69ನೇ ಫಿಲ್ಮ್‌ಫೇರ್ ಪ್ರಶಸ್ತಿ: 'ಅನಿಮಲ್'ಗೆ ಲಭಿಸಿತು ಅತ್ಯುತ್ತಮ ಸಂಗೀತ ಆಲ್ಬಮ್ ಅವಾರ್ಡ್​!

ವಿಜಯವಾಣಿ - 2024-01-29T075250.402
Published on

ಗುಜರಾತ್: ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹಾಗೂ ಬಾಲಿವುಡ್​ ನಟ ರಣಬೀರ್​ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಅನಿಮಲ್' ಚಿತ್ರಕ್ಕೆ ಗುಜರಾತ್​ನಲ್ಲಿ​ ನಡೆದ 69ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಸಂಗೀತ ಆಲ್ಬಮ್ ಪ್ರಶಸ್ತಿ ಲಭಿಸಿದೆ. ಚಿತ್ರವು ಟಾಪ್​ ಸಾಲಿನಲ್ಲಿದ್ದ 'ಜವಾನ್', 'ಪಠಾಣ್' ಸಿನಿಮಾಗಳನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಸಂದೀಪ್ ರೆಡ್ಡಿ ವಂಗಾ ಸೇರಿದಂತೆ ಚಿತ್ರದ ಸಂಗೀತ ನಿರ್ದೇಶಕರು ವೇದಿಕೆಗೆ ತೆರಳಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ನಟರಾದ ರಣಬೀರ್ ಕಪೂರ್, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಅಭಿನಯದ ಆಕ್ಷನ್-ಥ್ರಿಲ್ಲರ್ 'ಅನಿಮಲ್' ಚಿತ್ರಕ್ಕೆ 69ನೇ ಫಿಲ್ಮ್‌ಫೇರ್ ವತಿಯಿಂದ ಅತ್ಯುತ್ತಮ ಸಂಗೀತ ಆಲ್ಬಂ ಪ್ರಶಸ್ತಿ ಬಂದಿದ್ದಕ್ಕೆ ಚಿತ್ರತಂಡ ತುಂಬು ಹೃದಯದ ಧನ್ಯವಾದ ತಿಳಿಸಿದೆ.

ಈ ಪ್ರಶಸ್ತಿಗೆ ಪೈಪೋಟಿಯಲ್ಲಿದ್ದ 'ಡಂಕಿ', 'ಜವಾನ್', 'ಪಠಾಣ್', 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ', 'ತು ಜೂಥಿ ಮೈನ್ ಮಕ್ಕರ್' ಮತ್ತು 'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರಗಳನ್ನು ಹಿಂದಿಕ್ಕಿ ಅನಿಮಲ್ ಪ್ರಶಸ್ತಿಯನ್ನು ಸ್ವೀಕರಿಸಿದೆ. ಚಿತ್ರದಲ್ಲಿರುವ 'ಅರ್ಜನ್ ವೈಲಿ', 'ಸತ್ರಂಗ', 'ಪಾಪಾ ಮೇರಿ ಜಾನ್', 'ಹುವಾ ಮೈನ್', 'ಪೆಹಲೆ ಭಿ ಮೈನ್', 'ಸಾರಿ ದುನಿಯಾ ಜಲ ದೇಂಗೆ' ಮತ್ತು 'ಅಬ್ರಾರ್ ಎಂಟ್ರಿ: ಜಮಾಲ್ ಕುಡು' ಮುಂತಾದ ಹಾಡುಗಳಿಗೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಇದಲ್ಲದೆ ಅಪ್​ಕಮಿಂಗ್​ ಮ್ಯೂಸಿಕ್ ಟಾಲೆಂಟ್​ ಆಗಿ ಹೊರಹೊಮ್ಮಿದ ಗಾಯಕ ಶ್ರೇಯಸ್ ಪುರಾಣಿಕ್ ಅವರ 'ಸತ್ರಾಂಗ' ಹಾಡಿಗೆ ಆರ್‌ಡಿ ಬರ್ಮನ್ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಚಲನಚಿತ್ರ, ನಿರ್ದೇಶಕ, ನಟ ವಿಭಾಗಗಳು ಸೇರಿದಂತೆ ಒಟ್ಟು 19 ವಿಭಾಗಗಳಲ್ಲಿ ಚಿತ್ರ ನಾಮನಿರ್ದೇಶನಗೊಂಡಿದೆ.

2023ರಲ್ಲಿ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಕಂಡ ಚಿತ್ರಗಳಲ್ಲಿ ಒಂದಾದ 'ಅನಿಮಲ್​' ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತ್ತು. ಇದೀಗ ಚಿತ್ರವು ಒಟಿಟಿ ಪ್ಲಾಟ್​ಫಾರ್ಮ್​ಗೂ ಕೂಡ ಲಗ್ಗೆಯಿಟ್ಟಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net