

ಮುಂಬೈ: ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಯುಟ್ಯೂಬರ್ ರಣವೀರ್ ಅಲ್ಲಾಬಾಡಿಯಾಗೆ(Ranveer Allahbadia) ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದು ಗೊತ್ತೆ ಇದೆ. ಸಮನ್ಸ್ಗಳಿಗೆ ಗೈರಾಗಿದ್ದ ರಣವೀರ್ ತನ್ನ ಹೇಳಿಕೆ ದಾಖಲಿಸಲು ಸಿದ್ಧವಿರುವುದಾಗಿ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಯುಟ್ಯೂಬರ್ ಸೆಲೆಬ್ರಿಟಿಗಳಾದ ಆಶಿಶ್ ಚಂಚಲಾನಿ ಮತ್ತು ರಣವೀರ್ ಅಲ್ಲಾಬಾಡಿಯಾ ತಮ್ಮ ಹೇಳಿಕೆಗಳನ್ನು ದಾಖಲಿಸಲು ಮಹಾರಾಷ್ಟ್ರ ಸೈಬರ್ ಸೆಲ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪಾಲಕರ ಕುರಿತು ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ರಣವೀರ್ ಅಲ್ಲಾಬಾಡಿಯಾ ಕ್ಷಮೆಯಾಚಿಸಿದ್ದರು.
ಆದರೆ ವಿಚಾರಕ್ಕೆ ಸಂಬಂಧಿಸಿದಂತೆ ರಣವೀರ್ ಅಲ್ಲಾಬಾಡಿಯಾ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಮಯ್ ರೈನಾ ವಿರುದ್ಧ ಹಲವಾರು ಎಫ್‌ಐಆರ್‌ಗಳು ದಾಖಲಾಗಿದ್ದವು. ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಆದರೆ ಸಮನ್ಸ್ ಜಾರಿ ಮಾಡಿದ ಬಳಿಕ ರಣವೀರ್ ಅಲ್ಲಾಬಾಡಿಯಾ ಅವರ ನಿವಾಸಕ್ಕೆ ತೆರಳಿದ್ದ ಪೊಲೀಸರ ತಂಡವು, ಆತನ ಫೋನ್ ಸ್ವಿಚ್ ಆಫ್ ಆಗಿದ್ದು ಮನೆಯನ್ನು ಲಾಕ್ ಮಾಡಲಾಗಿದೆ. ಆದ್ದರಿಂದ ರಣವೀರ್ ಅಲ್ಲಾಬಾಡಿಯಾರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.
ಇನ್ನು ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ರಣವೀರ್ ಅಲ್ಲಾಬಾಡಿಯಾ ಅವರನ್ನು ಟೀಕಿಸಿದ್ದ ಸುಪ್ರೀಂಕೋರ್ಟ್ ಇಂತಹ ನಡವಳಿಕೆಯನ್ನು ಖಂಡಿಸಬೇಕು ಎಂದು ಹೇಳಿತ್ತು. ನೀವು ಜನಪ್ರಿಯರಾಗಿದ್ದೀರಿ ಎಂಬ ಕಾರಣಕ್ಕೆ ಸಮಾಜವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಈ ಭಾಷೆಯನ್ನು ಬಯಸುವ ಯಾರಾದರೂ ಭೂಮಿಯ ಮೇಲೆ ಇದ್ದಾರೆಯೇ? ಅವನ ಮನಸ್ಸಿನಲ್ಲಿ ಏನೋ ಕೊಳಕಾಗಿದ್ದು ಅದನ್ನು ವಾಂತಿ ಮಾಡಲಾಗಿದೆ. ನಾವು ಅವನನ್ನು ಏಕೆ ರಕ್ಷಿಸಬೇಕು ಎಂದು ನ್ಯಾಯಾಲಯ ಹೇಳಿತು. ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಈ ಹೇಳಿಕೆಗಳು ವಿಕೃತ ಮನಸ್ಸನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದರು.
ಪ್ರಕರಣ ಏನು?
ಸ್ಟ್ಯಾಂಡ್-ಅಪ್ ಹಾಸ್ಯನಟ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಯೂಟ್ಯೂಬರ್‌ಗಳಾದ ಆಶಿಶ್ ಚಂಚಲಾನಿ, ಅಪೂರ್ವ ಮುಖಿಜಾ, ರಣವೀರ್ ಅಲ್ಲಾಬಾಡಿಯಾ ಕಾಣಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ರಣವೀರ್ ಅಲ್ಲಾಬಾಡಿಯಾ ಅವರು ಪಾಲಕರ ಲೈಂಗಿಕತೆಗೆ ಸಂಬಂಧಿಸಿದಂತೆ ಆಕ್ಷೇಪಾರ್ಹವಾದ ಮಾತನ್ನು ಹೇಳಿದರು. ಇದಾದ ನಂತರ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಟೀಕಿಸಲಾಯಿತು. ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಬೇಡಿಕೆಗಳು ಹೆಚ್ಚಾದವು.