

ರಾಣೆಬೆನ್ನೂರ: ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಕಟ್ಟಿಗೆ ಸುಟ್ಟು ಭಸ್ಮವಾದ ಘಟನೆ ನಗರದ ಇಸ್ಲಾಂಪುರ ಓಣಿಯ ಅಗಸರ ಮಠದ ಬಳಿಯ ಸಂಗಮ ಸಾಮಿಲ್‌ನಲ್ಲಿ ಭಾನುವಾರ ಸಂಭವಿಸಿದೆ.
ಅಹ್ಮದ್ ಅಲಿ ಅತ್ತಾರ ಎಂಬುವರಿಗೆ ಸೇರಿದ ಸಾಮಿಲ್ ಬೆಂಕಿಗಾಹುತಿ ಆಗಿರುವುದು. ಆಕಸ್ಮಿಕವಾಗಿ ಬೆಂಕಿ ಬಿದ್ದ ಕಾರಣ ಸಾಮಿಲ್ ಒಳಗೆ ಇದ್ದ ಅಂದಾಜು 4 ಲಕ್ಷ ರೂ. ಮೌಲ್ಯದ ಬೀಟೆ, ಸಾಗವಾನಿ, ಕರಿಮತ್ತಿ ಸೇರಿ ಇತರ ಬಗೆಯ ಕಟ್ಟಿಗೆಗಳು ಬೆಂಕಿಗೆ ಆಹುತಿಯಾಗಿವೆ. ಅಲ್ಲದೆ ಕಚೇರಿಯಲ್ಲಿದ್ದ ದಾಖಲಾತಿಗಳು, ಕಟ್ಟಿಗೆ ಕೊರೆಯುವ ಮಷಿನ್, ಸಿಸಿ ಟಿವಿ ಕೂಡ ಸುಟ್ಟು ಹೋಗಿವೆ. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.