More

    ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕಿದೆ

    ಲೋಕಸಭಾ ಚುನಾವಣೆ ಮುಂಬರುವ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆಯುವ ಹಿನ್ನೆಲೆಯಲ್ಲಿ ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುವುದನ್ನು ತಡೆಯಲು ಕಾನೂನಿಗೆ ತಿದ್ದುಪಡಿ ತರುವುದು ಅವಶ್ಯಕವಾಗಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಚುನಾವಣಾ ಕಾನೂನಿನ ಪ್ರಕಾರ ಯಾವುದೇ ಅಭ್ಯರ್ಥಿ ಸಾರ್ವತ್ರಿಕ ಚುನಾವಣೆ ಅಥವಾ ಉಪ ಚುನಾವಣೆಗಳಲ್ಲಿ ಎರಡು ವಿಭಿನ್ನ ಕ್ಷೇತ್ರಗಳಿಂದ ಸ್ಪರ್ಧಿಸಲು ಅನುಮತಿಸಲಾಗಿದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಸ್ಥಾನಗಳಿಂದ ಚುನಾಯಿತರಾದರೆ, ಆ ವ್ಯಕ್ತಿ ತಾನು ಗೆದ್ದ ಸ್ಥಾನಗಳಲ್ಲಿ ಒಂದನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ.

    ಅಭ್ಯರ್ಥಿ ಎರಡು ಸ್ಥಾನಗಳಿಂದ ಸ್ಪರ್ಧಿಸಿ, ಎರಡನ್ನೂ ಗೆದ್ದರೆ ಒಂದನ್ನು ತೆರವು ಮಾಡಬೇಕಾಗುತ್ತದೆ. ಇದರಿಂದಾಗಿ ಸಾರ್ವಜನಿಕ ಬೊಕ್ಕಸಕ್ಕೆ ಆರ್ಥಿಕ ಹೊರೆ ಉಂಟಾಗುತ್ತದೆ. ಜೊತೆಗೆ ಮಾನವ ಸಂಪನ್ಮೂಲ, ಇತರ ಸಂಪನ್ಮೂಲಗಳು ವ್ಯಯವಾಗುತ್ತವೆ. ಅಲ್ಲದೆ ಕ್ಷೇತ್ರ ತೊರೆದು ಉಪ ಚುನಾವಣೆಗೆ ಕಾರಣವಾಗುವುದು ಕ್ಷೇತ್ರದ ಮತದಾರರಿಗೆ ಮಾಡಿದ ಅನ್ಯಾಯವೂ ಹೌದು. ಒಂದು ವೇಳೆ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನೇ ಉಳಿಸಿಕೊಳ್ಳುವುದಾದರೆ, ಎರಡು ಸ್ಥಾನಗಳಿಂದ ಸ್ಪರ್ಧಿಸಿ, ಎರಡರಲ್ಲೂ ಗೆಲ್ಲುವ ಅಭ್ಯರ್ಥಿ, ತಾನು ತೆರವು ಮಾಡುವ ಸ್ಥಾನದ ಉಪ ಚುನಾವಣೆಯ ವೆಚ್ಚವನ್ನು ಭರಿಸಬೇಕು ಎಂಬ ಕಠಿಣ ನಿರ್ಧಾರವನ್ನು ಮಾಡಬೇಕಿದೆ.

    ಈಗಿರುವ ಜನಪ್ರತಿನಿಧಿ ಕಾಯಿದೆಗೆ ಸೂಕ್ತ ತಿದ್ದುಪಡಿ ಹಾಗೂ ಮಾರ್ಪಾಡುಗಳನ್ನು ತರುವುದು ಅವಶ್ಯಕವಾಗಿದೆ. ಏಕೆಂದರೆ ಸಾರ್ವಜನಿಕ ವಲಯದಲ್ಲಿ ಇದು ಹೆಚ್ಚು ಹೆಚ್ಚು ರ್ಚಚಿತವಾದಲ್ಲಿ ಶಾಸಕಾಂಗವೂ ಇದಕ್ಕೆ ಸಮ್ಮತಿಸಬಹುದು. ಸಾರ್ವಜನಿಕರು ಎಲ್ಲವನ್ನೂ ಮೌನವಾಗಿ ಸಹಿಸುತ್ತಾರೆ ಎಂಬ ಭಾವ, ಆಳುವ ಮಂದಿಗೆ ಬಾರದಿರಲು ಇಂತಹ ಚರ್ಚೆ, ಒತ್ತಾಸೆಗಳು ಅನಿವಾರ್ಯ. ಸುಶಿಕ್ಷಿತ ವರ್ಗ ಇಂತಹ ವಿಷಯಗಳಲ್ಲಿ ಸಕ್ರಿಯವಾಗಿ ಧ್ವನಿ ಎತ್ತಿದರೆ ಅಪೇಕ್ಷಿತ ಬದಲಾವಣೆಗಳು ಕಂಡು ಬಂದೀತು. ಹಾಗೆಯೇ ಈ ಬಗ್ಗೆ ಪ್ರಜ್ಞಾವಂತ ನಾಗರಿಕರೆಲ್ಲರೂ ದನಿ ಎತ್ತಬೇಕಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದೆ. ಈಗಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಒಂದು ಬಾರಿಗೆ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಸ್ಪರ್ಧಿಸುವುದನ್ನು ತಡೆಯಲು ಸರ್ಕಾರ ಹಾಗೂ ಚುನಾವಣಾ ಆಯೋಗ ಮುಂದಾಗಬೇಕಿರುವುದು ಅವಶ್ಯಕ ಹಾಗೂ ಅನಿವಾರ್ಯವಾಗಿದೆ.

    | ಹರಳಹಳ್ಳಿ ಪುಟ್ಟರಾಜು ಪಾಂಡವಪುರ

    ಕೆಲಸದಿಂದ ಮನೆಗೆ ಬಂದ ವ್ಯಕ್ತಿ ಪತ್ನಿಗಾಗಿ ಹುಡುಕಾಡಿದಾಗ ಆಕೆಯ ನಿಜ ಬಣ್ಣ ಬಯಲು: ತಂದೆಯೇ ವಿಲನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts