ಗ್ರಾಮೀಣಾಭಿವೃದ್ಧಿಗೆ ಶ್ರೇಯಾಂಕ

gp ranking
ಕಡೂರು ತಾಲೂಕಿನ ಸೋಮನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕ.
Published on

ಚಿಕ್ಕಮಗಳೂರು: ಕಾಫಿನಾಡಿನ ಗ್ರಾಮಾಭಿವೃದ್ಧಿಗಾಗಿ ಜಿಲ್ಲೆಯಲ್ಲಿ ಶ್ರೇಯಾಂಕ ವ್ಯವಸ್ಥೆ ಜಾರಿಗೊಳಿಸಿದ್ದು, ಗ್ರಾಮ ಪಂಚಾಯಿತಿ ಮಟ್ಟದ ಕೆಲಸಗಳ ವೇಗ ಹೆಚ್ಚಿಸಲು ಜಿಪಂನಿಂದ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 226 ಗ್ರಾಮ ಪಂಚಾಯಿತಿಗಳು ಇದ್ದು, ಕಾರ್ಯ ಪ್ರಗತಿ ಸಾಧಿಸಲು ಪ್ರತಿ ಗ್ರಾಪಂಗೂ ಗುರಿ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಜಿಲ್ಲೆಯಲ್ಲಿ ಶ್ರೇಯಾಂಕ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ರ‌್ಯಾಂಕ್ ಗಳಿಸಲು ಕಾರ್ಯಪ್ರವೃತ್ತರಾಗಿದ್ದಾರೆ.
ಪಂಚಾಯತ್ ರಾಜ್ ಇಲಾಖೆ ಕಾರ್ಯಕ್ರಮಗಳಾದ 15ನೇ ಹಣಕಾಸು ಯೋಜನೆಯ ಅನುದಾನ ವೆಚ್ಚ ಭರಿಸುವುದು, ನರೇಗಾ ಯೋಜನೆಯಲ್ಲಿ ನಿಗದಿತ ಗುರಿಯಂತೆ ಮಾನವ ದಿನಗಳ ಸೃಷ್ಟಿ, ಕಸ ಸಂಗ್ರಹ, ವಿಲೇವಾರಿ, ಬಾಪೂಜಿ ಸೇವಾ ಕೇಂದ್ರದಲ್ಲಿ ಸಕಾಲದಲ್ಲಿ ಸಾರ್ವಜನಿಕ ಸೇವೆಗಳನ್ನು ನೀಡುವುದು, ತೆರಿಗೆ ವಸೂಲಿ ಹೀಗೆ 10 ಅಂಶಗಳ ಗುರಿ ನಿಗದಿಪಡಿಸಲಾಗಿದೆ. ಈ ಬಗ್ಗೆ ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾಮಟ್ಟದ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು. ಪರಿಶೀಲನೆಯಲ್ಲಿ ಯಾವ ಪಂಚಾಯಿತಿ ಯಾವ ಅಭಿವೃದ್ಧಿ ಕೆಲಸದಲ್ಲಿ ಹಿಂದುಳಿದಿದೆ ಎಂಬುದು ತಿಳಿಯುತ್ತದೆ. ಮುಂದಿನ ದಿನಗಳಲ್ಲಿ ಕೆಲಸಗಳಿಗೆ ವೇಗ ನೀಡಿ ಅಭಿವೃದ್ಧಿಪಡಿಸಲು ಅಧಿಕಾರಿಗಳು ಮುಂದಾಗುತ್ತಾರೆ.
ವಿವಿಧ ಯೋಜನೆಗಳಡಿ ಗ್ರಾಮ ಪಂಚಾಯಿತಿಗೆ ಬಿಡುಗೆಯಾಗುವ ಅನುದಾವನ್ನು ಸಮರ್ಪಕವಾಗಿ ಬಳಕೆ ಮಾಡಿ ಅಭಿವೃದ್ಧಿಗೊಳಿಸಬೇಕು. ವೆಚ್ಚವಾದ ಅನುದಾನ ಹಾಗೂ ಕೆಲಸಕ್ಕೆ ವ್ಯತ್ಯಾಸ ಇರಬಾರದು.
ಪ್ರತಿ ಗ್ರಾಪಂನಲ್ಲಿ ಏನು ಕೆಲಸ ಆಗುತ್ತದೆ ಎಂಬುದರ ಬಗ್ಗೆ ಆಯಾ ದಿನ ಫೋರ್ಟಲ್‌ನಲ್ಲಿ ದಾಖಲಿಸಬೇಕು. ಪ್ರಗತಿ ಸಾಧನೆಯ ಆಧಾರದ ಮೇರೆಗೆ ರ‌್ಯಾಂಕ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಆಗಿರುವ ಕೆಲಸದ ಆಧಾರದ ಮೇರೆಗೆ ಪ್ರತಿ ತಿಂಗಳ 5ನೇ ತಾರೀಖು ರ‌್ಯಾಂಕ್ ಪಟ್ಟಿ ಪ್ರಕಟಿಸಲಾಗುತ್ತದೆ.
ಯಾವುದಕ್ಕೆ ಆದ್ಯತೆ?: ನರೇಗಾ ಯೋಜನೆಯಡಿ ಹೆಚ್ಚಾಗಿ ವೈಯಕ್ತಿಕ ಹಾಗೂ ಸಮುದಾಯದ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು. ರಾಜಕಾಲುವೆ, ಚರಂಡಿ, ಶಾಲಾ ಕಾಲೇಜು ಕಾಂಪೌಂಡ್, ಶೌಚಗೃಹ ನಿರ್ಮಾಣ, ವಸತಿ, ಜಮೀನುಗಳಲ್ಲಿ ಬದು, ಇಂಗುಗುಂಡಿಗಳ ನಿರ್ಮಾಣ, ಚೆಕ್ ಡ್ಯಾಂ, ಕೃಷಿಬಾವಿ, ಜಾನುವಾರು ಕೊಟ್ಟಿಗೆ, ಕಲ್ಯಾಣಿಗಳ ಪುನಶ್ಚೇತನ, ಗ್ರಾಪಂ ವ್ಯಾಪ್ತಿಯಲ್ಲಿ ಮಹಿಳಾ ಒಕ್ಕೂಟಗಳನ್ನು ರಚಿಸಿ ಆದಾಯೋತ್ಪನ್ನ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು, ಪ್ರವಾಸಿ ತಾಣಗಳ ಸ್ವಚ್ಛತೆ, ಗ್ರಾಮಗಳಲ್ಲಿ ಮನೆಮನೆಗೆ ನಲ್ಲಿ ನೀರು ಸರಬರಾಜು ಮಾಡುವುದು, ಗ್ರಾಮಗಳಲ್ಲಿ ಆರೋಗ್ಯ ಕಾರ್ಯಕ್ರಮ ಹೀಗೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ನಡೆಸಬೇಕು.
ಶೇ.50ಕ್ಕಿಂತ ಕಡಿಮೆ ಪ್ರಗತಿಯಾದರೆ ಕ್ರಮ: ಅಭಿವೃದ್ಧಿ ಕಾರ್ಯ ಗುರಿ ಸಾಧಿಸಲು ಸಾರ್ವಜನಿಕರು ಸಹಕಾರ ನೀಡಬೇಕು. ಗ್ರಾಪಂ ಆಡಳಿತ ಮಂಡಳಿ ಸಹಕಾರದಿಂದ ಶ್ರೇಯಾಂಕ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ. ಇದಕ್ಕೆ ಗ್ರಾಪಂ ಆಡಳಿತ ಮಂಡಳಿಯ ಉತ್ತಮ ಆಡಳಿತ ಹಾಗೂ ಸಿಬ್ಬಂದಿ ಪರಿಶ್ರಮದ ಫಲವಾಗಿ ಉತ್ತಮ ಸೇವೆ ಮಾಡಬಹುದು. ಆಗಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಪ್ರಥಮ, ಎನ್.ಆರ್.ಪುರ ನಾಗಲಾಪುರ ದ್ವಿತೀಯ ಹಾಗೂ ಕಡೂರು ತಾಲೂಕಿನ ನಿಡುವಳ್ಳಿ ಗ್ರಾಪಂ ತೃತೀಯ ಸ್ಥಾನ ಗಳಿಸಿವೆ. ಪ್ರತಿ ತಿಂಗಳ ಪರಿಶೀಲನೆಯಲ್ಲಿ ಶೇ.50ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ್ದರೆ ಅಂಥ ಗ್ರಾಪಂ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲಾಗುತ್ತದೆ.
ಎಲ್ಲರಿಗೂ ಪ್ರೇರಣೆ: ಪ್ರಗತಿ ಸಾಧಿಸಿರುವ ಗ್ರಾಪಂಗೆ ಅಭಿನಂದನಾ ಪತ್ರ, ಪ್ರಶಂಸೆ ದೊರೆಯುತ್ತದೆ. ಇದು ಜಿಲ್ಲೆಯ ಬೇರೆ ಗ್ರಾಪಂ ಅಧಿಕಾರಿಗಳು ಸಕ್ರಿಯವಾಗಿ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗುತ್ತದೆ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಗ್ರಾಮಗಳಲ್ಲಿ ಕೆಲಸಗಳನ್ನು ಮಾಡಿಸಲು ಸ್ವಯಂತ ಪ್ರೇರಿತರಾಗಿ ಮುಂದೆ ಬರಲು ಪ್ರೇರಣೆಯಾಗಿದೆ. ಇದರಿಂದಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಾಣಬಹುದು. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಲ್ಲಿ ಪಿಡಿಒ, ಕಾರ್ಯದರ್ಶಿ ಬಡ್ತಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಈಗಾಗಲೇ ರ‌್ಯಾಂಕ್ ಗಳಿಸಿರುವ ಗ್ರಾಪಂಗಳಿಗಿಂತ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿ ಸಾಧನೆ ಮಾಡಲು ಇತರ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದೆ ಬಂದಿದ್ದಾರೆ.
ಶ್ರೇಯಾಂಕ ವ್ಯವಸ್ಥೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗ್ರಾಪಂ ಮಟ್ಟದ ಅಧಿಕಾರಿಗಳು ಸಕ್ರಿಯವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಧಿಕಾರಿಗಳ ಕಾರ್ಯ ಸಾಧನೆ ಮೇರೆಗೆ ಮುಂದಿನ ದಿನಗಳಲ್ಲಿ ಬಡ್ತಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಉತ್ತಮ ಕೆಲಸದಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯ. ಶ್ರೇಯಾಂಕ ವ್ಯವಸ್ಥೆಯಡಿ ಯಾವ ಕೆಲಸದಲ್ಲಿ ಪ್ರಗತಿ ಸಾಧಿಸಬೇಕು ಎಂಬುದರ ಪಟ್ಟಿ ತಯಾರಿಸಲಾಗಿದ್ದು, ಪಿಡಿಒಗಳು, ಸಿಬ್ಬಂದಿ, ಜನಪ್ರತಿನಿಧಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ಮಾಹಿತಿ ನೀಡಿದರು.
ಶ್ರೇಯಾಂಕ ವ್ಯವಸ್ಥೆ ಅನುಷ್ಠಾನಗೊಳಿಸಿರುವುದರಿಂದ ಗ್ರಾಪಂನಿಂದ ಯಾವ ಕೆಲಸದಲ್ಲಿ ಹಿಂದೆ ಉಳಿದಿದ್ದೇವೆ ಎಂಬುದು ಗೊತ್ತಾಗುತ್ತದೆ. ಮುಂದಿನ ದಿನಗಳಲ್ಲಿ ಆ ಕೆಲಸದಲ್ಲಿ ಪ್ರಗತಿ ಸಾಧಿಸಲು ಸಹಕಾರಿಯಾಗುತ್ತದೆ. ಉತ್ತಮ ವ್ಯವಸ್ಥೆ ಜಾರಿಗೆ ತಂದಿದ್ದು ಗ್ರಾಪಂ ಪ್ರಗತಿಗೆ ಪೂರಕವಾಗಿದೆ. ಜುಲೈನಲ್ಲಿ ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಗ್ರಾಪಂ ರ‌್ಯಾಂಕ್ ವ್ಯವಸ್ಥೆಯಲ್ಲಿ 105ನೇ ಸ್ಥಾನದಲ್ಲಿತ್ತು. ಹಿಂದೆ ಉಳಿದಿದ್ದ ಕೆಲಸಗಳಿಗೆ ವೇಗ ನೀಡಿದ್ದರಿಂದ 12ನೇ ಸ್ಥಾನಕ್ಕೆ ಬಂದಿದ್ದು, ಪ್ರಥಮ ಸ್ಥಾನ ಪಡೆಯುವ ಗುರಿಯೊಂದಿಗೆ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ಕರ್ತಿಕೆರೆ ಪಿಡಿಒ ಶ್ರೀನಿವಾಗೌಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net