ಉತ್ತಮ ಫೋಟೋ ತೆಗೆಯಲು ಕ್ಯಾಮೆರಾಗಿಂತ ಹೃದಯ ಮುಖ್ಯ ; ರಮೇಶ್ ಅರವಿಂದ್

WhatsApp Image 2022-10-14 at 7.18.23 PM (1)
Published on

ಬೆಂಗಳೂರು: ಉತ್ತಮ ಫೋಟೋ ತೆಗೆಯುವುದಕ್ಕೆ ಕ್ಯಾಮೆರಾಗಿಂತ ಹೆಚ್ಚು ಉತ್ತಮ ಹೃದಯ ಹಾಗೂ ಮನಸ್ಸು ಮುಖ್ಯ ಎಂದು ನಟ, ನಿರ್ದೇಶಕ ಡಾ. ರಮೇಶ್ ಅರವಿಂದ್ ಅಭಿಪ್ರಾಯಪಟ್ಟರು.

ವಿದ್ಯಾಭೂಷಣ ಅವರ ಪುತ್ರ ಅನಿರುದ್ಧ್‌ ವಿದ್ಯಾಭೂಷಣ್ ಅವರ ವನ್ಯಜೀವಿ ಛಾಯಾಗ್ರಹಣದ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನಿರುದ್ಧ್ ಅವರ ಫೋಟೋಗಳು ಒಂದಕ್ಕಿಂತ ಒಂದು ಅದ್ಬುತವಾಗಿವೆ. ವಿದ್ಯಾಭೂಷಣರ ಹಾಡುಗಳನ್ನು ಕೇಳಿದಾಗ ಮನಸ್ಸಿಗೆ ಸಿಗುವ ಅದ್ಭುತ ಅನುಭವ ಇಂದು ಅವರ ಪುತ್ರನ ಫೋಟೋಗಳನ್ನು ನೋಡಿದಾಗ ಸಿಕ್ಕಿದೆ ಎಂದು ಹೇಳಿದರು.

ಯಾವುದೇ ಒಂದು ಫೋಟೋ ತೆಗೆಯುವುದಕ್ಕೆ ಒಂದು ಉತ್ತಮ ಹೃದಯ ಅಗತ್ಯ. ಕ್ಯಾಮೆರಾಕ್ಕಿಂತ ಹೆಚ್ಚಾಗಿ ಉತ್ತಮ ಮನಸ್ಸಿದ್ದರೆ ಒಳ್ಳೆಯ ಫೋಟೋಗಳನ್ನು ಸೆರೆಹಿಡಿಯಬಹುದು. ವನ್ಯಜೀವಿ ಫೋಟೋಗ್ರಫಿ ಮಾಡುವುದಾಗ ರಿಟೇಕ್‌ಗೆ ಅವಕಾಶವಿರುವುದಿಲ್ಲ. ಕೆಲ ಕ್ಷಣ ಆಗುವ ಘಟನೆಗಳನ್ನು ಸೆರೆಹಿಡಿಯಬೇಕು. ಈ ಅದ್ಭುತ ಕ್ಷಣಕ್ಕಾಗಿ ತಾಸುಗಟ್ಟಲೇ, ದಿನಗಟ್ಟಲೇ ಕಾಯಬೇಕು. ಅಂತಹ ತಾಳ್ಮೆಯನ್ನು ಅನಿರುದ್ಧ್ ಮೈಗೂಡಿಸಿಕೊಂಡಿರುವುದಕ್ಕೆ ಇಂತಹ ಅದ್ಭುತ ಫೋಟೋಗಳನ್ನು ತೆಗೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಚಿತ್ರಕಲಾ ಪರಿಷತ್‌ನಲ್ಲಿ ಶುಕ್ರವಾರದಿಂದ ಆರಂಭವಾದ ಛಾಯಚಿತ್ರ ಪ್ರದರ್ಶನ, ಭಾನುವಾರದವರೆಗೆ ನಡೆಯಲಿದೆ. ಈ ವೇಳೆ ಅನಿರುದ್ಧ್ ಆಫ್ರಿಕಾ ಪ್ರವಾಸದಲ್ಲಿ ಸೆರೆಹಿಡಿದ ಅದ್ಭುತ ಕ್ಷಣಗಳ ವಿಡಿಯೊವೊಂದನ್ನು ಇಡೀ ದಿನ ಪ್ರದರ್ಶನ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ನಿವೃತ್ತ ಐಎಫ್‌ಎಸ್ ಅಧಿಕಾರಿ ಎಂ.ಎನ್ ಜಯಕುಮಾರ್, ಲಕ್ಷ್ಮೀಶ ತೋಳ್ಪಾಡಿ, ದಿನೇಶ್ ಕುಂಬ್ಳೆ, ಜಯಂತ್ ಕಾಯ್ಕಿಣಿ ಉಪಸ್ಥಿತರಿದ್ದರು.

ನಿಸರ್ಗ ಎನ್ನುವುದು "ಡು ನಾಟ್ ಡಿಸ್ಟರ್ಬ್" ಎನ್ನುವ ಬೋರ್ಡ್ ಅನ್ನು ಮೊದಲಿನಿಂದಲೂ ಹಾಕಿಕೊಂಡಿದೆ. ಆದರೆ ಅನೇಕರು ಅದನ್ನು ಮೀರಿ ಹೋದಾಗ ಅನಾಹುತಗಳಾಗುತ್ತವೆ. ಆದರೆ ಅನಿರುದ್ಧ್ ತಮ್ಮ ವನ್ಯಜೀವಿ ಫೋಟೋಶೂಟ್ ಸಮಯದಲ್ಲಿ ಎಲ್ಲಿಯೂ ವ್ಯನ್ಯಜೀವಿಗಳಿಗೆ ತೊಂದರೆ ಕೊಟ್ಟಿಲ್ಲ ಎನ್ನುವುದು ಆ ಫೋಟೋಗಳ ಕಣ್ಣಿನಲ್ಲಿಯೇ ತಿಳಿಯುತ್ತದೆ. ಅದು ಅಭಿನಂದನೀಯ.
- ರಮೇಶ್ ಅರವಿಂದ್, ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net