲ್ಲಿ ಪೂರ್ಣಪ್ರಮಾಣದ ಉದ್ಯಮ ವ್ಯಾಪಾರ ಕಾಣಸಿಗುತ್ತದೆ ಎಂದು ಯಲಹಂಕ ಪ್ರದೇಶದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.