More

    ರೈಲ್ವೆಯಿಂದ ಒಳಪೇಟೆ ರಸ್ತೆ ಬಂದ್!: ಹಳಿ ದಾಟಲು ಜನರ ಸರ್ಕಸ್

    ಅನ್ಸಾರ್ ಇನೋಳಿ ಉಳ್ಳಾಲ

    ತೊಕ್ಕೊಟ್ಟು ಒಳಪೇಟೆಗೆ ಹೋಗುವುದೀಗ ಸರ್ಕಸ್ ಬಲ್ಲವರಿಗಷ್ಟೇ ಸುಲಭ, ಯಾಕೆಂದರೆ ರೈಲ್ವೆ ಇಲಾಖೆ ಇಲ್ಲಿನ ಸಂಪರ್ಕ ರಸ್ತೆಯನ್ನೇ ಮುಚ್ಚಿದೆ. ಮಹಿಳೆಯರು, ವಯಸ್ಕರ ಪಾಡಂತೂ ಹೇಳ ತೀರದು. ಪರ್ಯಾಯ ಮಾರ್ಗ ಹುಡುಕುವ ಬದಲು ಇಲಾಖಾ ಅಧಿಕಾರಿಗಳೊಂದಿಗೆ ಸಂಘರ್ಷಕ್ಕೆ ನಿಂತಿದ್ದಾರೆ ಜನಪ್ರತಿನಿಧಿಗಳು!

    ತೊಕ್ಕೊಟ್ಟು ಜಂಕ್ಷನ್‌ನಿಂದ 100 ಮೀಟರ್ ಅಂತರದಲ್ಲಿರುವ ರೈಲುಹಳಿ ಸಾರ್ವಜನಿಕರ ಪಾಲಿಗೆ ಅತ್ಯಂತ ಅಪಾಯಕಾರಿಯಾದರೂ, ಅಗತ್ಯವುಳ್ಳವರು ಇದನ್ನು ದಾಟುವುದು ಅನಿವಾರ್ಯ. ಈ ಭಾಗದಲ್ಲಿರುವ ಖಾಸಗಿ, ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳು, ಕಾಲೇಜುಗಳು, ಮಾರುಕಟ್ಟೆ, ವ್ಯಾಪಾರಿ ಕೇಂದ್ರಗಳು, ಅಂಬೇಡ್ಕರ್ ರಂಗ ಮಂದಿರ, ಬ್ಯಾಂಕುಗಳು, ವಸತಿಗಳಿದ್ದು ಜನನಿಬಿಡ ಪ್ರದೇಶ ಆಗಿದೆ. ಒಂದು ಕಾಲದಲ್ಲಿ ತೊಕ್ಕೊಟ್ಟು ಪರಿಸರಕ್ಕೆ ಇದುವೇ ಪ್ರಮುಖ ವ್ಯಾಪಾರಿ ಕೇಂದ್ರವೂ ಆಗಿತ್ತು. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಇಲ್ಲಿರುವ ರೈಲು ಹಳಿ ದಾಟಿಯೇ ಹೋಗಬೇಕು. ಉಳ್ಳಾಲ ದರ್ಗಾ, ಸಂತ ಸೆಬಾಸ್ಟಿಯನ್ ಚರ್ಚ್, ಭಗವತೀ ಸಹಿತ ಇತರ ದೈವ ದೇವಸ್ಥಾನಗಳಿಗೆ ನಡೆದುಕೊಂಡು ಹೋಗುವ ಭಕ್ತರಿಗೆ ಇದು ಹತ್ತಿರದ ದಾರಿಯೂ ಹೌದು.

    ಪ್ರತಿದಿನ ಮಂಗಳೂರಿನಿಂದ ಕೇರಳ, ತಮಿಳ್ನಾಡುವಿಗೆ ಪ್ಯಾಸೆಂಜರ್, ಎಕ್ಸ್‌ಪ್ರೆಸ್, ಸೂಪರ್ ಎಕ್ಸ್‌ಪ್ರೆಸ್ ಹೀಗೆ ಹಲವು ರೈಲುಗಳು ಇಲ್ಲಿಂದ ಚಲಿಸುತ್ತವೆ. ಒಂದು ಹಳಿ ಇದ್ದ ಸಂದರ್ಭವೇ ಈ ಭಾಗದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದರೆ, ಎರಡು ಹಳಿಗಳು ನಿರ್ಮಾಣವಾದ ಬಳಿಕವಂತೂ ಸಾವಿನ ಸಂಖ್ಯೆ ಹೆಚ್ಚಾಗಿದೆ. ಹಳಿಗೆ ಅಡ್ಡಲಾಗಿ ಗೇಟು ಅಥವಾ ಇನ್ಯಾವುದೇ ವ್ಯವಸ್ಥೆ ಇಲ್ಲದಿರುವುದು, ರೈಲು ಯಾವ ಹಳಿಯಲ್ಲಿ ಬರುತ್ತಿವೆ ಎನ್ನುವ ಗೊಂದಲದಿಂದಲೂ ಅಪಘಾತ ನಡೆಯುತ್ತಿವೆ.ರೈಲು ಬರುವ ಸಂದರ್ಭ ರಿಕ್ಷಾ ಚಾಲಕರು ಹಳಿ ದಾಟುವವರಿಗೆ ಎಚ್ಚರಿಕೆ ನೀಡುತ್ತಾರಾದರೂ ಕೆಲವೊಮ್ಮೆ ಅದರ ಬಗ್ಗೆ ಗೊತ್ತಿಲ್ಲದೆಯೂ ಅಪಘಾತ ನಡೆಯುತ್ತಿದ್ದವು.

    ಹಳಿ ಮುಚ್ಚಿದ್ದ ರೈಲ್ವೆ ಇಲಾಖೆ!

    ಈ ಭಾಗದಲ್ಲಿ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ಜೀವಹಾನಿಯಾಗುವ ಸನ್ನಿವೇಶ ಹಿಂದಿನಿಂದಲೇ ಇತ್ತು. ಮೂರು ವರ್ಷಗಳ ಹಿಂದೆ ಜೆಪ್ಪುವಿನಲ್ಲಿ ರೈಲು ಬಡಿದು ಮಹಿಳೆಯರಿಬ್ಬರು ಸಾವಿಗೀಡಾದ ಬಳಿಕ ಎಚ್ಚೆತ್ತುಕೊಂಡ ಇಲಾಖೆ ಅಧಿಕಾರಿ, ಕಾರ್ಮಿಕರನ್ನು ಕಳಿಸಿ ಹಳಿಗೆ ಕಬ್ಬಿಣದ ಗೇಟ್‌ಗಳನ್ನು ಅಳವಡಿಸಲು ಮುಂದಾಗಿದ್ದರು. ಇದಕ್ಕೆ ಸಾರ್ವಜನಿಕರು, ಉಳ್ಳಾಲ ನಗರಸಭೆಯ ಪ್ರತಿನಿಧಿಗಳು ಆಕ್ಷೇಪ ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೇಟ್ ಬದಿಯಲ್ಲೊಂದು ಸಣ್ಣ ರಸ್ತೆ ಇಟ್ಟು ಒಂದು ತಿಂಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ರೈಲ್ವೆ ಇಲಾಖೆ ನಗರಸಭೆಗೆ ಗಡುವು ನೀಡಿತ್ತು. ಈ ಪ್ರಕ್ರಿಯೆ 2021ರ ಸೆಪ್ಟೆಂಬರ್‌ನಲ್ಲಿ ನಡೆದಿತ್ತು.

    ನಂತರದ ದಿನಗಳಲ್ಲಿ ನಗರಸಭೆಯಿಂದಲೂ ಪರ್ಯಾಯ ವ್ಯವಸ್ಥೆ ಆಗದ ಕಾರಣ ಇದೀಗ ಪೂರ್ಣಪ್ರಮಾಣದಲ್ಲಿ ಗೇಟ್ ಹಾಕಲಾಗಿದೆ. ಯುವಕರು ಗೇಟ್ ಮೇಲಿಂದ ಹಳಿ ದಾಟಿದರೆ ಮಕ್ಕಳು ಮತ್ತು ಮಹಿಳೆಯರು ಅಡಿಭಾಗದಿಂದಲೂ, ಗೇಟ್ ಪಕ್ಕ ಇರುವ ಸಣ್ಣ ಜಾಗದಿಂದಲೂ ನುಸುಳಿ ಹೋಗುವ ಸನ್ನಿವೇಶ ಪ್ರತಿದಿನ ಕಾಣಲು ಸಿಗುತ್ತದೆ. ಆದರೆ ವಯಸ್ಕರ ಸಂಕಷ್ಟ ಕೇಳುವವರೇ ಇಲ್ಲ.

    ಕೆಳ ಸೇತುವೆ ಅಭಿವೃದ್ಧಿ ಅಗತ್ಯ

    ಹಿಂದೆ ತೊಕ್ಕೊಟ್ಟು ಜಂಕ್ಷನ್‌ನಲ್ಲಿದ್ದ ಪೆಟ್ರೋಲ್ ಪಂಪ್ ಹಿಂಭಾಗದಲ್ಲಿ ರೈಲು ಹಳಿ ದಾಟುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಳಸೇತುವೆ ನಿರ್ಮಿಸಲಾಗಿತ್ತು. ಆದರೆ ಸಾರ್ವಜನಿಕರು ಬಳಸದ ಕಾರಣ ಕ್ರಮೇಣ ಈ ರಸ್ತೆ ಮುಚ್ಚಲ್ಪಟ್ಟು ನೀರು ಹರಿದಾಡುವ ಕಾಲುವೆಯಾಯಿತು. ಕೆಲವು ವರ್ಷಗಳ ಹಿಂದೆ ಪೆಟ್ರೋಲ್ ಪಂಪ್ ಹಿಂಭಾಗದಲ್ಲಿ ಮಸೀದಿ ನಿರ್ಮಾಣವಾಗಿದ್ದು, ಇಲ್ಲಿಗೆ ಬರುವ ಜನ ಹತ್ತಿರದ ರಸ್ತೆಯನ್ನಾಗಿ ಕೆಳಸೇತುವೆ ಬಳಸಲು ಆರಂಭಿಸಿದರು. ದಿನ ಕಳೆದಂತೆ ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರ ಆರಂಭಗೊಂಡಿತು. ಪ್ರಸ್ತುತ ಈ ರಸ್ತೆಯನ್ನೂ ಬಂದ್ ಮಾಡಲಾಗಿದ್ದು ವಾಹನಗಳೂ ಇಲ್ಲ, ಸಾರ್ವಜನಿಕರ ಸಂಚಾರವೂ ಇಲ್ಲ. ಇದನ್ನೇ ಸರಿಪಡಿಸಿದರೆ ತೊಕ್ಕೊಟ್ಟು ಒಳಪೇಟೆಗೆ ಹೋಗಲು ಪರ್ಯಾಯ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ.

    ರೈಲು ಹಳಿ ದಾಟಿ ಸಾಗುವ ಸಾರ್ವಜನಿಕರಿಗೆ ಭವಿಷ್ಯದ ದಿನಗಳಲ್ಲಿ ಯಾವುದೇ ತೊಂದರೆ ಆಗಬಾರದು, ಈ ಹಿನ್ನೆಲೆಯಲ್ಲಿ ಮೇಲ್ಸೇತುವೆ ನಿರ್ಮಾಣ ಅಥವಾ ಸನಿಹದಲ್ಲಿರುವ ಕೆಳಸೇತುವೆವರೆಗೆ ರಸ್ತೆ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

    -ಯು.ಟಿ.ಖಾದರ್, ಸ್ಪೀಕರ್

    ರೈಲ್ವೆ ಇಲಾಖೆ ಗೇಟ್ ಹಾಕಿರುವುದರಿಂದ ಪೆರ್ಮನ್ನೂರು ಚರ್ಚ್, ಸಭಾಂಗಣ, ಶಾಲೆ, ಕಾಲೇಜುಗಳು, ಹಲವು ದೇವಸ್ಥಾನ, ಮಾರುಕಟ್ಟೆ ಇರುವ ತೊಕ್ಕೊಟ್ಟು ಒಳಪೇಟೆಗೆ ಹೋಗಲು ಜನಸಾಮಾನ್ಯರಿಗೆ ತೊಂದರೆಯಾಗಿದೆ, ಈ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ಅಗತ್ಯ.

    -ಮ್ಯಾಕ್ಸಿಂ ಡಿಸೋಜ
    ಉಪಾಧ್ಯಕ್ಷ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts