ಸಮರ್ಪಕ ನೀರು ಪೂರೈಕೆಗೆ ಪಟ್ಟುಶಾಸಕ ಡಿ.ಕೆ.ಶಿವಕುಮಾರ್ ಮನೆ ಮುಂದೆ ಖಾಲಿ ಕೊಡ ಪ್ರದರ್ಶನ

protest
Published on

ಕನಕಪುರ

ಕುಡಿಯುವ ನೀರು ಮತ್ತು ಇತರ ಮೂಲಸೌಕರ್ಯ ಕೊರತೆ ನಿವಾರಿಸುವಂತೆ ಒತ್ತಾಯಿಸಿ ನಗರದ ಕೆಂಕೇರಮ್ಮ ಬಡಾವಣೆಯ ಮಹಿಳೆಯರು ಮಂಗಳವಾರ ಮೈಸೂರು ರಸ್ತೆಯಲ್ಲಿರುವ ಶಾಸಕ ಡಿ.ಕೆ.ಶಿವಕುಮಾರ್ ಮನೆ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಬಡಾವಣೆಯಲ್ಲಿ ಕುಡಿಯುವ ನೀರಿಗೆ ವ್ಯಾಪಕ ತೊಂದರೆಯಾಗುತ್ತಿದೆ. ತಿಂಗಳಿನಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುತ್ತಿಲ್ಲ. ಈ ಬಗ್ಗೆ ನಗರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾನಿರತ ಮಹಿಳೆಯರು ದೂರಿದರು.

ಶಾಸಕ ಡಿ.ಕೆ.ಶಿವಕುಮಾರ್ ಮನೆಯ ಎದುರಿನ ಬೀದಿಯಲ್ಲೇ ಹಾಹಾಕಾರವಾಗಿದ್ದು, ನಗರಸಭೆ ಸಮರ್ಪಕವಾಗಿ ನೀರು ಪೂರೈಸದಿರುವುದರಿಂದ ನಾಗರಿಕರು ಪರಿತಪಿಸುವಂತಾಗಿದೆ. ಬಡಾವಣೆಗೆ ಬರುತ್ತಿದ್ದ ಕಾವೇರಿ ನೀರಿನ ಸರಬರಾಜನ್ನು ಮತ್ತೊಂದೆಡೆಗೆ ತಿರುಗಿಸಲಾಗಿದೆ. ಶೀಘ್ರವೇ ಸಮರ್ಪಕವಾಗಿ ಪೂರೈಕೆ ಮಾಡದಿದ್ದರೆ ನಗರಸಭೆ ಮುಂಭಾಗ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಬಂದ ನಗರಸಭೆ ಇಂಜಿನಿಯರ್ ವಿಜಿಕುಮಾರ್ ಹಾಗೂ ನೀರು ಸರಬರಾಜ ಇಲಾಖೆಯ ಅಧಿಕಾರಿಗಳನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು.

ನೀರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ಬಡಾವಣೆಯ ಶಿವಮ್ಮ, ಶಾಂತಮ್ಮ, ಇಂದಿರಾ, ಭಾಗ್ಯಮ್ಮ, ಈಶ್ವರಾಚಾರಿ, ಸರಸ್ವತಿ, ಸುನಂದಮ್ಮ, ಸಾಕಮ್ಮ, ಪ್ರೇಮಾ, ನಾಗರತ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net