

ಬೆಂಗಳೂರು: ಶುಕ್ರವಾರ (ಮಾ.01) ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಭವಿಸಿದ್ದ ನಿಗೂಢ ವಸ್ತು ಸ್ಫೋಟ ಪ್ರಕರಣಕ್ಕೆ ಇದೀಗ ಹಲವು ತಿರುವು ಪಡೆದುಕೊಳ್ಳುತ್ತಿದ್ದು, ಅದು ಬಾಂಬ್ ಸ್ಫೋಟ ಎಂದು ಡಿಜಿಪಿ ಅಲೋಕ್ ಮೋಹನ್ ನಿನ್ನೆ ತಿಳಿಸಿದರು. ಈ ಬೆನ್ನಲ್ಲೇ ಬೆಂಗಳೂರು ಪೊಲೀಸರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೈಅಲರ್ಟ್ ಮಾಡಿದ್ದು, ಬಿಎಂಟಿಸಿ ಬಸ್ಗಳ ಮೇಲೆ ತೀವ್ರ ನಿಗಾವಹಿಸಿದ್ದಾರೆ.
ಇಂದು ಬೆಳಗ್ಗೆ ಮುಖಕ್ಕೆ ಮಾಸ್ಕ್ ಧರಿಸಿ, ಟೋಪಿ ಧರಿಸುವ ಅನುಮಾನಸ್ಪದ ವ್ಯಕ್ತಿಯೊಬ್ಬ ಘಟನೆಯ ಸುತ್ತಮುತ್ತ ಹೋಗಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಈ ಛಾಯಚಿತ್ರವು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಂಕಿತ ವ್ಯಕ್ತಿಯ ಹಿನ್ನೆಲೆ, ಆತ ಎಲ್ಲೆಲ್ಲಿ ಸಂಚರಿಸಿದ್ದಾನೆ ಎಂಬುದರ ಸಂಪೂರ್ಣ ಮಾಹಿತಿ ಕಲೆಹಾಕುವಲ್ಲಿ ತನಿಖಾ ತಂಡ ನಿರತವಾಗಿದೆ.
ಇದೀಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ಹಲವು ನಗರ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದ್ದು, ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತ, ಬಿಎಂಟಿಸಿಯ ವೋಲ್ವೋ ಬಸ್ನಲ್ಲಿ ಪ್ರಯಾಣಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವರದಿಯ ಹಿನ್ನೆಲೆ ಹದ್ದಿನ ಕಣ್ಣಿಟ್ಟಿರುವ ಖಾಕಿ ಪಡೆ, ಬಿಎಂಟಿಸಿ ಬಸ್ಗಳ ಮೇಲೆ ವಿಶೇಷ ನಿಗಾವಹಿಸಿದೆ.
ಬಿಎಂಟಿಸಿ ಬಸ್ನಲ್ಲಿ ಅನುಮಾನಸ್ಪದ ವಸ್ತು ಕಂಡುಬಂದರೆ ಮಾಹಿತಿ ಕೊಡಿ. ಕೂಡಲೇ ಬಸ್ನ ಚಾಲಕ ಅಥವಾ ನಿರ್ವಾಹಕರ ಗಮನಕ್ಕೆ ತರಬೇಕು ಎಂದು ಬೆಂಗಳೂರು ಸಾರಿಗೆ ಇಲಾಖೆಯ ಎಂಡಿ ಆರ್. ರಾಮಚಂದ್ರನ್ ತಿಳಿಸಿದ್ದಾರೆ. ಶಂಕಿತ ಆರೋಪಿ ಬಿಎಂಟಿಸಿ ವೋಲ್ವೋ ಬಸ್ನಲ್ಲಿ ಪ್ರಯಾಣಿಸಿದ್ದ. ರೂಟ್ ನಂಬರ್ 500ಸಿ ಬಸ್ಸಿನಲ್ಲಿ ಓಡಾಡಿದ್ದಾನೆ ಎಂದು ಮಾಹಿತಿ ದೊರಕಿದೆ.