ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ದಾಖಲೆ ಬರೆದ ಬುಮ್ರಾ

Bumrah
Published on

ಚೆನ್ನೈ: ಸೆಪ್ಟೆಂಬರ್​ 19ರಂದು ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಎರಡು ಪಂದ್ಯಗಳ ಟೆಸ್ಟ್​​ ಸರಣಿಯಲ್ಲಿ ಟೀಮ್​ ಇಂಡಿಯಾ ಪ್ರವಾಸಿ ತಂಡದ ಎದುರು ಮೇಲುಗೈ ಸಾಧಿಸಿದ್ದು, ಬೃಹತ್​ ಸ್ಕೋರ್​ ಗಳಿಸುವ ಮುನ್ಸೂಚನೆ ನೀಡಿದೆ. ಮೊದಲ ದಿನದಾಟದಲ್ಲಿ ಎಡವಿದರೂ ಎರಡನೇ ದಿನ ವೇಗಿಗಳ ಸಹಾಯದಿಂದ ಭರ್ಜರಿ ಕಮ್​ಬ್ಯಾಕ್​ ಮಾಡಿದ ಭಾರತ ತಂಡವು ಪ್ರವಾಸಿ ತಂಡವನ್ನು ನಲುಗುವಂತೆ ಮಾಡಿತು. ಭಾರತದ ಪರ ವೇಗಿ ಜಸ್ಪ್ರೀತ್​ ಬುಮ್ರಾ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಹೊಸ ದಾಖಲೆಗೆ ಭಾಜನರಾಗಿದ್ದಾರೆ.

ಪಾಕಿಸ್ತಾನದ ನೆಲದಲ್ಲಿ ಟೆಸ್ಟ್​ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದ ಬಾಂಗ್ಲಾದೇಶ ತಂಡವು ಭಾರತದ ವಿರುದ್ಧವೂ ಅದೇ ಫಾರ್ಮ್​ಅನ್ನು ಮುಂದುವರೆಸಬೇಕೆಂಬ ಇರಾದೆಯೊಂದಿಗೆ ಕಣಕ್ಕಿಳಿಯಿತು. ಆದರೆ, ಬಾಂಗ್ಲಾ ಬ್ಯಾಟ್ಸ್​​ಮನ್​ಗಳನ್ನು ಇನ್ನಿಲ್ಲದಂತೆ ಕಾಡಿದ ವೇಗಿ ಬುಮ್ರಾ ಎದುರಾಳಿ ತಂಡವನ್ನು 149 ರನ್​ಗಳಿಗೆ ಆಲೌಟ್​ ಮಾಡುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾದಲ್ಲಿ ಪ್ರಸ್ತುತ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸುತ್ತಿರುವ ಬುಮ್ರಾ ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅಪರೂಪದ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಮೊದಲ ಇನ್ನಿಂಗ್ಸ್​ನಲ್ಲಿ 11 ಓವರ್ ಬೌಲ್ ಮಾಡಿದ ಬುಮ್ರಾ 50 ರನ್ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 400 ವಿಕೆಟ್ ಪೂರೈಸಿದ ಭಾರತದ 10ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ತಂಡದ ಪರ ಮೂರು ಮಾದರಿಗಳಲ್ಲೂ ಅದ್ಭೂತ ಪ್ರದರ್ಶನ ನೀಡಿರುವ ಬುಮ್ರಾ ಟೀಮ್​ ಇಂಡಿಯಾ ಪಾಲಿನ ಆಪತ್ಭಾಂದವ ಎನ್ನಿಸಿಕೊಂಡಿದ್ದಾರೆ.

ಭಾರತ ಪರ ಇದುವರೆಗೆ 70 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಬುಮ್ರಾ 89 ವಿಕೆಟ್ ಪಡೆದಿದ್ದರೆ, 36 ಟೆಸ್ಟ್ ಪಂದ್ಯಗಳಲ್ಲಿ 162 ವಿಕೆಟ್ ಹಾಗೂ 89 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 149 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್‌ಗಳನ್ನು ಪೂರೈಸಿರುವ ಬುಮ್ರಾ ದಿಗ್ಗಜರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಮತ್ತಷ್ಟು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net