

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ನಿಖರವಾಗಿದೆ ಎಂಬುದು ಸಾಬೀತಾದರೆ ಸೋಲೊಪ್ಪಿಕೊಳ್ಳುತ್ತೇನೆ ಎಂದು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಮತ ಎಣಿಕೆಯಲ್ಲಿ ವೇಳೆ ಲೋಪ ನಡೆದಿದೆ ಎಂದು ಅವರು ಪುರುಚ್ಚರಿಸಿದ್ದಾರೆ. ಚುನಾವಣೆಯಲ್ಲಿ ಸೋಲುವುದಕ್ಕೆ ನಾನು ಭಯ ಪಡುವುದಿಲ್ಲ. ಆದರೆ ಅಕ್ರಮವಾಗಿ ಪ್ರತಿಸ್ಪರ್ಧಿ ಗೆದ್ದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಮೆರಿಕದ ಜನರನ್ನು ವಂಚಿಸಿ, ಚುನಾವಣೆ ನಡೆಸಲಾಗಿದೆ. ಇದರ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಚುನಾವಣೆ ಅಕ್ರಮ ಕುರಿತು ನಮ್ಮಲ್ಲಿ ಸಾಕಷ್ಟು ಸಾಕ್ಷಾಧಾರ ಇವೆ. ಆದರೆ ಕೋರ್ಟ್ ಹಾಗೂ ಮಾಧ್ಯಮಗಳು ಇವನ್ನು ತಿರಸ್ಕರಿಸುತ್ತಿವೆ. ಈ ಚುನಾವಣೆಯಲ್ಲಿ ಯಾರು ಗೆದ್ದಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಬಹಿರಂಗವಾಗಿ ಅದನ್ನು ಹೇಳುತ್ತಿಲ್ಲ. ನಮಗೆ ಬಹುಮತಕ್ಕೆ ಅಗತ್ಯವಾದ ಮತಗಳು ಸಿಕ್ಕಿವೆ ಎಂದು ಟ್ರಂಪ್ ಸಮರ್ಥನೆ ಮಾಡಿಕೊಂಡಿದ್ದಾರೆ. ಕಳೆದ ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ 306 ಎಲೆಕ್ಟ್ರರಲ್ ಕಾಲೇಜ್ನಲ್ಲಿ ಗೆಲುವು ಸಾಧಿಸುವ ಮೂಲಕ ಜೋ ಬೈಡೆನ್ ಅಮೆರಿಕ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮತ ಎಣಿಕೆ ಪ್ರಕ್ರಿಯೆ ಯಲ್ಲಿ ಅಕ್ರಮ ನಡೆದಿದೆ ಎಂದು ಟ್ರಂಪ್ ಆರೋಪ ಮಾಡಿದ್ದರು.