

ಬೆಂಗಳೂರು: ವಿಶ್ವ ಶಾಂತಿ ಉಂಟಾಗಲು ವ್ಯಕ್ತಿಯು ಶಾಂತಿಯಿಂದ ಇರಬೇಕು. ಶಾಂತಿಯಿಂದ ಇರಲು ಯಾವಾಗ ಸಾಧ್ಯವಾಗುತ್ತದೆ? ಒತ್ತಡದಿಂದ ಮುಕ್ತವಾದಾಗ ಮಾತ್ರ ಇದು ಸಾಧ್ಯ. ಜೀವನದಲ್ಲಿ ಒತ್ತಡವುಂಟಾಗುವುದು ಸಹಜ. ಒತ್ತಡಕ್ಕೆ ಮುಖ್ಯ ಕಾರಣ ನಮ್ಮನ್ನು ನಮ್ಮ ಸಂಗಾತಿ, ನಮ್ಮ ಸಹೋದ್ಯೋಗಿಗಳು, ನಮ್ಮನ್ನು ಹೆತ್ತವರು ಅಥವಾ ನಮ್ಮ ಮಕ್ಕಳು ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂಬುದಾಗಿದೆ. ಸಂಪರ್ಕದಲ್ಲಿನ ಈ ಬಿರುಕುಗಳು ದೊಡ್ಡ ಬಿರುಗಾಳಿಗಳನ್ನೇ ಉಂಟುಮಾಡುತ್ತದೆ. ಸಂಪರ್ಕವು ಮುರಿದುಬಿದ್ದಾಗ ಘರ್ಷಣೆಗಳು ಏಳುತ್ತವೆ. ಉಭಯ ಕಡೆಗಳಲ್ಲೂ ತಮ್ಮ ನಿಲುವುಗಳನ್ನೇ ಬಿಗಿಹಿಡಿದಿರುತ್ತಾರೆ. ಸಮಸ್ಯೆಯನ್ನು ಪರಿಹರಿಸಲು ಇಬ್ಬರೂ ಸಮಸ್ಯೆಯ ಸ್ತರದಿಂದ ಮೇಲೆದ್ದು, ವಿಶಾಲವಾದ ದೃಷ್ಟಿಯಿಂದ ನೋಡಬೇಕು, ಮತ್ತೊಂದು ದೃಷ್ಟಿಕೋನದಿಂದ ವಿಷಯಗಳನ್ನು ನೋಡಬೇಕು. ಆದ್ದರಿಂದಲೇ ಘರ್ಷಣೆಗಳನ್ನು ನಿವಾರಿಸಲು ಮಾತುಕತೆಯು ಮುಖ್ಯ.
ಸಮುದಾಯದ ಸಂಘರ್ಷಣೆಯಲ್ಲಿ , ತಮಗೆ ಅನ್ಯಾಯ ಆಗಿದೆ ಎಂಬ ಭಾವದಿಂದ ಹಿಂಸೆಯ ದಾರಿಯನ್ನು ಹಿಡಿದಿರುವವರಲ್ಲಿ, ಸರಿಯಾದ ಪ್ರಸ್ತಾವನೆಯ ಮೂಲಕ ಅವರೊಂದಿಗೆ ಮಾತುಕತೆಯನ್ನು ಆರಂಭಿಸಬಹುದು. ಅವರು ದೃಷ್ಟಿಕೋನದಲ್ಲಿ ನೋಡಿದಾಗ, ಅವರು ನೈತಿಕತೆಗಾಗಿ ಹೋರಾಡುತ್ತಿದ್ದಾರೆ. ಒಂದು ರೀತಿಯಲ್ಲಿ, ಅವರ ಕೆಚ್ಚು, ಬದ್ಧತೆ, ತ್ಯಾಗಭಾವವು ಶ್ಲಾಘನೀಯವಾದದ್ದೇ. ಅವರಲ್ಲಿರುವ ಬಾಹ್ಯದ ಕ್ರಿಯಾಶೀಲತೆಯು ಅವರ ಆಂತರಿಕ ಶಾಂತಿಯೊಡನೆ ಬೆರೆತರೆ, ಅದು ಸಮಾಜಕ್ಕೆ ಒಂದು ವರವಾಗಬಲ್ಲದು.
ನಕ್ಸಲೀಯರಿಂದ ಪೀಡಿತವಾದ ಪ್ರದೇಶಗಳಲ್ಲಿ ನಡೆಯುತ್ತಿರುವ ನಮ್ಮ ಅನೇಕ ಉಚಿತ ಗ್ರಾಮೀಣ-ಬುಡಕಟ್ಟು ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ನಡೆಸುತ್ತಿರುವವರು ಮಾಜಿ ನಕ್ಸಲೀಯರೆ ಆಗಿದ್ದಾರೆ.! ಆರಂಭದಲ್ಲಿ ಆ ಶಾಲೆಗಳನ್ನು ಮುಚ್ಚಲು ನಮ್ಮ ಸ್ವಯಂಸೇವಕರಿಗೆ ಅವರು ಬೆದರಿಕೆಯನ್ನು ಒಡ್ಡಿದರು. ಆದರೆ ತಮ್ಮದೇ ಸಮುದಾಯಕ್ಕೆ ಅದರಿಂದ ಲಾಭವಾಗುತ್ತಿರುವುದನ್ನು ಅವರು ಕಂಡ ಮೇಲೆ, ಅವರೇ ಸ್ವಯಂಸೇವಕರಾಗಿಬಿಟ್ಟರು. ಆದರೆ ಧಾರ್ಮಿಕ ಮತಾಂಧತೆಯಿಂದ ಉಂಟಾಗುವ ಭಯೋತ್ಪಾದನೆಗೆ ಕೇವಲ ಮಾತುಕತೆ ಸಾಲದು. ಯಾವ ಚರ್ಚೆಗೂ, ಯಾವ ಮಾತುಕತೆಗೂ ತೆರೆದುಕೊಳ್ಳದಿರುವಂತಹ ಸಿದ್ಧಾಂತಕ್ಕೆ ಅವರು ಬದ್ಧರಾಗಿರುತ್ತಾರೆ. ಅವರ ದೃಷ್ಟಿಯಲ್ಲಿ, ಅವರ ಗ್ರಂಥವನ್ನು ಒಪ್ಪದಿರುವವರು ಅಥವಾ ಬೇರೆ ರೀತಿಯಲ್ಲಿ ಚಿಂತಿಸುವವರಿಗೆ ಬದುಕುವ ಹಕ್ಕೇ ಇರುವುದಿಲ್ಲ ಎಂದು ಭಾವಿಸುತ್ತಾರೆ. ಈ ರೀತಿಯ ಧರ್ಮಾಂಧತೆಯ ಮನೋಧೋರಣೆಯು ಹರಡೆ ಇರುವಂತೆ ತಡೆಯಲು ಧಾರ್ಮಿಕ ನಾಯಕರು ಬಲು ದೊಡ್ಡ ಪಾತ್ರವನ್ನು ವಹಿಸಬಲ್ಲರು. ಬಹು-ಧಾರ್ಮಿಕ ಶಿಕ್ಷಣವನ್ನು, ಶಾಂತಿಯ ಶಿಕ್ಷಣವನ್ನು ಕೊಡಿಸುವಲ್ಲಿ ಅವರು ಬಲು ದೊಡ್ಡ ಪಾತ್ರವನ್ನೇ ವಹಿಸಿಕೊಳ್ಳಬಲ್ಲರು.
"ಸ್ವರ್ಗಕ್ಕೆ ನಾವು ಮಾತ್ರವೇ ಒಡೆಯರು" ಎಂಬ ಮನೋಧೋರಣೆಯಿಂದ, "ಒಂದೇ ಗುರಿಗೆ ಅನೇಕ ಪಥಗಳು" ಎಂಬ ಸೈದ್ಧಾಂತಿಕ ಮಾರ್ಪಾಟನ್ನು ಈಗ ತರಬೇಕಿದೆ. ನಮ್ಮ ಜಗತ್ತು ವೈವಿಧ್ಯತೆಯಿಂದ ಕೂಡಿದೆ ಮತ್ತು ಆ ವೈವಿಧ್ಯತೆಯನ್ನು ಸನ್ಮಾನಿಸಬೇಕು ಎಂಬ ಭಾವವು ಮೂಡಿದಾಗ, ನಮ್ಮ ವ್ಯತ್ಯಾಸಗಳನ್ನು ಸುಮ್ಮನೆ ಸಹಿಸಿಕೊಳ್ಳುವ ಬದಲಿಗೆ, ಅವುಗಳನ್ನು ಸಂಭ್ರಮಿಸಲು ಆರಂಭಿಸುತ್ತೇವೆ. ನೀವು ಪ್ರೀತಿಸದಿರುವುದನ್ನು ಮಾತ್ರ ಸಹಿಸಿಕೊಳ್ಳುತ್ತೀರಿ. ಮತ್ತೊಬ್ಬರ ಧರ್ಮವನ್ನು ನಮ್ಮದೇ ಧರ್ಮ ಎಂಬಂತೆ ಪ್ರೀತಿಸುವ ಸಮಯವೀಗ ಬಂದಾಗಿದೆ. ಒಂದು ಧರ್ಮವು ಕೇವಲ ನನ್ನದಾಗಿರುವುದರಿಂದ ಮಾತ್ರ ಮಹಾನಾದುದಲ್ಲ. ಅದು ಧರ್ಮದಿಂದಲೇ ಮಹಾನಾದದ್ದು. ಈ ತಿಳಿವಳಿಕೆಯನ್ನು ಎಲ್ಲಾ ಪಂಡಿತರಲ್ಲಿ, ಪಾದ್ರಿಗಳಲ್ಲಿ, ಇತರ ಆಧ್ಯಾತ್ಮಿಕ ಹಾಗೂ ಧಾರ್ಮಿಕ ನಾಯಕರಲ್ಲಿ ಮೂಡಿಸಿದಾಗ, ನಮ್ಮ ಸುಂದರವಾದ ಜಗತ್ತಿನಲ್ಲಿ ಹೊಗೆಯಾಡುತ್ತಿರುವ ಮತಾಂಧತೆ, ಮೂಲಭೂತವಾದವೆಲ್ಲವೂ ಕೊನೆಯಾಗುತ್ತದೆ.
ವಾಸ್ತವದಲ್ಲಿ ವಿವಿಧ ಧರ್ಮಗಳ ನಡುವೆ ಸಂಘರ್ಷವಿಲ್ಲ. ಎಲ್ಲಾ ಧರ್ಮಗಳಲ್ಲೂ ಒಂದು ಸಾಮಾನ್ಯವಾದ ಎಳೆಯಿದೆ. ಆದರೆ ತಮ್ಮೊಳಗೇ ಒತ್ತಡವಿದ್ದಾಗ, ಅಪಾರ್ಥಗಳು ಎದ್ದು, ಘರ್ಷಣೆಗಳಿಗೆ ಎಡೆಮಾಡಿಕೊಡುತ್ತದೆ. ಅನೇಕ ಜನರ ಮನೆಗಳಲ್ಲೂ ನಡೆಯುವುದು ಇದೇ. ಹೆತ್ತವರು ತಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಮಕ್ಕಳು ದೂರಿದರೆ, ಮಕ್ಕಳು ತಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಹೆತ್ತವರು ದೂರುತ್ತಾರೆ. ಸಹೋದರ- ಸಹೋದರಿಯರ ನಡುವೆ ಅಥವಾ ಇತರೆ ಯಾವುದೇ ಸಂಬಂಧದಲ್ಲಿ ಸಂಪರ್ಕ-ಸಂವಹನದ ಸಮಸ್ಯೆಗಳನ್ನು ಹೊಂದಿರುತ್ತೇವೆ. ನಮ್ಮನ್ನು ಅಪಾರ್ಥ ಮಾಡಿಕೊಳ್ಳಲಾಗಿದೆಯೆಂದು ಭಾವಿಸುತ್ತೇವೆ ಮತ್ತು ಇದೊಂದು ಸಾಮಾನ್ಯವಾದ ಸಮಸ್ಯೆ. ಆದರೆ ಮತ್ತೊಬ್ಬರನ್ನು ದೂಷಿಸುವ ಬದಲಿಗೆ ನಮ್ಮ ಅಭಿವ್ಯಕ್ತಿಯನ್ನು ಮತ್ತಷ್ಟು ಸುಧಾರಿಸಿಕೊಳ್ಳಬೇಕು.
ನಿಜವಾದ ಸಂಪರ್ಕವು ಮಾತುಗಳಿಗೆ ಅತೀತವಾಗಿರುವಂತದ್ದು. ಎಲ್ಲರೂ ಅರ್ಥ ಮಾಡಿಕೊಳ್ಳಬಲ್ಲಂತಹ, ಪ್ರಾಣಿಗಳೂ, ಮರಗಳೂ ಅರ್ಥ ಮಾಡಿಕೊಳ್ಳಬಲ್ಲಂತಹ ಒಂದು ಭಾಷೆಯಿದೆ. ಅದೇ ಹೃದಯದ ಭಾಷೆ. ಮಾತನಾಡಲೂ ಬರದೆ ಇರುವಂತಹ ಒಂದು ಪುಟ್ಟ ಮಗುವಿನ ಉದಾಹರಣೆಯನ್ನು ತೆಗೆದುಕೊಳ್ಳಿ. ಮಾತಿಲ್ಲದೆಯೇ ತನ್ನ ಎಲ್ಲಾ ಭಾವನೆಗಳನ್ನೂ ಒಂದೇ ನೋಟದಲ್ಲಿ ವ್ಯಕ್ತಪಡಿಸುತ್ತದೆ. ಅಥವಾ ನೀವು ಕಚೇರಿಯಿಂದ ಹಿಂದಿರುಗಿದಾಗ ಬಲು ಉತ್ಸಾಹದಿಂದ ನಿಮ್ಮನ್ನು ಸ್ವಾಗತಿಸುವ ನಿಮ್ಮ ನಾಯಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅದರ ಅಸ್ತಿತ್ವದಲ್ಲೇ ಪ್ರೇಮವನ್ನು ತೋರುತ್ತದೆ. ನಮ್ಮ ಮಾತುಗಳಿಗಿಂತಲೂ ಹೆಚ್ಚಾಗಿ ನಮ್ಮ ಅಸ್ತಿತ್ವದಿಂದ ವ್ಯಕ್ತಪಡಿಸುತ್ತೇವೆ. ಪ್ರಕೃತಿಯಲ್ಲಿ ಒಂದು ನಿಯಮವಿದೆ. " ಏನನ್ನು ಕೊಡುತ್ತೀರೋ, ಅದೇ ನಿಮ್ಮ ಬಳಿಗೆ ತಿರುಗಿ ಬರುತ್ತದೆ". ನೀವು ಪ್ರೇಮದಲ್ಲಿ ಮುಳುಗಿದ್ದಾಗ, ಪ್ರೇಮವನ್ನೇ ಹೊರಸೂಸುತ್ತೀರಿ ಮತ್ತು ನಿಮ್ಮ ಸುತ್ತಲೂ ಇರುವ ಜನರೂ ಅದೇ ಪ್ರೇಮವನ್ನು ಪ್ರತಿಫಲಿಸುತ್ತಾರೆ.
ನಮ್ಮ ಆತ್ಮದ ಸ್ವಭಾವವೇ ಶಾಂತಿ. ಇಂದಿನ "ಅಂತಾರಾಷ್ಟ್ರೀಯ ಶಾಂತಿಯ ದಿನ" ದಂದು ಪ್ರೇಮಮಯಿಗಳಾಗಿರುವುದರಲ್ಲಿ, ಶಾಂತಿಯುತರಾಗಿರುವುದರಲ್ಲಿ, , ಕರುಣಾಮಯಿಗಳಾಗಿರುವುದರಲ್ಲಿ ಹೆಮ್ಮೆಯನ್ನು ಹೊಂದೋಣ. ನಮ್ಮ ಆಂತರ್ಯದಲ್ಲಿ ಶಾಂತಿಯನ್ನು ಸಾಧಿಸದ ತನಕ, ವಿಶ್ವ ಶಾಂತಿ ಉಂಟಾಗಲು ಸಾಧ್ಯವಿಲ್ಲ ಅಥವಾ ನಮ್ಮ ವೈಯಕ್ತಿಕ ಜೀವನದಲ್ಲೂ ಯಾವ ರೀತಿಯ ಅಭಿವೃದ್ಧಿಯನ್ನೂ ಹೊಂದಲು ಸಾಧ್ಯವಿಲ್ಲ.