

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ವೇಳೆ ಲಭ್ಯವಾದ ಮಾಹಿತಿ ಮೇರೆಗೆ ಕೆಲವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯಲಾಗುತ್ತಿದೆ. ಆದರೆ, ವದಂತಿಗಳನ್ನು ಹಬ್ಬಿಸಬೇಡಿ ಹಾಗೂ ಇದಕ್ಕೆ ಕಿವಿಗೊಡಬೇಡಿ ಎಂದು ಎನ್‌ಐಎ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
ಸ್ಫೋಟದಲ್ಲಿ ಶಿವಮೊಗ್ಗ ಜಿಲ್ಲೆಯ ಮುಸಾವೀರ್ ಹುಸೇನ್ ಬಾಂಬ್ ಇಟ್ಟವನಾಗಿದ್ದರೆ, ಅಬ್ದುಲ್ ಮತೀನ್ ತಾಹಾ ಸಂಚುಕೋರನಾಗಿದ್ದಾನೆ. ಕೃತ್ಯಕ್ಕೆ ಸ್ಫೋಟಕ ವಸ್ತುಗಳನ್ನು ಲಾಜಿಸ್ಟಿಕ್ಸೃ್ ನೆರವು ನೀಡಿದ್ದ ಚಿಕ್ಕಮಗಳೂರು ಜಿಲ್ಲೆಯ ಮುಜಾಮಿಲ್ ಷರೀಫ್‌ನನ್ನು ಬಂಧಿಸಲಾಗಿದೆ.
ರಾಜ್ಯ ಮತ್ತು ಹೊರ ರಾಜ್ಯಗಳಲ್ಲೂ ತನಿಖೆ ನಡೆಯುತ್ತಿದೆ. ಈ ಸಂಬಂಧ ಹಲವು ಪುರಾವೆಗಳನ್ನು ಕಲೆ ಹಾಕಲಾಗಿದೆ. ಶಂಕಿತರ ಜತೆ ಸಂಪರ್ಕ ಹೊಂದಿದ್ದವರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ತಲೆಮರೆಸಿಕೊಂಡಿರುವ ಶಂಕಿತರ ಸ್ನೇಹಿತರು, ಕಾಲೇಜು ಸಹಪಾಠಿಗಳೂ ಸೇರಿದ್ದಾರೆ. ಇದೊಂದು ಭಯೋತ್ಪಾದಕ ಕೃತ್ಯವಾಗಿರುವ ಕಾರಣ ಖಚಿತ ಮಾಹಿತಿ ಇಲ್ಲದೆ ಸುದ್ದಿಗಳನ್ನು ಹರಡದಂತೆ ಎನ್‌ಐಎ ಅಧಿಕಾರಿಗಳು ಮನವಿ ಮಾಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್‌ನನ್ನು ಎನ್‌ಐಎ ವಿಚಾರಣೆ ನಡೆಸಿದೆ. ಮಾಸ್ಟರ್ ಮೈಂಡ್‌ಗಳಾದ ಶಂಕಿತ ಐಸಿಸ್ ಉಗ್ರರಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜಿಬ್ ಜತೆ ನಂಟು ಹೊಂದಿದ ಶಂಕೆ ಮೇರೆಗೆ ವಿಚಾರಣೆ ನಡೆಸಲಾಗಿದೆ ಎಂದು ಗೊತ್ತಾಗಿದೆ. ಶಂಕಿತನ ಮೊಬೈಲ್ ಪರಿಶೀಲಿಸಿದಾಗ ಸಾಯಿ ಪ್ರಸಾದ್ ಹೆಚ್ಚು ಕಾಲ ಸಂಭಾಷಣೆ ನಡೆಸಿದ್ದ. ಆದರಿಂದ ಎನ್‌ಐಎ ವಿಚಾರಣೆಗೊಳಪಡಿಸಿದೆೆ. ತೀರ್ಥಹಳ್ಳಿಯಲ್ಲಿ ಪೇಂಟರ್ ಆಗಿರುವ ಸಾಯಿ ಪ್ರಸಾದ್, ಶಂಕಿತನ ಅಂಗಡಿಯಲ್ಲಿ ಮೊಬೈಲ್ ಖರೀದಿಸಿದ್ದ. ಅಲ್ಲದೆ ಆತನ ಮನೆಗೆ ಪೇಂಟ್ ಮಾಡಿಕೊಟ್ಟಿದ್ದ. ಆದ್ದರಿಂದ ಹಲವು ಬಾರಿ ಕರೆ ಮಾಡಿ ಮಾತನಾಡಿದ್ದ ಎನ್ನಲಾಗಿದೆ.