ಅತ್ಯಾಚಾರಿಗೆ 20 ವರ್ಷ ಜೈಲು

court
Published on

ಬೆಂಗಳೂರು: ಪ್ರೇಯಸಿ ಜತೆಗೆ ಲಿವಿಂಗ್ ಟುಗೆದರ್‌ನಲ್ಲಿ ಇದ್ದುಕೊಂಡು ಆಕೆಯ ಮಗಳ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಗತಿಪುರ ನಿವಾಸಿ ಕೆವಿನ್ ಶಿಕ್ಷೆಗೆ ಒಳಗಾದವ. ಸಂತ್ರಸ್ತ ಬಾಲಕಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ 5 ಲಕ್ಷ ರೂ. ಪರಿಹಾರ ಮತ್ತು ಅಪರಾಧಿಯಿಂದ ವಸೂಲಿ ಮಾಡಿದ್ದ 25 ಸಾವಿರ ರೂ. ದಂಡವನ್ನು ಸಹ ಬಾಲಕಿಗೆ ನೀಡುವಂತೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ ಕೋರ್ಟ್‌ನ ನ್ಯಾಯಾಧೀಶ ಎಸ್. ಮಹೇಶ್ ಆದೇಶದಲ್ಲಿ ಸೂಚಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ಗೊರವರ, ಬಾಲಕಿ ಪರ ವಾದ ಮಂಡಿಸಿದ್ದರು.

ಸಂತ್ರಸ್ತೆಯ ತಾಯಿಗೆ ನಾಲ್ವರು ಮಕ್ಕಳು. ತಂದೆ ದೂರವಾಗಿದ್ದ. ನೊಂದ ಬಾಲಕಿ, ಅಜ್ಜಿ ಮನೆಯಲ್ಲಿ ಇದ್ದುಕೊಂಡು 7ನೇ ತರಗತಿ ಓದುತ್ತಿದ್ದಳು. ಉಳಿದ ಮೂವರು ತಾಯಿ ಜತೆ ಇದ್ದರು. ಇದರ ನಡುವೆ ಬಾಲಕಿಯ ತಾಯಿ ಜತೆಗೆ ಕೆವಿನ್ ಲಿವಿಂಗ್ ಟುಗೆದರ್‌ನಲ್ಲಿದ್ದ. 2022ರ ಏಪ್ರಿಲ್‌ನಲ್ಲಿ ಶಾಲೆಗೆ ರಜೆ ಇದ್ದ ಕಾರಣಕ್ಕೆ ಬಾಲಕಿಯು ಅಜ್ಜಿ ಮನೆಯಿಂದ ತಾಯಿ ಮನೆಗೆ ಬಂದಿದ್ದಳು. ಈ ವೇಳೆ ಕೆವಿನ್, ಆಕೆಯ ಜತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ.

ಅಲ್ಲದೆ, ನಿನ್ನ ಪ್ರೀತಿ ಮಾಡುತ್ತಿದ್ದಾಗಿ ಪುಸಲಾಯಿಸಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರ ಎಸಗಿದ್ದ. ನೊಂದ ಬಾಲಕಿ, ತನ್ನ ತಾಯಿ ಬಳಿ ಹೇಳಿಕೊಂಡಿದ್ದಳು. ಈ ಬಗ್ಗೆ ತಾಯಿ, ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಪರಾಧಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net