ಗೋಡ್ಸೆ ವಂಶಸ್ಥರಿಂದ ಗಾಂಧಿ ವಿಚಾರಧಾರೆಗಳ ಕೊಲೆ: ರಣದೀಪ್ ಸಿಂಗ್ ಸುರ್ಜೆವಾಲ

ವಿಜಯವಾಣಿ - 2025-01-18T180328.420
Published on

ಧಾರವಾಡ: “ಗೋಡ್ಸೆ ವಂಶಸ್ಥರು ನಿರಂತರವಾಗಿ ಗಾಂಧಿ ಅವರ ವಿಚಾರಧಾರೆಗಳನ್ನು ಹತ್ತಿಕ್ಕುತ್ತಲೇ ಬಂದಿದ್ದಾರೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದ್ದಾರೆ.

ಧಾರವಾಡದಲ್ಲಿ ಪಕ್ಷದ ನಾಯಕರೊಂದಿಗೆ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜತೆ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುರ್ಜೆವಾಲ, "ಸರ್ಕಾರದ ಹಣದಲ್ಲಿ ನಕಲಿ ಗಾಂಧಿಗಳು ಸಮಾವೇಶ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ಜನವರಿ 30ರಂದು ಗಾಂಧಿ ಅವರ ಹತ್ಯೆಯಾದಾಗ ಅದು ಕೇವಲ ಅವರ ದೇಹದ ಹತ್ಯೆ ಮಾತ್ರವಲ್ಲ. ಗಾಂಧೀಜಿ ಅವರ ವಿಚಾರಧಾರೆಯ ಹತ್ಯೆಯಾಗಿದೆ" ಎಂದರು.

"ಭಾರತದ ಸಂಸ್ಕೃತಿ ಹಾಗೂ ಸಂವಿಧಾನದ ವಿಚಾರವಾಗಿ ಇಂದಿಗೂ ಆ ಹೋರಾಟ ಮುಂದುವರಿಯುತ್ತಿದೆ. ಗೋಡ್ಸೆ, ಹಿಂಸೆ, ವಿಭಜನೆ ವಿಚಾರಧಾರೆ ಹಾಗೂ ಪ್ರೀತಿ, ಸೌಹಾರ್ದತೆಯ ವಿಚಾರ ನಡುವೆ ಸಂಘರ್ಷ ನಡೆಯುತ್ತಿದೆ. ಬಿಜೆಪಿಯವರು ಬೇಧ ಭಾವ ಮಾಡುತ್ತಾರೆ. ನಾವು ಎಲ್ಲರನ್ನು ಸಮನಾಗಿ ಕಾಣುತ್ತೇವೆ. ಬಿಜೆಪಿ ದಲಿತ, ಶೋಷಿತ, ಆದಿವಾಸಿ, ಬಡವರು, ಮಹಿಳೆಯರು, ಯುವಕರ ಮೇಲೆ ದೌರ್ಜನ್ಯ ನಡೆಸಿದರೆ, ನಾವು ಈ ವರ್ಗದವರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದೇವೆ" ಎಂದು ಹೇಳಿದರು.

"ಅವರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಿದರೆ, ನಾವು ಅಲ್ಪಸಂಖ್ಯಾತರಿಗೆ ಸಂವಿಧಾನ ಬದ್ಧವಾಗಿ ಸಮಾನತೆ ನೀಡುತ್ತಿದ್ದೇವೆ. ಅವರು ಶ್ರೀಮಂತರಿಗೆ ನೆರವು ನೀಡಿದರೆ, ನಾವು ಬಡತನದ ವಿರುದ್ಧ ಹೋರಾಟ ಮಾಡಿ, ಎಲ್ಲರಿಗೂ ಸಮಾನ ಅವಕಾಶ ನೀಡುವ ಪ್ರಯತ್ನ ಮಾಡುತ್ತೇವೆ. ಇದೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವ್ಯತ್ಯಾಸ” ಎಂದರು.

ಬಿಜೆಪಿ ಆರೋಪದಲ್ಲಿ ಆಧಾರವಿಲ್ಲ

ಇಡಿ ಸಂಸ್ಥೆ 300 ಕೋಟಿಯಷ್ಟು ಆಸ್ತಿ ಜಪ್ತಿ ವಿಚಾರವಾಗಿ ಕೇಳಿದಾಗ, “ಮೋದಿ ಅವರ ಸರ್ಕಾರ ಹಾಗೂ ಬಿಜೆಪಿ ನಾಯಕರು ಬೆಳಗಾವಿಯಲ್ಲಿ ನಡೆಯುತ್ತಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ಬೆದರಿದ್ದಾರೆ. ಹೀಗಾಗಿ ಇಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಇವರ ಆರೋಪಗಳಿಗೆ ಯಾವುದೇ ಆಧಾರವಿಲ್ಲ, ಅಸ್ಥಿತ್ವವೂ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಅವರ ಹಿಂಬಾಲಕರನ್ನು ಅಪಮಾನ ಮಾಡಿರುವ ಹಿನ್ನೆಲೆಯಲ್ಲಿ ಈ ಸಮಾವೇಶ. ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ಆಗ್ರಹಿಸುತ್ತಿದ್ದು, ಈ ಸಮಾವೇಶಕ್ಕೆ ಬಿಜೆಪಿ ಹೆದರಿ ಈ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ” ಎಂದರು.

ದೆಹಲಿಯಲ್ಲಿ ಉತ್ತಮ ಆಡಳಿತ ನೀಡುವುದು ಕಾಂಗ್ರೆಸ್ ಗುರಿ

ಇಂಡಿಯಾ ಮೈತ್ರಿಕೂಟದಿಂದ ಕಾಂಗ್ರೆಸ್ ಹೊರಗಿಡುವ ಯತ್ನದ ಬಗ್ಗೆ ಕೇಳಿದಾಗ, “ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹೋರಾಟ ಮಾಡುತ್ತಿವೆ. ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಶೀಲಾ ದೀಕ್ಷಿತ್ ಅವರ ನೇತೃತ್ವದಲ್ಲಿ 15 ವರ್ಷಗಳ ಕಾಲ ಅತ್ಯುತ್ತಮ ಆಡಳಿತ ನೀಡಿತ್ತು. ದೆಹಲಿಯಲ್ಲಿ ಸಾಧನೆ ಮಾಡಿದ್ದರೆ ಅದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ. ನಂತರ ದೆಹಲಿ ವಾಯು ಮಾಲೀನ್ಯ, ಕೊಳೆಗೇರಿ ಸೇರಿದಂತೆ ಅನೇಕ ಸಮಸ್ಯೆಗಳಿಂದ ತತ್ತರಿಸಿದೆ. ದೇಶದ ಎಲ್ಲಾ ಭಾಗಗಳಿಂದ ದೆಹಲಿಗೆ ಹೋಗುವ ಜನ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಅನಿವಾರ್ಯತೆ ಎದುರಾಗಿದೆ" ಎಂದರು.

"ದೆಹಲಿಯಲ್ಲಿ ಉಸಿರಾಡುವುದು ಕಷ್ಟವಾಗಿದೆ. ಇದಕ್ಕೆ ಮೋದಿ ಅವರ ಸರ್ಕಾರ ಹಾಗೂ ಆಪ್ ಸರ್ಕಾರ ಪಾಲುದಾರರಾಗಿದ್ದು, ದೆಹಲಿಯ ಸಮಸ್ಯೆಗೆ ಕಾಂಗ್ರೆಸ್ ಪರಿಹಾರವಾಗಿದೆ. ದೆಹಲಿಗೆ ಹೊಸ ಸ್ವರೂಪ ನೀಡಲು ನಾವು ಹೋರಾಟ ಮಾಡುತ್ತಿದ್ದೇವೆ. ರಾಜಕೀಯ ಪಕ್ಷವಾಗಿ ಜನರಿಗೆ ಉತ್ತಮ ಪರ್ಯಾಯ ಆಯ್ಕೆಯಾಗಿರುವುದು ನಮ್ಮ ಕರ್ತವ್ಯ” ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net