ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾದಲ್ಲಿ ಭಾಗವಹಿಸುವ ಗಜಪಡೆ ನಡುವೆ ಊಟದ ವಿಚಾರವಾಗಿ ಗಲಾಟೆಯಾಗಿದ್ದು, ಕಂಜನ್ ಹೆಸರಿನ ಆನೆಯೊಂದು ಅರಮನೆ ಬಿಟ್ಟು ರಸ್ತೆಗೆ ಓಡಿಬಂದಿರುವ ಘಟನೆ ನಡೆದಿದ್ದು, ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ಆನೆಗಳ ನಡುವಿನ ಕಾದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಊಟ ಮಾಡುವ ವೇಳೆ ಧನಂಜಯ್ ಹಾಗೂ ಕಂಜನ್ ಆನೆಗಳ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಧನಂಜಯ್ ಹೆಸರಿನ ಆನೆಯೂ ಕಂಜನ್ನನ್ನು ಓಡಿಸಿಕೊಂಡು ಹೋಗಿದೆ. ಆನೆಯು ಏಕಾಏಕಿ ಅರಮನೆಯ ಜಯ ಮಾರ್ತಾಂಡ ಮುಖ್ಯ ದ್ವಾರದ ಪಕ್ಕದಲ್ಲಿರುವ ಕೋಡಿ ಸೋಮೇಶ್ವರ ದೇಗುಲದ ದ್ವಾರದಿಂದ ಆಚೆ ಓಡಿ ಬಂದಿದ್ದು, ಧನಂಜಯ ಆನೆಯ ಮಾವುತನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಇದನ್ನೂ ಓದಿ: ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ದಾಖಲೆ ಬರೆದ ಬುಮ್ರಾ
ಅರಮನೆಯ ಜಯ ಮಾರ್ತಾಂಡ ಮುಖ್ಯದ್ವಾರದ ಪಕ್ಕದ ಕೋಡಿ ಸೋಮೇಶ್ವರ ದೇಗುಲದ ದ್ವಾರದಿಂದ ಹೊರಬಂದ ಆನೆ, ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ರಸ್ತಗೆ ಎಂಟ್ರಿಕೊಟ್ಟಿದೆ. ಏಕಾಏಕಿ ಆನೆಯ ಆಗಮನದಿಂದ ಗಾಬರಿಯಾದ ಜನರು ದಿಕ್ಕಾಪಾಲಾಗಿ ಓಡಲು ಶುರು ಮಾಡಿದ್ದಾರೆ. ಆನೆಗಳನ್ನು ನಿಯಂತ್ರಿಸಲು ಹರಸಾಹಸಪಟ್ಟ ಮಾವುತರು ಮತ್ತು ಅಧಿಕಾರಿಗಳು ಕೊನೆಗೆ ಅವನ್ನು ಒಳಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಮಾವುತರು ಹಾಗೂ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಈ ಬಾರಿ ದಸರೆಗೆ ಒಟ್ಟು 18 ಆನೆಗಳನ್ನು ಗುರುತಿಸಲಾಗಿದೆ. ಅದರಲ್ಲಿ 14 ಆನೆಗಳು ಮೈಸೂರು ದಸರೆಯಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿವೆ. ಇನ್ನು ನಾಲ್ಕು ಆನೆಗಳನ್ನು ಮೀಸಲು ಆನೆಗಳನ್ನಾಗಿ ಆಯ್ಕೆ ಮಾಡಲಾಗಿದೆ. ಒಂದು ವೇಳೆ ಈ 14 ಆನೆಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಯ, ವ್ಯತ್ಯಾಸಗಳಾದರೆ ಮೀಸಲು ಆನೆಗಳನ್ನು ಬಳಸಲು ತೀರ್ಮಾನಿಸಲಾಗಿದೆ.