ಇನ್‌ಸ್ಟಾ ಗ್ರಾಂ ಸ್ನೇಹಿತನಿಂದ ಅತ್ಯಾಚಾರ

rape (1)
Published on

ಬೆಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಗೆ ಮದುವೆ ಆಗುವುದಾಗಿ ನಂಬಿಸಿ ಖಾಸಗಿ ಕ್ಷಣಗಳನ್ನು ಕಳೆದು ವಂಚಿಸಿದ್ದ ಖಾಸಗಿ ಹಡಗು ನೌಕರರನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಬಿಲಾಲ್ ರಫೀಕ್ (30) ಬಂಧಿತ. ಛತ್ತಿಸ್‌ಘಡ ಮೂಲದ 30 ವರ್ಷದ ಯುವತಿಗೆ ಮದುವೆ ಆಗುವುದಾಗಿ ವಂಚಿಸಿ, ಜಾತಿ ನಿಂದನೆ ಮಾಡಿದ್ದಾನೆ. ಈ ಸಂಬಂಧ ಸಂತ್ರಸ್ತೆ ಬಿಲಾಲ್ ರಫೀಕ್ ಮತ್ತು ಆತನ ತಂದೆ ಮೊಹಮ್ಮದ್ ರಪೀಕ್, ತಾಯಿ ಮುತ್ತಬಿ ರಫೀಕ್, ಸಹೋದರಿ ಅತೀನಾ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದ ಸಂತ್ರಸ್ತೆ, ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿ ದಾಸರಹಳ್ಳಿಯ ಭುವನೇಶ್ವರನಗರದಲ್ಲಿ ವಾಸವಾಗಿದ್ದಾರೆ. 2021ರಲ್ಲಿ ಇನ್‌ಸ್ಟ್ರಾಗ್ರಾಂನಲ್ಲಿ ಬಿಲಾಲ್ ಪರಿಚಯ ಆಗಿದ್ದು, ಮೊಬೈಲ್ ನಂಬರ್ ಬದಲಾಯಿಸಿಕೊಂಡು ಕಾಲ್ ಮತ್ತು ಚಾಟಿಂಗ್ ಶುರು ಮಾಡಿದ್ದರು. 2022ರ ಮೇನಲ್ಲಿ ಆರೋಪಿ ಬೆಂಗಳೂರಿಗೆ ಬಂದು ಸಹಕಾರನಗರದ ಹೋಟೆಲ್‌ಗೆ ಕರೆದೊಯ್ದು ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಕೆಲ ತಿಂಗಳ ಬಳಿಕ ಗರ್ಭಿಣಿಯಾದಾಗ, ಮಕ್ಕಳು ಬೇಡ ಎಂದು ಗರ್ಭಪಾತ ಮಾಡಿಸಿದ್ದ. 2023ರಲ್ಲಿ ಮತ್ತೊಮ್ಮೆ ಬೆಂಗಳೂರಿಗೆ ಬಂದು ದೈಹಿಕ ಸಂಪರ್ಕ ಬೆಳೆಸಿ 2ನೇ ಬಾರಿಯೂ ಗರ್ಭಪಾತ ಮಾಡಿಸಿದ್ದ.

2024ರ ಫೆಬ್ರವರಿಯಿಂದ ಏಪ್ರಿಲ್‌ವರೆಗೂ ವೀರಣ್ಣನಪಾಳ್ಯದ ಪಿಜಿಯೊಂದರಲ್ಲಿ ಇಬ್ಬರು ಉಳಿದಿದ್ದರು. ಸಂತ್ರಸ್ತೆಯ ಸ್ವಂತ ಊರಿಗೆ ಹೋಗಿ, ಕುಟುಂಬ ಸದಸ್ಯರಿಗೆ ಮದುವೆಗೆ ಒಪ್ಪಿಸಿದ್ದರು. ಸಂತ್ರಸ್ತೆ ಕಡೆಯಿಂದ ಲಕ್ಷಾಂತರ ರೂ. ನಗದು, ಮೊಬೈಲ್, ಇತರೆ ವಸ್ತುಗಳನ್ನು ಆರೋಪಿ ಪಡೆದಿದ್ದ. ಸೆಪ್ಟೆಂಬರ್‌ನಲ್ಲಿ ಆರೋಪಿಯ ತಂದೆ ಮೊಹಮ್ಮದ್ ರಫೀಕ್, ತಾಯಿ ಮತ್ತು ಸಹೋದರಿ, ಸಂತ್ರಸ್ತೆಗೆ ಕರೆ ಮಾಡಿ, ನೀನು ಕೆಳ ಜಾತಿಗೆ ಸೇರಿದವಳು, ಬಿಲಾಲ್ ರಫೀಕ್ ನಿನ್ನನ್ನು ಮದುವೆ ಆಗುವುದಿಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net