

ಬೆಂಗಳೂರು: ಪಂಚೆ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವುದರೊಂದಿಗೆ ಲಕ್ಷಾಂತರ ನೇಕಾರರ ಜೀವನಾಧಾರವಾಗಿದೆ. ದೇಶದ ಪರಂಪರೆಯನ್ನು ಪ್ರತಿನಿಧಿಸುವ ಧೋತಿಯನ್ನು ಎಲ್ಲರೂ ಗುರುತಿಸಿ ಗೌರವಿಸಬೇಕು ಎಂದು ರಾಮರಾಜ್ ಕಾಟನ್ನ ಸಂಸ್ಥಾಪಕ ಕೆ.ಆರ್.ನಾಗರಾಜನ್ ಹೇಳಿದ್ದಾರೆ.
ಇತ್ತೀಚೆಗೆ ರಾವಣ ರಾಮ್ ಎಂಬುವವರು ಪಂಚೆ ಧರಿಸಿದ್ದಾರೆ ಎಂಬ ಕಾರಣಕ್ಕೆ, ಪ್ರಸಿದ್ಧ ಒನ್ 8 ಕಮ್ಯೂನ್ ರೆಸ್ಟೋರೆಂಟ್ ಪ್ರವೇಶ ನಿರಾಕರಿಸಿತ್ತು. ಇದು ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿತ್ತು. ‘ದೇಶದ ಸಂಸ್ಕೃತಿಯೊಂದಿಗೆ ಪಂಚೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಇದನ್ನು ಒನ್8 ಕಮ್ಯೂನ್ ಆಡಳಿತ ಮಂಡಳಿ ತಿಳಿದುಕೊಳ್ಳಬೇಕು. ಪಂಚೆಯುಟ್ಟು ಬರುವ ಗ್ರಾಹಕರನ್ನು ಗೌರವಿಸುವಂತೆ ಸಿಬ್ಬಂದಿಗೆ ಅಲ್ಲಿನ ಆಡಳಿತ ಮಂಡಳಿ ತಿಳಿ ಹೇಳಲಿ’ ಎಂದು ಕೆ.ಆರ್.ನಾಗರಾಜ್ ಪಂಚೆ ಮಹತ್ವದ ಕುರಿತು ಪ್ರತಿಕ್ರಿಯಿಸಿದ್ದಾರೆ.
ಯುನಿವರ್ಸಲ್ ಡಿಕ್ಲರೇಶನ್ ಆಫ್ ಹ್ಯೂಮನ್ ರೈಟ್ಸ್ (ಖಿಈಏ)ನ 19ನೇ ವಿಧಿಯಲ್ಲಿ ತಿಳಿಸಿರುವಂತೆ, ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಅಭಿವ್ಯಕ್ತಿಯಾಗಿ ಪ್ರತಿಯೊಬ್ಬರೂ ಅವರವರ ಉಡುಪುಗಳನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ರಾವಣ ರಾಮ್ ಎಂಬುವವರಿಗೆ ಒನ್8 ರೆಸ್ಟೋರೆಂಟ್ನಲ್ಲಿ ಎದುರಾಗಿರುವ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ಸಾಂಸ್ಕೃತಿಕ ಸೂಕ್ಷ್ಮತೆಯ ಬಗೆಗೆ ಇರಬೇಕಾದ ಜ್ಞಾನವನ್ನು ತಿಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಏನಿದು ಘಟನೆ?: ಕ್ರಿಕೆಟಿಗ ವಿರಾಟ್ ಕೊಹ್ಲಿ ಒಡೆತನದ ಮುಂಬೈನಲ್ಲಿರುವ ಒನ್ 8 ರೆಸ್ಟೋರೆಂಟ್ಗೆ ರಾವಣ ರಾಮ್ ಎಂಬುವವರು ಇತ್ತೀಚೆಗೆ ಬಿಳಿ ಪಂಚೆ ಧರಿಸಿ ಬಂದಿದ್ದರು. ಅವರು ಧರಿಸಿದ್ದ ಉಡುಗೆ ರೆಸ್ಟೋರೆಂಟ್ನ ಡ್ರೆಸ್ ಕೋಡ್ ನಿಯಮಾವಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅಲ್ಲಿನ ಭದ್ರತಾ ಸಿಬ್ಬಂದಿ ಒಳಗೆ ತೆರಳಲು ಅವಕಾಶ ಕೊಟ್ಟಿಲ್ಲ. ಈ ಬಗ್ಗೆ ಅವರು ಬೇಸರ ಹೊರಹಾಕಿ ರೆಸ್ಟೋರೆಂಟ್ನ ಮುಂಭಾಗ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.