ಭೂಗತ ಪಾತಕಿ ರವಿ ಪೂಜಾರಿಯ ಮತ್ತೊಬ್ಬ ಸಹಚರ ಸಿಸಿಬಿ ವಶಕ್ಕೆ

Ravi-Poojary
Published on

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯ ಮತ್ತೊಬ್ಬ ಸಹಚರ ಯೂಸಫ್ ಬಚಾ ಖಾನ್ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿಲ್ಡರ್ ಸುಬ್ಬರಾಜು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಪಟ್ಟ ಯೂಸಫ್ ಬಚಾ ಖಾನ್​ ವಿರುದ್ಧ ಮುಂಬೈನ ಉದ್ಯಮಿಗಳ ಕೊಲೆ ಪ್ರಕರಣಗಳು ದಾಖಲಾಗಿವೆ. ಛೋಟಾ ರಾಜನ್ ಶಾರ್ಪ್ ಶೂಟರ್ ಆಗಿದ್ದ ಯೂಸಫ್ ಖಾನ್​, ರವಿ ಪೂಜಾರಿಗೆ ಸಂಬಂಧಿಸಿದ ಪ್ರಕರಣಗಳಲ್ಲೂ ಭಾಗಿಯಾಗಿದ್ದ. ಛೋಟಾ ರಾಜನ್ ನಂತರ ರವಿಪೂಜಾರಿಗೆ ಈತ ಸಹಚರನಾಗಿದ್ದ. ಈ ಹಿನ್ನೆಲೆಯಲ್ಲಿ ಯೂಸಫ್​ ಬಚಾ ಖಾನ್​ನನ್ನು ಸಿಸಿಬಿ ವಶಕ್ಕೆ ಪಡೆದಿದೆ. ಇದನ್ನೂ ಓದಿರಿ ವಕೀಲನ ಹತ್ಯೆ: ಭೂಗತ ಪಾತಕಿ ರವಿ ಪೂಜಾರಿ ಸಿಸಿಬಿ ವಶಕ್ಕೆ

ಇತ್ತೀಚೆಗೆ ಭೂಗತ ಪಾತಕಿ ರವಿ ಪೂಜಾರಿಯ ಅತ್ಯಾಪ್ತ ಸಹಚರ ಗುಲಾಂ ಅಹಮ್ಮದ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. 26ಕ್ಕೂ ಹೆಚ್ಚು ವರ್ಷ ಭೂಗತ ಜಗತ್ತನ್ನು ಆಳಿದ ಗ್ಯಾಂಗ್​ಸ್ಟರ್ ರವಿ ಪೂಜಾರಿ ಸದ್ಯ ಸಿಸಿಬಿ ವಶದಲ್ಲಿದ್ದಾನೆ. ಈತನ ವಿರುದ್ಧ ಬೆಂಗಳೂರಿನಲ್ಲೇ 46 ಎಫ್​ಐಆರ್ ದಾಖಲಾಗಿದ್ದು, ಇದರಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ಹಪ್ತಾ ವಸೂಲಿ, ಬೆದರಿಕೆಯಂತಹ 20 ಪ್ರಕರಣಗಳಾದರೆ, ಇನ್ನುಳಿದ 26 ಕೇಸ್​ಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅಪರಾಧ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಇಡಿ ಉನ್ನತ ಮೂಲಗಳು ತಿಳಿಸಿದ್ದವು.

ಪಾತಕಿ ಪೂಜಾರಿ ವಿರುದ್ಧ ಮುಂಬೈನಲ್ಲಿ 120ಕ್ಕೂ ಹೆಚ್ಚು ಪ್ರಕರಣಗಳಿದ್ದು, ಮುಂಬೈ ಪೊಲೀಸರು ಈತನಿಗಾಗಿ ಕಾಯುತ್ತಿದ್ದಾರೆ. ರವಿ ಪೂಜಾರಿ ವಿರುದ್ಧ ದೇಶದ ವಿವಿಧೆಡೆ ಹತ್ತಾರು ವರ್ಷಗಳ ಹಿಂದೆ ದಾಖಲಾಗಿ ನಾಮಾವಶೇಷವಾಗಿದ್ದ ಹಲವು ಪ್ರಕರಣಗಳಿಗೆ ಇದೀಗ ಮರುಜೀವ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net