

ಸ್ವಂತ ಜಿಲ್ಲೆ, ತಾಲೂಕಿಗೆ ಹೊರಡಲು ಸಿದ್ಧರಾಗಿದ್ದ ಶಿಕ್ಷಕರ ಖುಷಿಗೆ ತಣ್ಣೀರು
ಗಂಗಾಧರ್ ಬೈರಾಪಟ್ಟಣ ರಾಮನಗರ
ಖುಷಿ ಖುಷಿಯಿಂದ ವರ್ಗಾವಣೆಗೊಂಡ ಕನಕಪುರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲ.
ಕನಕಪುರ ತಾಲೂಕಿನಲ್ಲಿ 113 ಶಿಕ್ಷಕರು ಇತ್ತೀಚೆಗೆ ನಡೆದ ವರ್ಗಾವಣೆ ಕೌನ್ಸೆಲಿಂಗ್ನಲ್ಲಿ ಪಾಲ್ಗೊಂಡು ತಮ್ಮೂರಿನ ಸಮೀಪದ ಸ್ಥಳಗಳಿಗೆ ವರ್ಗಾವಣೆ ತೆಗೆದುಕೊಂಡು, ಬಿಡುಗಡೆಯಾಗಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ಶಿಕ್ಷಕರು ವರ್ಗಾವಣೆಗೊಂಡರೆ ಶಾಲೆಗಳಿಗೆ ಬೀಗ ಬೀಳುತ್ತದೆ ಎನ್ನುವ ಕಾರಣಕ್ಕೆ ಎಚ್ಚೆತ್ತಿರುವ ಶಾಲಾ ಶಿಕ್ಷಣ ಇಲಾಖೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡ ನಂತರವೇ ಇವರಿಗೆ ಬಿಡುಗಡೆ ನೀಡಲು ತೀರ್ಮಾನಿಸಿದೆ. ಇದರಿಂದಾಗಿ ಕಳೆದ ಹಲವಾರು ವರ್ಷಗಳಿಂದ ಕನಕಪುರ ತಾಲೂಕಿನಲ್ಲಿಯೇ ಕೆಲಸ ಮಾಡುತ್ತಿದ್ದ ಶಿಕ್ಷಕರು ತಮ್ಮೂರಿಗೆ ತೆರಳುವುದು ಕೊಂಚ ವಿಳಂಬವಾಗಲಿದೆ.
92 ಶೂನ್ಯ ಶಿಕ್ಷಕ ಶಾಲೆಗಳಾಗಲಿವೆ?
ಕನಕಪುರದ ನಾಲ್ಕು ಹೋಬಳಿಗಳಲ್ಲಿ ಒಟ್ಟು 280 ಸರ್ಕಾರಿ ಶಾಲೆಗಳಿದ್ದು, ಇವುಗಳಿಗೆ 767 ಹುದ್ದೆಗಳು ಮಂಜೂರಾಗಿವೆ. ಆದರೆ, ಇದುವರೆಗೂ ಕರ್ತವ್ಯ ನಿರ್ವಹಿಸುತ್ತಿರುವುದು 409 ಶಿಕ್ಷಕರು ಮಾತ್ರ. ಆದರೆ ಕಳೆದ ಹಲವಾರು ವರ್ಷಗಳಿಂದಲೂ ವರ್ಗಾವಣೆಗಾಗಿ ಕಾದು ಕುಳಿತಿದ್ದ ಬೇರೆ ತಾಲೂಕು ಮತ್ತು ಜಿಲ್ಲೆಗಳ ಶಿಕ್ಷಕರು ಅವಕಾಶ ಸಿಗುತ್ತಿದ್ದಂತೆ ತಮ್ಮ ಜಿಲ್ಲೆ, ಇಲ್ಲವೇ ಜಿಲ್ಲೆಗೆ ಹತ್ತಿರದ ತಾಲೂಕುಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ರೀತಿ ವರ್ಗಾವಣೆ ಮಾಡಿಸಿಕೊಂಡ ಕನಕಪುರ ತಾಲೂಕಿನ ಒಟ್ಟು ಶಿಕ್ಷಕರ ಸಂಖ್ಯೆ 113. ಇದರ ಜತೆಗೆ ಇನ್ನೂ ಕೆಲವು ವಿಭಾಗಗಳ ಕೌನ್ಸೆಲಿಂಗ್ ಬಾಕಿ ಇದ್ದು ಮತ್ತಷ್ಟು ಮಂದಿ ಶಿಕ್ಷಕರು ಕನಕಪುರ ಬಿಡಲಿದ್ದಾರೆ.
ಇದರಿಂದಾಗಿ ಒಟ್ಟು 92 ಶಾಲೆಗಳು ಶಿಕ್ಷಕರಿಲ್ಲದ ಶಾಲೆಗಳಾಗಲಿವೆ. ಈ ಹಿನ್ನೆಲೆಯಲ್ಲಿ ಕನಕಪುರ ತಾಲೂಕಿನಲ್ಲಿ ಶಿಕರ ಕೊರತೆಗೆ ಪರಿಹಾರ ಸಿಗುವವರೆಗೆ ವರ್ಗಾವಣೆಯಾಗಿರುವವರ ಸ್ಥಳಕ್ಕೆ ಬೇರೆಯವರು ಬರುವ ತನಕ ತಾಲೂಕಿನಿಂದ ಒಬ್ಬರನ್ನೂ ಸಹ ಕರ್ತವ್ಯದಿಂದ ಬಿಡುಗಡೆ ಮಾಡಬಾರದು ಎಂದು ಕ್ಷೇತ್ರದ ಶಾಸಕರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಸದ್ಯಕ್ಕೆ ಕಷ್ಟ!
ವರ್ಗಾವಣೆಗೊಂಡ ಶಿಕ್ಷಕರೇನೋ ಕನಕಪುರ ತಾಲೂಕಿನಿಂದ ಬಿಡುಗಡೆಗೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಸದ್ಯಕ್ಕೆ ಇದು ಸಾಧ್ಯವೇ ಇಲ್ಲ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು. ಕನಕಪುರದಲ್ಲಿ ಅತಿಥಿ ಶಿಕ್ಷಕರೂ ಸಿಗುತ್ತಿಲ್ಲ. ವರ್ಗಾವಣೆಗೊಂಡ ಸ್ಥಳಕ್ಕೆ ಬೇರೆ ಯಾರೂ ಬರುತ್ತಿಲ್ಲ. ಇದರಿಂದಾಗಿ ಸರ್ಕಾರ ಹೊಸ ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ಕೋರ್ಟ್ನಲ್ಲಿರುವ ಪ್ರಕರಣ ಇತ್ಯರ್ಥಗೊಂಡರೆ ಜಿಲ್ಲೆಗೆ ಮಂಜೂರಾಗಿರುವ 138 ಶಿಕ್ಷಕರನ್ನು ಕನಕಪುರಕ್ಕೆ ನಿಯೋಜನೆ ಮಾಡಿ ಖಾಲಿ ಹುದ್ದೆಗಳನ್ನು ತುಂಬಬಹುದು. ಅಲ್ಲಿಯವರೆಗೂ ವರ್ಗಾವಣೆಗೊಂಡ ಶಿಕ್ಷಕರು ಕಾಯಲೇಬೇಕು.
ಕನಕಪುರ ತಾಲೂಕಿನ ಶಿಕ್ಷಕರ ಕೊರತೆಯ ಮಾಹಿತಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಇಲಾಖೆ ಆಯುಕ್ತರ ಗಮನಕ್ಕೆ ತರಲಾಗಿದೆ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ, ವರ್ಗಾವಣೆಯಾದವರನ್ನು ಬಿಡುಗಡೆಗೊಳಿಸಿದರೆ ಶೂನ್ಯ ಶಿಕರ ಶಾಲೆಗಳ ಸಂಖ್ಯೆ 92ಕ್ಕೆ ಏರಿಕೆಯಾಗಲಿದೆ.
ಗಂಗಣ್ಣಸ್ವಾಮಿ, ಡಿಡಿಪಿಐ
==
ಶಿಕ್ಷಕರನ್ನು ಬಿಡುಗಡೆಗೊಳಿಸಿದರೆ ಸಾಕಷ್ಟು ಶಾಲೆಗಳು ಬಂದ್ ಆಗಲಿವೆ. ಈ ಕೊರತೆಗೆ ರಾಜ್ಯಮಟ್ಟದಲ್ಲಿಯೇ ಪರಿಹಾರ ದೊರೆಯಬೇಕು. ಅಲ್ಲಿಯವರೆಗೂ ವರ್ಗಾವಣೆಗೊಂಡ ಶಿಕ್ಷಕರ ಬಿಡುಗಡೆ ಕಷ್ಟವಾಗಲಿದೆ.
ಸೋಮಲಿಂಗಯ್ಯ, ಬಿಇಒ, ಕನಕಪುರ
ಇಪ್ಪತ್ತು ವರ್ಷಗಳಿಂದ ಕನಕಪುರದಲ್ಲಿಯೇ ಕೆಲಸ ಮಾಡಿದ್ದೇನೆ. ಈಗಲಾದರೂ ಅಪ್ಪ&ಅಮ್ಮನನ್ನು ನೋಡಿಕೊಳ್ಳಲು ಅವಕಾಶ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ನಮ್ಮೂರಿನ ಸಮೀಪಕ್ಕೆ ವರ್ಗಾವಣೆ ಆಗಿದೆ. ಆದರೂ ಬಿಡುಗಡೆ ವಿಳಂಬವಾಗುತ್ತಿದೆ. ಶಿಕ್ಷಕರ ಕೊರತೆ ಕಾರಣಕ್ಕೆ ವರ್ಗಾವಣೆ ರದ್ದುಗೊಳಿಸುವ ಆತಂಕವಿದೆ.
ಹೆಸರು ಹೇಳಲಿಚ್ಚಿಸದ ನೊಂದ ಶಿಕ್ಷಕ