ಕಾಮಪ್ರಚೋದಕ ಡ್ರೆಸ್​ ಧರಿಸಿದ್ದಕ್ಕೆ ಹೈಸ್ಕೂಲ್​ ಶಿಕ್ಷಕಿ ಸಸ್ಪೆಂಡ್?!​

Teacher Feature
Published on

ನವದೆಹಲಿ: ಸಲ್ವಾರ್​ ಕಮೀಜ್​ ಧರಿಸಿರುವ ಮಹಿಳೆಯೊಬ್ಬಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಮಾದಕವಾಗಿ ಡ್ರೆಸ್​ ಮಾಡಿಕೊಂಡಿದ್ದಕ್ಕೆ ಆಸಿಯಾ ಜುಬೇರ್​ ಹೆಸರಿನ ಪಾಕಿಸ್ತಾನಿ ಶಿಕ್ಷಕಿಯನ್ನು ಅಮಾನತ್ತು ಮಾಡಲಾಗಿದೆ ಎಂದು ಅಡಿಬರಹ ಬರೆಯಲಾಗಿದೆ.

ಚಮ್ಕೀಲಿ ಮೀಮ್ಸ್​ ಹೆಸರಿನ ಪೇಜ್​ನಲ್ಲಿ ಫೋಟೋ ಶೇರ್​ ಆಗಿದೆ. ಪಾಕಿಸ್ತಾನದ ಲಾಹೋರ್​ ಶಾಲೆಯೊಂದರ ಶಿಕ್ಷಕಿಯು ಮಾದಕವಾಗಿ ಡ್ರೆಸ್​ ಮಾಡಿಕೊಂಡಿದ್ದಕ್ಕೆ ಕೆಲಸದಿಂದ ಅಮಾನತ್ತು ಮಾಡಲಾಗಿದೆ ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿದೆ. ಇದೀಗ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಅಲ್ಲದೆ, ವೈರಲ್​ ಫೋಟೋ ಮೇಲೆ ಆಸಿಯಾ ಜುಬೇರ್​ ಮಾಡಿದ್ದಾರೆನ್ನಲಾದ ಟ್ವೀಟ್ ಸ್ಕ್ರೀನ್​ ಶಾಟ್​ ಸಹ ಇದೆ. ಶಾಲಾ ಆಡಳಿತ ಮಂಡಳಿಯಿಂದ ನನಗೆ ಅಮಾನತ್ತು ಆದೇಶವಿರುವ ಪತ್ರ ಬಂದಿದೆ. ಮಾದಕವಾಗಿ ಉಡುಗೆ ಧರಿಸುವುದರಿಂದ ಫ್ರೌಡಶಾಲಾ ವಿದ್ಯಾರ್ಥಿಗಳಲ್ಲಿ ಕಾಮ ಪ್ರಚೋದನೆಯಾಗುತ್ತದೆ ಎಂದು ಅಮಾನತ್ತು ಮಾಡಿದ್ದಾರೆ. ಸಾಮಾನ್ಯವಾಗಿ ಶಾಲೆಯಲ್ಲಿ ಸಭ್ಯವಾದ ಶಲ್ವಾರ್​ ಕಮೀಜ್​ ಜತೆಗೆ ದುಪ್ಪಟ್ಟ ಧರಿಸುತ್ತೇವೆ. ಅವರು ನನ್ನಿಂದ ಇನ್ನೇನು ಬಯಸುತ್ತಾರೆಂದು ನನಗೆ ತಿಳಿದಿಲ್ಲ. ನಿಜಕ್ಕೂ ಇದು ವಿಚಿತ್ರ ಎಂದು ಟ್ವೀಟ್​ ಮಾಡಿದಂತಿದೆ. ವೈರಲ್​ ಆಗಿರುವ ಆ ಫೋಟೋವನ್ನು ನೀವಿಲ್ಲಿ ಕಾಣಬಹುದು.

ಫ್ಯಾಕ್ಟ್​ಚೆಕ್​ ಹೇಳಿದ್ದೇನು?

ಆದರೆ, ವೈರಲ್​ ಫೋಟೋ ನಕಲಿ ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಬಹಿರಂಗವಾಗಿದ್ದು, ವೈರಲ್​ ಆಗಿರುವ ಫೋಟೋ ಭಾರತದ ಮಾಡೆಲ್ ಒಬ್ಬರದ್ದು ಎಂದು ತಿಳಿದುಬಂದಿದೆ. ಉಡುಗೆ ಕಾರಣಕ್ಕೆ ಶಿಕ್ಷಕಿಯನ್ನು ಅಮಾನತ್ತು ಮಾಡಿದ ಯಾವುದೇ ನಂಬಲಾರ್ಹ ವರದಿಯೂ ಸಹ ಪಾಕಿಸ್ತಾನ ಮೂಲಗಳಿಂದ ಖಚಿತವಾಗಿಲ್ಲ. ​

ವೆಬ್​ಸೈಟ್​ ಒಂದರಲ್ಲಿ ಲೇಖನ ಪ್ರಕಟ

ಗೂಗಲ್​ ರಿವರ್ಸ್​ ಇಂಜಿನ್​ ಸಹಾಯದ ಮೂಲಕ ವೈರಲ್​ ಫೋಟೋ ಹುಡುಕಾಡಿದಾಗ "ರಿಪಬ್ಲಿಕ್​ ಆಫ್​ ಬಜ್​" ಹೆಸರಿನ ವೆಬ್​ಸೈಟ್​ನಲ್ಲಿ ಆಗಸ್ಟ್​ 17ರಲ್ಲಿ ಲೇಖನವೊಂದು ಪ್ರಕಟವಾಗಿದೆ. ಅದರಲ್ಲಿ ಆಸಿಯಾ ಜುಬೇರ್​ ಅವರಿಗೆ 30 ವರ್ಷ. ಇಬ್ಬರು ಮಕ್ಕಳಿದ್ದು, 12 ವರ್ಷದಿಂದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಉಡುಗೆ ತುಂಬಾ ಕಾಮ ಪ್ರಚೋದಕವಾಗಿರುವುದರಿಂದ ಕಳೆದ ಆಗಸ್ಟ್​ 11ರಲ್ಲಿ ಅಮಾನತ್ತು ಮಾಡಲಾಗಿದೆ ಎಂದು ವರದಿ ಮಾಡಲಾಗಿದೆ.

ಪ್ರಚಾರದ ತುಣಕಾಗಿರಬಹುದು

ಇದನ್ನು ಗಮನಿಸಿದ ಇಂಡಿಯಾ ಟುಡೆ ಫ್ಯಾಕ್ಟ್​ಚೆಕ್​ ತಂಡ ಗಲ್ಫ್​ ನ್ಯೂಸ್​ನ ಪಾಕಿಸ್ತಾನ ಬ್ಯೂರೋ ಹಿರಿಯ ಸಂಪಾದಕ ಮುಹಮ್ಮದ್​ ರಿಜ್ವಾನ್​ ಸಫ್ದಾರ್​ರನ್ನು ಸಂಪರ್ಕಿಸಿತು. ಈ ಬಗ್ಗೆ ಮಾತನಾಡಿರುವ ಅವರು ಲಾಹೋರ್​ನಲ್ಲಿ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಖಚಿತಪಡಿಸಿದ್ದಾರೆ. ಆ ಲೇಖನ ಪ್ರಚಾರದ ತುಣಕಾಗಿರಬಹುದು. ಲಾಹೋರ್​ನ ಯಾವುದೇ ಮಾಧ್ಯಮ ಈ ಬಗ್ಗೆ ವರದಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇಂಡಿಯನ್​ ಮಾಡೆಲ್​

ಮತ್ತಷ್ಟು ಹುಡುಕಾಡಿದಾಗ ವೈರಲ್​ ಫೋಟೋ ಇಂಡಿಯನ್​ ಮಾಡೆಲ್​ ಝೋಯಾ ಶೇಕ್​ ಅವರದ್ದು ಎಂದು ತಿಳಿದುಬಂದಿದೆ. ಇದೇ ಫೋಟೋ ಮಾಡೆಲ್​ ಝೋಯಾ ಶೇಕ್​ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲೂ ಫೆಬ್ರವರಿ 14ರಂದು ಅಪ್​ಲೋಡ್​ ಆಗಿರುವುದು ಪತ್ತೆಯಾಗಿದೆ. ಇನ್​ಸ್ಟಾಗ್ರಾಂ ಪ್ರೊಫೈಲ್​ ಪ್ರಕಾರ ಝೋಯಾ ಶೇಕ್​ ಓರ್ವ ನಟಿ, ಫ್ಯಾಶನ್​ ಬ್ಲಾಗರ್​ ಮತ್ತು ಮಾಡೆಲ್​ ಆಗಿದ್ದಾರೆ.

ಹೀಗಾಗಿ ವೈರಲ್​ ಆಗಿರುವ ಫೋಟೋದಲ್ಲಿರುವುದು ಝೋಯಾ ಶೇಕ್ ಹೊರತು​ ಆಸಿಯಾ ಜುಬೇರ್ ಅಲ್ಲ. ಅಲ್ಲದೆ, ಆಸಿಯಾ ಜುಬೇರ್ ಹೆಸರಿನಲ್ಲಿ ಇತ್ತೀಚೆಗಷ್ಟೇ ಅಂದರೆ ಕಳೆದ ಜೂನ್​ನಲ್ಲಿ ಟ್ವಿಟರ್​ ಖಾತೆಯನ್ನು ತೆರೆಯಲಾಗಿದೆ. ಅದರಲ್ಲಿ ಕೆಲವೇ ಕೆಲ ಟ್ವೀಟ್​ಗಳಿವೆ. ಆದರೆ, ಅದರಲ್ಲಿ ಮೇಲಿನ ಹೇಳಿಕೆ ಇರುವ ಯಾವುದೇ ಟ್ವೀಟ್​ ಇಲ್ಲ. ಆದರೆ, ಆಗಸ್ಟ್​ 19ರಂದು ರಿಪಬ್ಲಿಕ್​ ಬಜ್​ ವೆಬ್​ಸೈಟ್​ನಲ್ಲಿ ಪ್ರಕಟಗೊಂಡ ಲೇಖನವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ.

ಕೊನೆಯದಾಗಿ ತಿಳಿಯುವುದೇನೆಂದರೆ ವೈರಲ್​ ಫೋಟೋಗೂ ಅಡಿಬರಹಕ್ಕೂ ಯಾವುದೇ ಸಂಬಂಧವಿಲ್ಲ. ವೈರಲ್​ ಫೋಟೋದಲ್ಲಿರುವುದು ಆಸಿಯಾ ಜುಬೇರ್​ ಅಲ್ಲ. ಅವರು ಭಾರತದ ಮಾಡೆಲ್​ ಝೋಯಾ ಶೇಕ್​. ಹೀಗಾಗಿ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ನಂಬಲಾರ್ಹವಾದುದ್ದಲ್ಲ. ಅದೊಂದು ಸುಳ್ಳು ಮಾಹಿತಿಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net