

ದೇವಸ್ವಂ ಬ್ರಾಹ್ಮಣಸ್ವಂ ವಾ ಲೋಭೇನಾಪಹಿನಸ್ತಿ ಯಃ|
ಸ ಪಾಪಾತ್ಮ ಪರೇ ಲೋಕೆ ಗೃಧ್ರೋಚ್ಛಿಷ್ಠೇನ ಜೀವತಿ||
ದೇವತೆಗಳಿಗೆ, ಜ್ಞಾನಿಗಳಿಗೆ, ಋಷಿಗಳಿಗೆ ಸಂಬಂಧಪಟ್ಟ ಅಮೂಲ್ಯ ವಸ್ತುಗಳನ್ನು ಯಾರು ಲೋಭದಿಂದ ತನ್ನ ಸ್ವಾರ್ಥಕ್ಕಾಗಿ ಅಪಹರಿಸುವರೋ ಅವರು ಪಾಪಿಷ್ಟರು. ಇಹದಲ್ಲಿ ಅಲ್ಲದೆ ಪರದಲ್ಲಿಯೂ ಹದ್ದು ಕಿತ್ತು ತಿಂದು ಉಳಿದ ಮಾಂಸವನ್ನೇ ಉಣುವವರಾಗುತ್ತಾರೆ. ಹೀಗೆ ಕರುಳು ಕಿತ್ತು ಹೋಗುವ ಹಸಿವು, ಅಗತ್ಯ ವಸ್ತು ಕೈಗೆ ದಕ್ಕದ ನೋವು ಕಾಡುತ್ತಲೇ ಇರುತ್ತದೆ ಎಂದು ತಿಳಿಯಬೇಕು.
ಸ್ವತಃ ವಿವೇಚನೆ ಇಲ್ಲದೆ ರಾವಣ ಸೀತೆಯನ್ನು ಎಳೆದೊಯ್ದ. ಜಟಾಯು ಎದುರಾದ. ರಾವಣನಿಗೆ ಇನ್ನಿಲ್ಲದಂತೆ ತಿಳಿ ಹೇಳಿದ. ಪಂಚವಟಿಗೆ ಬಂದಾಗಲೇ ರಾಮ ಜಟಾಯುವನ್ನು ಭೇಟಿಯಾಗಿದ್ದ. ದಶರಥನ ಸಖ್ಯವನ್ನು ರಾಮನಲ್ಲೂ ಮುಂದುವರೆಸಿ ಪ್ರಭಾವಿತನಾಗಿದ್ದ. ರಾಮನಿಗಾಗಿ ಜೀವನ ನೀಡಲು ಕೂಡ ಹಿಂಜರಿಯಲಿಲ್ಲ. ‘ರಾಮಸ್ವವನ್ನು ಅಪಹರಿಸಿ ನೀನು ಏನೂ ದಕ್ಕಿಸಿಕೊಳ್ಳಲಾರೆ’
ಯತ್ಕೃತ್ವಾ ನ ಭವೇದ್ಧರ್ಮಃ| ನ ಕೀರ್ತಿರ್ನ ಯಶೋ ಭುವಿ|
ಶರೀರಸ್ಯ ಭವೇತ್ ಖೇದಃ | ಕಸ್ತತ್ ಕರ್ಮ ಸಮಾಚರೇತ್||
‘ಮಾಡುವ ಕೆಲಸದಿಂದ ಜೀವನಶೈಲಿ ಉತ್ತಮವಾಗಬೇಕು. ಎಲ್ಲೆಡೆ ಹೆಸರಾಗಬೇಕು. ಸಿದ್ಧಿ ಪಡೆಯಬೇಕು. ಅಂಥ ಯಾವ ಫಲವೂ ಲಭಿಸದೆ ಕೇವಲ ಶರೀರಕ್ಕೆ ಆಯಾಸವಾಗುವುದಾದರೆ ಯಾವ ಬುದ್ಧಿವಂತ ಆ ಕಾರ್ಯದಲ್ಲಿ ತೊಡಗುತ್ತಾನೆ?’
ಜಟಾಯು ಅದನ್ನು ಸುಂದರ ದೃಷ್ಟಾಂತದೊಂದಿಗೆ ರಾವಣನ ಗಮನ ಸೆಳೆಯುತ್ತಾನೆ. ಬೋರ್ಗಲ್ಲಿಗೆ ನೀರೆರೆದರೆ ಮೆತ್ತಗಾದೀತೇ? ನಮಗಂತೂ ಈ ಮಾತು ಎಂದಿಗೂ ಮನನೀಯ.
ಸ ಭಾರಃ ಸೌಮ್ಯ ಭರ್ತವ್ಯಃ ಯೋ ನರಂ ನಾವಸಾದಯೇತ್|
ತದನ್ನಮಪಿ ಭೋಕ್ತವ್ಯಂ ಜೀರ್ಯತೇ ಯದನಾಮಯಂ||
‘ತನ್ನನ್ನೇ ಕುಸಿಯುವಂತೆ ಮಾಡುವ ಭಾರವನ್ನು ಯಾರು ತಾನೆ ಎತ್ತಲು ಬಯಸುವನು? ಅಜೀರ್ಣ ರೋಗ ಉಂಟಾಗದಂತೆ ಅಗತ್ಯವಿದ್ದಷ್ಟನ್ನೇ ಉಣಬೇಕು.’ ರಾಮನ ಹೃದಯವನ್ನೇ ಹೊತೆ್ತೊಯ್ಯುವ ಹೃದಯಹೀನನಾದ ನಿನಗೆ ಸೀತೆ ದಕ್ಕುವಳೆ? ಎಂದು ಜಟಾಯು ಎಚ್ಚರಿಸಿದರೂ ರಾವಣ ಕಾಣನಾಗಿದ್ದ. ಏನನ್ನೂ ಕಾಣದಾಗಿದ್ದ. ಪರರ ಸ್ವತ್ತು ಕಿತ್ತುಕೊಂಡರೇನೆ ದಕ್ಕದು. ಇನ್ನು ಪರದ ಸ್ವತ್ತು ದಕ್ಕುವುದೇ?
(ಲೇಖಕರು ಸಂಸ್ಕೃತ ಉಪನ್ಯಾಸಕರು)