ಏನಿದು ಮಿನಿಮಮ್​ ಬ್ಯಾಲೆನ್ಸ್ ಗೊಂದಲ!? RBI ನಿಯಮಗಳೇನು? ಗವರ್ನರ್​ ಸಂಜಯ್ ಮಲ್ಹೋತ್ರಾ ಹೇಳಿದ್ದಿಷ್ಟು

ವಿಜಯವಾಣಿ (59)
Published on

RBI: ಇತ್ತೀಚೆಗಷ್ಟೇ ಭಾರತದ ಎರಡನೇ ಅತಿದೊಡ್ಡ ಸಾಲದಾತ ಬ್ಯಾಂಕ್​ ಎನಿಸಿಕೊಂಡಿರುವ ಐಸಿಐಸಿಐ, ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಗ್ರಾಹಕರಿಗೆ ಮಾಸಿಕ ಮಿನಿಮಮ್​ ಬ್ಯಾಲೆನ್ಸ್​ ಅನ್ನು ಹೆಚ್ಚಿಸಿದೆ. ಬ್ಯಾಂಕಿನ ವೆಬ್‌ಸೈಟ್‌ ಹಂಚಿಕೊಂಡ ಮಾಹಿತಿ ಪ್ರಕಾರ, ಆಗಸ್ಟ್ 1ರಂದು ಅಥವಾ ನಂತರ ತಮ್ಮ ಉಳಿತಾಯ ಖಾತೆಗಳನ್ನು ತೆರೆದಿರುವ ಮೆಟ್ರೋ ನಗರ ಮತ್ತು ನಗರ ಪ್ರದೇಶಗಳಲ್ಲಿನ ಗ್ರಾಹಕರು ದಂಡವನ್ನು ತಪ್ಪಿಸಲು ಮಾಸಿಕ 50,000 ರೂ. ಮಿನಿಮಮ್​ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಿದೆ. ಅಷ್ಟಕ್ಕೂ ಈ ಬಗ್ಗೆ ಆರ್​ಬಿಐ ನಿಯಮಾವಳಿಗಳು ಏನಿದೆ? ಹೆಚ್ಚಿಸುವ ನಿರ್ಧಾರ ಕೈಗೊಳ್ಳುವವರು ಯಾರು? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ICICI ನಿರ್ಧಾರದಿಂದ ಈ ಗೊಂದಲ

ಗ್ರಾಹಕರು ಯಾವುದೇ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಈಗ ಕಡ್ಡಾಯ ನಿಯಮವಾಗಿದೆ. ಆದರೆ, ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು ಎಂಬುದನ್ನು ನಿರ್ಧರಿಸುವವರು ಯಾರು? ಈ ಸೂಚನೆ ಆರ್​ಬಿಐ ಕೊಡುತ್ತದೆಯೇ? ಎಂಬುದು ಸದ್ಯ ಹಲವರಲ್ಲಿ ಕಾಡುತ್ತಿದೆ. ಐಸಿಐಸಿಐ ಬ್ಯಾಂಕ್​ ತೆಗೆದುಕೊಂಡ ನಿರ್ಧಾರವೇ ಈ ಚರ್ಚೆಗೆ ದೊಡ್ಡ ಕಾರಣವಾಗಿದೆ. ಕನಿಷ್ಠ ಬ್ಯಾಲೆನ್ಸ್ ವಿಷಯವು ಸದ್ಯ ಹಾಟ್​ ಟಾಪಿಕ್ ಆಗಿ ಮಾರ್ಪಟ್ಟಿದೆ. ಇದರ ಬಗ್ಗೆ ಗ್ರಾಹಕರಿಂದ ಟೀಕೆಗಳು ಸಹ ವ್ಯಕ್ತವಾಗಿವೆ.

ಆರ್​ಬಿಐ ಗವರ್ನರ್​ ಸ್ಪಷ್ಟನೆ

ಈ ವಿಷಯದಲ್ಲಿ ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಮಿನಿಮಮ್ ಬ್ಯಾಲೆನ್ಸ್​ ಕುರಿತು ಉಂಟಾದ ಗೊಂದಲ, ಟೀಕೆಗಳ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಅಷ್ಟಕ್ಕೂ ಭಾರತೀಯ ರಿಸರ್ವ್​ ಬ್ಯಾಂಕಿನ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ವಿವರಿಸಿದ್ದಾರೆ.

ಉಳಿತಾಯ ಖಾತೆಗಳಿಗೆ ಕನಿಷ್ಠ ಸರಾಸರಿ ಬ್ಯಾಲೆನ್ಸ್ (MAB) ನಿರ್ಧರಿಸುವಲ್ಲಿ ಬ್ಯಾಂಕುಗಳು ಸಂಪೂರ್ಣ ಸ್ವಾಯತ್ತತೆಯನ್ನು ಹೊಂದಿವೆ. ಈ ವಿಷಯವು ಕೇಂದ್ರ ಬ್ಯಾಂಕಿನ ವ್ಯಾಪ್ತಿಗೆ ಬರುವುದಿಲ್ಲ. ವೈಯಕ್ತಿಕ ಬ್ಯಾಂಕ್​ಗಳ ಉಳಿತಾಯ ಖಾತೆಗಳಿಗೆ ಕನಿಷ್ಠ ಸರಾಸರಿ ಬ್ಯಾಲೆನ್ಸ್ (MAB) ಅವಶ್ಯಕತೆಗಳನ್ನು ಸ್ವತಂತ್ರವಾಗಿ ನಿರ್ಧರಿಸಬಹುದು" ಎಂದು RBI ಗವರ್ನರ್ ತಿಳಿಸಿದ್ದಾರೆ.

"ಕನಿಷ್ಠ ಸರಾಸರಿ ಬ್ಯಾಲೆನ್ಸ್ ಅನ್ನು ನಿರ್ಧರಿಸುವ ಜವಾಬ್ದಾರಿಯನ್ನು ಆರ್​ಬಿಐ ಆಯಾ ಬ್ಯಾಂಕುಗಳಿಗೆಯೇ ಬಿಟ್ಟಿದೆ. ಹಲವು ಬ್ಯಾಂಕ್​ ಮಿನಿಮಮ್​ ಬ್ಯಾಲೆನ್ಸ್​ ಮಿತಿಯನ್ನು 10,000 ರೂ.ಗೆ ಮಾಡಿದರೆ, ಕೆಲವು 2,000 ರೂ.ಗೆ ಮಾತ್ರ ಸೀಮಿತಗೊಳಿಸಿವೆ. ಇನ್ನೂ ಒಂದಷ್ಟು ಬ್ಯಾಂಕ್​ಗಳು ಅದನ್ನು ತೆಗೆದುಹಾಕಿ, ಜೀರೋ ಬ್ಯಾಲೆನ್ಸ್​ಗೆ ಅನುಮತಿ ನೀಡಿವೆ" ಎಂದು ಹೇಳಿದರು.

ಐಸಿಐಸಿಐ ಹೇಳಿಕೆಯೇನು?

ಬಾಂಕಿನ ಹಳೆಯ ಗ್ರಾಹಕರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅವರು ಮಿನಿಮಮ್​ ಬ್ಯಾಲೆನ್ಸ್ 10,000 ರೂ.ನೊಂದಿಗೆ ಮುಂದುವರಿಯಲಿದ್ದಾರೆ. ಈ ನಿಯಮ ಹೊಸದಾಗಿ ಬ್ಯಾಂಕ್​ ಖಾತೆ ತರೆಯುವ ಗ್ರಾಹಕರಿಗೆ ಮಾತ್ರ ಅನ್ವಯ ಎಂದು ಸ್ಪಷ್ಟಪಡಿಸಿದೆ. ಮೆಟ್ರೋ ನಗರ ಮತ್ತು ನಗರ ಪ್ರದೇಶಗಳನ್ನು ಹೊರತುಪಡಿಸಿ, ಅರೆ ನಗರ ಪ್ರದೇಶಗಳಲ್ಲಿ ಹೊಸ ಗ್ರಾಹಕರು 25,000 ರೂ. ಮಿನಿಮಮ್​ ಬ್ಯಾಲೆನ್ಸ್​ ಅನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಉಳಿದಂತೆ ಗ್ರಾಮೀಣ ಪ್ರದೇಶದ ಗ್ರಾಹಕರು 10,000 ರೂ. ಬ್ಯಾಲೆನ್ಸ್ ಇಟ್ಟುಕೊಳ್ಳಬೇಕು ಎಂದು ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net