

ಹೈದರಾಬಾದ್: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ಭಾರತದ ಅತ್ಯಂತ ಜನಪ್ರಿಯ ಹಾಗೂ ಸಿಕ್ಕಾಪಟ್ಟೆ ಬ್ಯುಸಿಯಿರುವ ನಟಿಯರಲ್ಲಿ ಒಬ್ಬರಾಗಿದ್ದು, ಸದ್ಯ ಬ್ಲಾಕ್ಬಸ್ಟರ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಮನರಂಜಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ತಾವು ಅಭಿನಯಿಸಿದ 'ಅನಿಮಲ್' ಸಿನಿಮಾ ಬಿಡುಗಡೆಗೊಂಡು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಕಂಡಿತು. ಈ ಚಿತ್ರದ ಮೂಲಕ ಮತ್ತೊಮ್ಮೆ ಟ್ರೆಂಡಿಂಗ್ಗೆ ಬಂದ ರಶ್ಮಿಕಾ, ಇದೀಗ ಪ್ರಥಮ ಬಾರಿಗೆ ಟಾಲಿವುಡ್ನ ರೆಬೆಲ್ ಸ್ಟಾರ್ ಜತೆಗೆ ನಟಿಸಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಅಭಿಮಾನಿ ಮದುವೆಯಲ್ಲಿ ನಟ ಶ್ರೀಮುರುಳಿ; ಭಾವುಕಳಾದ ವಧು!
ಕಳೆದ ವರ್ಷ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆದ 'ಅನಿಮಲ್' ಚಿತ್ರವು ಜಾಗತಿಕವಾಗಿ ಬಾಕ್ಸ್ ಆಫೀಸ್ನಲ್ಲಿ 900 ಕೋಟಿ ರೂ. ಗಳಿಕೆ ಕಂಡಿತು. ಈ ಸಿನಿಮಾದಲ್ಲಿನ ಅಭಿನಯಕ್ಕಾಗಿ ರಶ್ಮಿಕಾಗೆ ಅಭಿಮಾನಿಗಳಿಂದ ವಿಶೇಷ ಮೆಚ್ಚುಗೆ ಕೂಡ ಸಿಕ್ಕಿತು. ಪ್ರಸ್ತುತ ನಟ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ 'ಪುಷ್ಪಾ 2' ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದು, 2024ರ ಆಗಸ್ಟ್ 15ರಂದು ಈ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಪ್ರಭಾಸ್ ನಟನೆಯ 'ಸ್ಪಿರಿಟ್'ನಲ್ಲಿ ರಶ್ಮಿಕಾ?
'ಸ್ಪಿರಿಟ್' ಸಿನಿಮಾದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ನಟಿಸಲು ರಶ್ಮಿಕಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಿನಿ ವರದಿಗಳು ತಿಳಿಸಿವೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳ ಮೂಲಕ ಯಶಸ್ಸನ್ನು ನೋಡುತ್ತಿರುವ ರಶ್ಮಿಕಾ, ಪ್ರಭಾಸ್ ಜತೆಗಿನ ಚಿತ್ರದಲ್ಲಿಯೂ ಸಹ ಮಿಂಚಲಿದ್ದಾರೆ ಎಂಬ ಲೆಕ್ಕಾಚಾರಗಳಿವೆ. ಸದ್ಯ ಈ ಕುರಿತಂತೆ ಚಿತ್ರತಂಡ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ. ಅಧಿಕೃತ ಘೋಷಣೆಗೆ ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).