

ಕೊಲ್ಕತಾ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ ದೋಷಿ ಎಂದು ಸ್ಥಳೀಯ ಸೀಲ್ದಾ ನ್ಯಾಯಾಲಯ ತೀರ್ಪು ನೀಡಿದೆ(RG Kar Case Verdict). ಶಿಕ್ಷೆಯನ್ನು ಸೋಮವಾರ (ಜನವರಿ 20) ಪ್ರಕಟಿಸುವುದಾಗಿ ತಿಳಿಸಿದೆ.
ಈ ಪ್ರಕರಣದಲ್ಲಿ ತೀರ್ಪು ನೀಡಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು, ನಾನು ಎಲ್ಲಾ ಸಾಕ್ಷ್ಯಗಳನ್ನು, ಸಾಕ್ಷಿಗಳನ್ನು ಪರಿಶೀಲಿಸಿದ್ದೇನೆ ಹಾಗೂ ಎಲ್ಲರ ವಾದಗಳನ್ನು ಕೇಳಿದ್ದೇನೆ. ಇಷ್ಟೆಲ್ಲಾ ಮಾಡಿದ ನಂತರ ನೀವು ಅಪರಾಧ ಮಾಡಿದ್ದೀರಿ ಎಂದು ಸಾಬೀತಾಗಿದೆ. ನೀವು ತಪ್ಪಿತಸ್ಥರು, ನಿಮಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.
ನ್ಯಾಯಾಧೀಶ ತೀರ್ಪು ಪ್ರಕಟಿಸುತ್ತಿದ್ದಂತೆ ಆರೋಪಿ ಸಂಜಯ್ ರಾಯ್, ಈ ಪ್ರಕರಣದಲ್ಲಿ ನನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ. ಈ ಕೆಲಸವನ್ನು ನಾನು ಮಾಡಿಲ್ಲ. ನನ್ನ ಕೊರಳಲ್ಲಿ ರುದ್ರಾಕ್ಷ ಜಪಮಾಲೆಯಿತ್ತು. ಆ ಸಮಯದಲ್ಲಿ ಅದು ಮುರಿಯಬೇಕಿತ್ತು. ಆ ಸ್ಥಳದಲ್ಲಿ ಅದು ಯಾಕೆ ಸಿಗಲಿಲ್ಲ? ಈ ರೀತಿ ಮಾಡಿದವರನ್ನು ಬಿಡಲಾಗುತ್ತಿದೆ. ಇದರಲ್ಲಿ ಒಬ್ಬ ಐಪಿಎಸ್ ಅಧಿಕಾರಿ ಶಾಮೀಲಾಗಿದ್ದಾರೆ ಎಂದು ನ್ಯಾಯಾಧೀಶರಿಗೆ ತಿಳಿಸಿದರು.
ಸಂಜಯ್ ರಾಯ್ಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರಾದ ಅನಿರ್ಬನ್ ದಾಸ್, ಶಿಕ್ಷೆಯ ಪ್ರಮಾಣವನ್ನು ಘೋಷಿಸುವ ಮೊದಲು ಸೋಮವಾರ ಮಾತನಾಡಲು ಅವರಿಗೆ ಅವಕಾಶವಿದೆ ಎಂದು ಹೇಳಿದರು. ಆರೋಪಿಯನ್ನು ಸೋಮವಾರ ವಿಚಾರಣೆ ನಡೆಸಲಾಗುವುದು. ಈಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುತ್ತಿದೆ. ಸೋಮವಾರ ಆತನ ಶಿಕ್ಷೆಯನ್ನು ಪ್ರಕಟಿಸಲಾಗುವುದು. ನಾನು ಪ್ರಕರಣದ ವಿಚಾರಣೆಗೆ 12:30ಕ್ಕೆ ಸಮಯವನ್ನು ನಿಗದಿಪಡಿಸಿದ್ದೇನೆ ಎಂದು ನ್ಯಾಯಾಧೀಶರು ಹೇಳಿದರು.
ತಪ್ಪಿತಸ್ಥನಿಗೆ ನೀಡಿದ ತೀರ್ಪಿಗೆ ಸಂತ್ರಸ್ತೆಯ ಪಾಲಕರು ನ್ಯಾಯಾಧೀಶರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ನ್ಯಾಯಾಲಯವು ತಮ್ಮ ನಂಬಿಕೆಯನ್ನು ಗೌರವಿಸಿದೆ ಎಂದು ತಿಳಿಸಿದರು ಎಂದು ಪಿಟಿಐ ವರದಿ ಮಾಡಿದೆ. ಕಳೆದ ವರ್ಷ ಆಗಸ್ಟ್ 9ರಂದು ಆರ್‌ಜಿ ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಲ್ಕತಾ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ಅಪರಾಧ ಸ್ಥಳದಿಂದ ಪಡೆದ ಸಾಕ್ಷ್ಯದ ಆಧಾರದ ಮೇಲೆ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ಅವರನ್ನು ಬಂಧಿಸಿದ್ದರು. ಕೊಲ್ಕತಾ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐ ಈ ಪ್ರಕರಣವನ್ನು ತನ್ನ ಕೈಗೆ ತೆಗೆದುಕೊಂಡು ತನಿಖೆ ಆರಂಭಿಸಿತು. ಕೇಂದ್ರೀಯ ತನಿಖಾ ಸಂಸ್ಥೆ ತನ್ನ ಚಾರ್ಜ್ ಶೀಟ್‌ನಲ್ಲಿ ಸಂಜಯ್ ರಾಯ್ ಅವರನ್ನು ಪ್ರಮುಖ ಆರೋಪಿ ಎಂದು ಪರಿಗಣಿಸಿದೆ.(ಏಜೆನ್ಸೀಸ್)