ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ: ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ

ramesh jarakiholi cd
ramesh jarakiholi
Published on

ಬೆಂಗಳೂರು: ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾದ ಅಶ್ಲೀಲ ವಿಡಿಯೋ ಸಿಡಿ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ವಹಿಸಿದೆ.

ಬುಧವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಗೃಹ ಸಚಿವ ಬಸವರಾಜ‌ ಬೊಮ್ಮಾಯಿ, ಈ ಬಗ್ಗೆ ಚರ್ಚೆ ನಡೆಸಿ ವಿಶೇಷ ತನಿಖಾ ತಂಡ ರಚಿಸಲು ಆದೇಶಿಸಿದರು.

ಈ ಬಗ್ಗೆ ಹೇಳಿಕೆ ನೀಡಿರುವ ಗೃಹ ಸಚಿವ ಬೊಮ್ಮಾಯಿ, ಮಾ.9 ರಂದು ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ನನಗೆ ಪತ್ರ ಬರೆದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಸಲ್ಲಿಕೆಯಾದ ದೂರಿನ ಮೂಲಕ ನನ್ನ ರಾಜಕೀಯ ತೇಜೋವಧೆ ಹಾಗೂ ಮಾನಹಾನಿ ಮಾಡುವ ಉದ್ದೇಶವಿತ್ತು. ಇದರಲ್ಲಿ ಹಲವಾರು ಜನ ಸೇರಿ ಷಡ್ಯಂತ್ರ ರೂಪಿಸಿರುವಂಥದ್ದು ಬಹಳ ಸ್ಪಷ್ಟವಾಗಿರುತ್ತದೆ ಎಂದು ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಈ ಷಡ್ಯಂತ್ರವನ್ನು ರೂಪಿಸಿರುವ ಹಾಗೂ ಇದರ ಹಿಂದಿರುವ ವ್ಯಕ್ತಿಗಳ ಬಗ್ಗೆ ಕೂಲಂಕುಷವಾಗಿ ವಿಚಾರಣೆಯನ್ನು ಮಾಡಲು ಒಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಲು ನಿರ್ಧರಿಸಲಾಗಿದೆ. ಎಡಿಜಿಪಿ ಸೌಮೇಂದು ಮುಖರ್ಜಿ ಅವರು ಇದರ ಹೊಣೆ ಹೊರಲಿದ್ದಾರೆ ಎಂದು ತಿಳಿಸಿದರು.

ಶೀಘ್ರವೇ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದರು.

ಮಾರ್ಚ್ 2 ರಂದು ದಿನೇಶ್ ಕಲ್ಲಹಳ್ಳಿ ಎನ್ನುವರು, 'ಸಚಿವ ರಮೇಶ್ ಜಾರಕಿಹೊಳಿ ಯುವತಿಯೊಬ್ಬಳಿಗೆ ನೌಕರಿ ಕೊಡಿಸುವುದಾಗಿ ಹೇಳಿ, ಅವಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಹಾಗೂ ಅವಳಿಗೆ ಮತ್ತು ಅವಳ ಕುಟುಂಬದವರಿಗೆ ಬೆದರಿಕೆ ಹಾಕಲಾಗುತ್ತಿದೆ' ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ವಿಡಿಯೋ ಬಹಿರಂಗವಾಗಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net