6-8ನೇ ಕ್ಲಾಸ್​ಗೆ ಸಮ್ಮತಿ?; ರಾಜ್ಯದ ಪ್ರಾಥಮಿಕ ಶಾಲೆಗಳ ಭವಿಷ್ಯ ಇಂದು ನಿರ್ಧಾರ

Front 2
Published on

ಬೆಂಗಳೂರು: ಕರೊನಾ ಮೂರನೇ ಅಲೆಯ ಆತಂಕದ ನಡುವೆಯೂ ರಾಜ್ಯದಲ್ಲಿ ಪ್ರೌಢಶಾಲೆ ಮತ್ತು ಪಿಯು ಭೌತಿಕ ತರಗತಿಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಪ್ರಾಥಮಿಕ ಶಾಲೆ ಪುನರಾರಂಭಿಸುವ ವಿಚಾರದಲ್ಲಿ ರಾಜ್ಯದ ನಿಲುವು ಸೋಮವಾರ ಸ್ಪಷ್ಟವಾಗಲಿದೆ. ತಜ್ಞರ ತಾಂತ್ರಿಕ ಸಲಹಾ ಸಮಿತಿ ಸಿದ್ಧಪಡಿಸಿರುವ ಶಿಫಾರಸುಗಳ ಪ್ರಕಾರ 6-8ನೇ ಕ್ಲಾಸ್​ನ ಭೌತಿಕ ತರಗತಿಗಳನ್ನು ಗಣೇಶ ಚೌತಿ ಬಳಿಕ ಅಂದರೆ ಸೆ.13ರಿಂದ ಪ್ರಾರಂಭಿಸುವುದಕ್ಕೆ ಷರತ್ತುಬದ್ಧ ಸಮ್ಮತಿ ನೀಡಿರುವುದಾಗಿ ಮೂಲಗಳು ತಿಳಿಸಿವೆ.

6-8ನೇ ತರಗತಿ ಆರಂಭದ ವಿಷಯದಲ್ಲಿ ಕಾಲ ಕಾಲಕ್ಕೆ ವಸ್ತುಸ್ಥಿತಿ ಅವಲೋಕನ, ಪಾಲಕರ ಒಪ್ಪಿಗೆ, ಮಕ್ಕಳ ಆರೋಗ್ಯ ತಪಾಸಣೆ ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳು ಅಗತ್ಯವೆಂದಿದೆ. ಅಲ್ಲದೆ, ಶಾಲೆ-ಕಾಲೇಜುಗಳಲ್ಲಿ ಪ್ರಮಾಣಿತ ಕಾರ್ಯವಿಧಾನ (ಎಸ್​ಒಪಿ) ಅನುಸರಣೆ ಮೇಲ್ವಿಚಾರಣೆಗೆ ಪ್ರತ್ಯೇಕ ತಂಡ ನೇಮಕ ಪ್ರಸ್ತಾಪ ಸರ್ಕಾರದ ಮುಂದಿಡುವ ಸಾಧ್ಯತೆಗಳಿವೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಂಜೆ 4ಗಂಟೆಗೆ ಮಹತ್ವದ ಸಭೆ ನಡೆಯಲಿದ್ದು, ಮೂರನೇ ಅಲೆ ನಿಯಂತ್ರಣ ಕುರಿತ ಚರ್ಚೆಯೇ ಪ್ರಧಾನ ಅಜೆಂಡಾ ಆಗಿದೆ. ಸಕಾಲಕ್ಕೆ ವರದಿ ಸಿದ್ಧವಾಗಬೇಕೆಂಬ ದೃಷ್ಟಿಯಿಂದ ಹಿಂದಿನ ತಾಂತ್ರಿಕ ತಜ್ಞರ ಸಲಹಾ ಸಮಿತಿಯನ್ನು ಸರ್ಕಾರ ಮುಂದುವರಿಸಿದ್ದು, ಸಿಎಂ ಸೂಚನೆ ಪ್ರಕಾರ ಸಮಿತಿ ಹಲವು ಸುತ್ತಿನ ಸಭೆ ನಡೆಸಿ ಶಿಫಾರಸು ಸಹಿತ ವರದಿ ಸಿದ್ಧಪಡಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸಭೆಯಲ್ಲಿ ಹಲವು ಸಚಿವರು, ತಜ್ಞರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ತಾಂತ್ರಿಕ ಸಲಹಾ ಸಮಿತಿ ನೀಡಲಿರುವ ವರದಿ ನಿರ್ಣಾಯಕವಾಗಲಿದೆ. ಜತೆಗೆ ಕೇಂದ್ರದ ಗೃಹ ಇಲಾಖೆ ನೀಡಿದ ಸೂಚನೆಗಳನ್ನು ಗಣನೆಗೆ ತೆಗೆದುಕೊಳ್ಳುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಕೆಲವು ಗಡಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಸೋಂಕು ದೃಢತೆ ಪ್ರಮಾಣ ಶೇ.2ರ ಒಳಗಿದ್ದು, ಮರಣ ಪ್ರಮಾಣವು ಶೇ.1.3ರಷ್ಟಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ನೆರೆಯ ರಾಜ್ಯಗಳ ಸೋಂಕು ಉಲ್ಬಣಿಸಿರುವುದು ಸರ್ಕಾರದ ಚಿಂತೆಗೆ ಕಾರಣ. ಕೇರಳದಲ್ಲಿ ದೈನಂದಿನ ಹೊಸ ಪ್ರಕರಣಗಳು ಸಂಖ್ಯೆ 30,000ಕ್ಕೆ ತಲುಪಿದೆ. ಪ್ರತಿ ಐದು ಜನರಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ದಾಖಲಾಗುವ ಪ್ರಕರಣಗಳು ಗಣನೀಯವಾಗಿವೆ. ಜನರು ಗುಂಪು ಸೇರದಂತೆ ನೋಡಿಕೊಳ್ಳಬೇಕು. ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

ತಜ್ಞರ ಸಲಹೆಗಳು

  • ಸೆಪ್ಟೆಂಬರ್ ಅಂತ್ಯ ಇಲ್ಲವೇ ಅಕ್ಟೋಬರ್ ಮೊದಲ ವಾರ ಮೂರನೇ ಅಲೆ ಪ್ರವೇಶ ಸಾಧ್ಯತೆ
  • ಹಾಲಿ ರೂಪಾಂತರಿ ವೈರಾಣು ಮುಂದುವರಿದರೆ ಸಮಸ್ಯೆಯಿಲ್ಲ, ಬದಲಾದರೆ ಪರಿಸ್ಥಿತಿ ಗಂಭೀರ 
  • ಚಾಲ್ತಿ ಕರೊನಾ ಪರೀಕ್ಷೆ ನಿಯಮಗಳನ್ನು ಈ ವರ್ಷಾಂತ್ಯದವರೆಗೂ ಕಟ್ಟುನಿಟ್ಟಾಗಿ ಪಾಲಿಸುವುದು
  • ಸೋಂಕಿನ ದುಷ್ಪರಿಣಾಮ ತಡೆಯುವಲ್ಲಿ ಲಸಿಕೆ ಪ್ರಮುಖವಾಗಿದ್ದು, ಲಸಿಕೆ ವಿತರಣೆ ವೇಗ ಹೆಚ್ಚಿಸಿ ಪ್ರತಿದಿನ 5-6 ಲಕ್ಷ ಜನರಿಗೆ ಲಸಿಕೆ ಹಾಕಬೇಕು.
  • ಸರ್ಕಾರಿ ಮತ್ತು ಖಾಸಗಿ 245 ಲ್ಯಾಬ್​ಗಳ ಸಂಯೋಜನೆ ಮತ್ತು ದಕ್ಷತೆಯಿಂದ ಕೆಲಸ ನಿರ್ವಹಣೆ
  • ಈಗಾಗಲೇ 100 ಹೆಚ್ಚು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ, ಇನ್ನೂ 145 ಆಸ್ಪತ್ರೆಗಳಲ್ಲಿ ನಿರ್ಮಾಣ ಪ್ರಗತಿಯಲ್ಲಿದೆ. ಅಗತ್ಯ ಆಕ್ಸಿಜನ್​ಗೆ ಏರ್ಪಾಡು ಸಮಾಧಾನಕರ
  • ಜಿಲ್ಲಾ, ತಾಲೂಕು ಹಂತದ ಆಸ್ಪತ್ರೆಗಳ ಉನ್ನತೀಕರಣ, ಬೇಕಾದ ವೈದ್ಯರು, ಸಿಬ್ಬಂದಿ, ಪರಿಕರಗಳ ಸಮರ್ಪಕವಾಗಿ ವ್ಯವಸ್ಥೆ ಮಾಡಿರುವುದನ್ನು ಖಾತರಿಪಡಿಸಿಕೊಳ್ಳುವುದು.
  • ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಕೇರಳದ ಗಡಿ ಜಿಲ್ಲೆಗಳಲ್ಲಿ ಬಿಗಿ ನಿಗಾ, ತಪಾಸಣೆ.
  • ಕೇರಳದಿಂದ ಬರುವವರಿಗೆ ಆರ್​ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ, ಒಂದು ವಾರ ಕ್ವಾರಂಟೈನ್ ನಂತರ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸುವುದು.
  • ಎರಡು ಡೋಸ್ ಲಸಿಕೆ ಪಡೆದವರಿಗೆ ಆರ್​ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ಅನಗತ್ಯವೆಂದು ಕೇಂದ್ರ ಹೇಳಿದ್ದರೂ ನಿಯಮ ಸಡಿಲಿಸುವಂತಿಲ್ಲ
  • ಮೊದಲ, ಎರಡನೇ ಅಲೆಯು ಕೇರಳ, ಮಹಾರಾಷ್ಟ್ರಗಳಲ್ಲಿ ಕಾಣಿಸಿಕೊಂಡ 3-4 ವಾರಗಳ ಬಳಿಕ ರಾಜ್ಯಕ್ಕೂ ಕಾಲಿಟ್ಟಿದ್ದನ್ನು ಮರೆಯುವಂತಿಲ್ಲ

ಆರಂಭಕ್ಕೆ ಹೆಚ್ಚಿದ ಒತ್ತಾಸೆ: ಮಕ್ಕಳ ಆರೋಗ್ಯ ರಕ್ಷಣೆಯೊಂದಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಸಮಸ್ಯೆಗೆ ಪರಿಹಾರವಾಗಿ ಪ್ರಾಥಮಿಕ ಶಾಲೆಗಳನ್ನು ತೆರೆಯಬೇಕೆಂದು ಪಾಲಕರು ಬಯಸುತ್ತಿದ್ದು, ಶಿಕ್ಷಣ ತಜ್ಞರು ಮತ್ತು ಎಸ್​ಡಿಎಂಸಿಗಳು ಒತ್ತಾಸೆ ನೀಡಿವೆ. 9, 10 ಮತ್ತು ಪಿಯುಸಿ ಭೌತಿಕ ತರಗತಿಗಳು ಪುನಾರಂಭಿಸಿದ ಬಳಿಕ ಉಮೇದಿ ಹೆಚ್ಚಿದೆ. ಅಲ್ಲದೆ, 6-8ನೇ ಇಯತ್ತೆ ನೇರ ತರಗತಿ ಪ್ರಾರಂಭಕ್ಕೆ ತಜ್ಞ ಡಾ.ದೇವಿ ಪ್ರಸಾದ್ ಶೆಟ್ಟಿ ಸಲಹೆ ನೀಡಿರುವುದು ಗಮನಾರ್ಹ.

ಚೌತಿಗೆ ವಿನಾಯಿತಿ ಚರ್ಚೆ: ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧಗಳಿಗೆ ವಿನಾಯಿತಿ ನೀಡಬೇಕೆಂದು ಸ್ವಪಕ್ಷದ ಶಾಸಕರು, ವಿಶ್ವ ಹಿಂದು ಪರಿಷತ್ ಸೇರಿದಂತೆ ಹಲವು ಸಂಘಟನೆಗಳು ಒತ್ತಾಯಿಸಿವೆ. ಕಳೆದ ವರ್ಷದಂತೆ ಈ ಬಾರಿಯೂ ಸರಳ, ಸಂಪ್ರದಾಯಬದ್ಧವಾಗಿ ಹಬ್ಬ ಆಚರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಕುರಿತು ಸಿಎಂ ಭರವಸೆ ನೀಡಿದ್ದಾರಾದರೂ ಬಹುತೇಕ ಅದ್ದೂರಿ ಚೌತಿಗೆ ಅವಕಾಶ ಬೇಡ ಎಂಬ ಅಭಿಪ್ರಾಯದ ಜತೆಗೆ ಮನೆ ಆಚರಣೆಗೆ ಸೀಮಿತಗೊಳಿಸಬೇಕೆಂಬ ಬೇಡಿಕೆ ಸರ್ಕಾರದ ಮುಂದಿದೆ. ಸೋಮವಾರದ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಸೋಮವಾರದ ಸಭೆಯಲ್ಲಿ 1ರಿಂದ 8ನೇ ತರಗತಿವರೆಗೆ ಶಾಲೆ ಆರಂಭಿಸುವ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ನಂತರ ತೀರ್ವನಿಸಿ ಪೂರ್ಣ ಪ್ರಮಾಣದಲ್ಲಿ ಶಾಲೆ ತೆರೆಯಲಾಗುವುದು. ಕೆಲ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಿರುವುದರಿಂದ 9ರಿಂದ ಮೇಲ್ಪಟ್ಟ ತರಗತಿ ಆರಂಭವಾಗಿಲ್ಲ. ಕೆಲವು ಜಿಲ್ಲೆಗಳ ಪಾಸಿಟಿವಿಟಿ ರೇಟ್ ಶೇ.2 ಇದ್ದರೆ, ಇತರೆಡೆ ತುಂಬ ಕಡಿಮೆ ಇದೆ. ಅಂತಹ ಕಡೆ ಶಾಲೆ ಆರಂಭಿಸುವ ಬಗ್ಗೆಯೂ ನಿರ್ಧರಿಸಲಾಗುವುದು.

| ಬಿ.ಸಿ. ನಾಗೇಶ್ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net