

ಆಂಧ್ರಪ್ರದೇಶ: ಸದ್ಯ ಟಾಲಿವುಡ್, ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ, ಇತ್ತೀಚೆಗೆ ರಣಬೀರ್ ಕಪೂರ್ ಜತೆಗೆ ಅಭಿನಯದ 'ಅನಿಮಲ್' ಚಿತ್ರದ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದು, ಮುಂಬರುವ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗುವ ಮುಖೇನ ಸದ್ಯ ಬ್ಯುಸಿಯಾಗಿದ್ದಾರೆ. ಅನಿಮಲ್ ರಿಲೀಸ್ ಆಗುವ ಮುನ್ನ ಹಾಗೂ ಆದ ಬಳಿಕವೂ ಟ್ರೆಂಡಿಂಗ್ನಲ್ಲಿರುವ ರಶ್ಮಿಕಾ ಇದೀಗ ತಮ್ಮ ಬಹುನಿರೀಕ್ಷಿತ 'ಪುಷ್ಪ 2' ಚಿತ್ರದ ಬಗ್ಗೆ ಯಾವ ಅಪ್ಡೇಟ್ ಕೊಡಲಿದ್ದಾರೆ ಎಂಬ ಕಾತರ ಅವರ ಅಭಿಮಾನಿಗಳಲ್ಲಿ ಹೆಚ್ಚಿದೆ.
ಭಾರತೀಯ ಚಿತ್ರರಂಗದಲ್ಲಿ ಸದ್ಯ ಬಹಳ ಬ್ಯುಸಿಯಿರುವ ನಟಿಯರ ಪೈಕಿ ರಶ್ಮಿಕಾ ಮಂದಣ್ಣ ಮುಂಚೂಣಿಯಲ್ಲಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಚಿತ್ರತಂಡ ನಿರೀಕ್ಷಿಸಿದಂತೆ ಉತ್ತಮ ಗಳಿಕೆ ಕಂಡ 'ಅನಿಮಲ್', ಸಿನಿಪ್ರೇಕ್ಷಕರಿಂದ ವ್ಯಾಪಕ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಇದೆಲ್ಲದರ ಮಧ್ಯೆ ನಟಿಯ ಮುಂದಿನ ಸಿನಿಮಾ 'ಪುಷ್ಪ2' ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ಬುಗಿಲೆದ್ದಿವೆ.
ವದಂತಿಗಳ ಪ್ರಕಾರ, 'ಪುಷ್ಪ 2' ಚಿತ್ರದ ನಿರ್ದೇಶಕರಾದ ಸುಕುಮಾರ್ 'ಅನಿಮಲ್' ಚಿತ್ರದಲ್ಲಿ ರಶ್ಮಿಕಾ ಅಭಿನಯವನ್ನು ಮೆಚ್ಚಿದ್ದು, ತಮ್ಮ ಚಿತ್ರದಲ್ಲಿ ರಶ್ಮಿಕಾಗಾಗಿ ಕೆಲವು ದೃಶ್ಯಗಳನ್ನು ಸೇರಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಆದ್ರೆ, ಇದು ಎಷ್ಟು ನಿಜ ಎಂಬುದು ಸದ್ಯದ ಮಟ್ಟಕ್ಕೆ ತಿಳಿದುಬಂದಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತಂತೆ ಚಿತ್ರತಂಡ ಅಧಿಕೃತವಾಗಿ ತಿಳಿಸಲಿದೆಯಾ ಎಂಬುದನ್ನು ಕಾದು ನೋಡಬೇಕು.
ಡಿಸೆಂಬರ್ 15 ರಂದು 'ಪುಷ್ಪ 2' ಚಿತ್ರೀಕರಣದ ಹೊಸ ವೇಳಾಪಟ್ಟಿ ಪ್ರಾರಂಭವಾಗಲಿದ್ದು, ತಮ್ಮ ಪಾತ್ರಕ್ಕಾಗಿ ರಶ್ಮಿಕಾ ಸೆಟ್ಗೆ ಹಾಜರಾಗಲಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನವಿದೆ,(ಏಜೆನ್ಸೀಸ್).