

ಚನ್ನಪಟ್ಟಣ
ಅತಿಹೆಚ್ಚು ಹಾಲು ಪೂರೈಕೆ ಮಾಡುತ್ತಿರುವ ನಮ್ಮ ತಾಲೂಕನ್ನು ಬೆಂಗಳೂರು ಹಾಲು ಒಕ್ಕೂಟ ನಿರ್ಲಕ್ಷ್ಯ ಮಾಡುತ್ತಿದೆ. ಇದು ಮುಂದುವರಿದರೆ ಒಕ್ಕೂಟದ ವಿರುದ್ಧ ಬೃಹತ್ ಹೋರಾಟ ನಡೆಸಲಾಗುವುದು ಎಂದು ಬಮುಲ್ ನಿರ್ದೇಶಕ ಎಚ್.ಸಿ. ಜಯಮುತ್ತು ಎಚ್ಚರಿಕೆ ನೀಡಿದರು.
ತಾಲೂಕಿನ ಬೈರಾಪಟ್ಟಣ ಗ್ರಾಮದ ಬಳಿ ಇರುವ ಬಮುಲ್ ಶಿಥಿಲೀಕರಣ ಘಟಕದಲ್ಲಿ ಬಮುಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚನ್ನಪಟ್ಟಣ ತಾಲೂಕಿಗೆ ಬೆಂಗಳೂರು ಹಾಲು ಒಕ್ಕೂಟ ಸಮರ್ಪಕವಾಗಿ ಸವಲತ್ತು ನೀಡುತ್ತಿಲ್ಲ. ಒಕ್ಕೂಟದ ಈ ತಾರತಮ್ಯವನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಬಮುಲ್ ಕೇಂದ್ರ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಲಾಗುವುದು. ಒಕ್ಕೂಟದ ನಿರ್ದೇಶಕ ಎನ್ನುವುದನ್ನು ಮರೆತು ರೈತರಿಗಾಗಿ ಒಕ್ಕೂಟದ ವಿರುದ್ಧವೇ ಹೋರಾಟ ನಡೆಸಲಾಗುವುದು ಎಂದರು.
ಒಕ್ಕೂಟದ ವ್ಯಾಪ್ತಿಯಲ್ಲಿನ 3 ತಾಲೂಕುಗಳು ಉತ್ಪಾದಿಸುವ ಹಾಲನ್ನು ನಮ್ಮ ತಾಲೂಕು ಒಂದರಿಂದಲೇ ಪೂರೈಸಲಾಗುತ್ತಿದೆ. ಆದರೆ, ಒಕ್ಕೂಟ ಹಲವು ಕಾರಣಗಳಿಂದ ನಮ್ಮ ತಾಲೂಕನ್ನು ನಿರ್ಲಕ್ಷ್ಯ ಮಾಡುತ್ತಿದೆ. ಅನುದಾನ ತಾರತಮ್ಯ ಸರಿಪಡಿಸುವಂತೆ ಒಕ್ಕೂಟಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದು ಹೀಗೆ ಮುಂದುವರಿದರೆ ಉತ್ಪಾದಕರೊಂದಿಗೆ ಒಕ್ಕೂಟದ ಎದರು ಹೋರಾಟ ನಡೆಸಲಾಗುವುದು ಎಂದರು.
ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳ
ಹೈನುಗಾರಿಕೆ ದುಬಾರಿಯಾಗಿದ್ದು, ರೈತರಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿನ ದರವನ್ನು 3 ರೂ. ಹೆಚ್ಚಳ ಮಾಡಿದ್ದು, ಏ.1ರಿಂದ ಈ ದರ ಜಾರಿಗೆ ಬರಲಿದೆ. ಈ ಹೆಚ್ಚಳದೊಂದಿಗೆ ಉತ್ಪಾದಕರು ಪೂರೈಸುವ ಪ್ರತಿ ಲೀಟರ್ ಹಾಲಿಗೆ 33 ರು. ಸಿಗಲಿದೆ. ಆದರೂ ಈ ಬೆಲೆ ಸಾಲದಾಗಿದೆ. ಇನ್ನೂ ಹೆಚ್ಚಿನ ಬೆಲೆ ಸಿಗುವಂತೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಜಯಮುತ್ತು ತಿಳಿಸಿದರು.
ತಾಲೂಕಿನಲ್ಲಿ ಮೇವಿನ ಕೊರತೆ ಉಂಟಾಗಿದ್ದು, ರೈತರು ಹಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹಾಲು ಉತ್ಪಾದನೆ ಕುಂಠಿತಗೊಂಡಿದೆ. ಇನ್ನೆರಡು ತಿಂಗಳಲ್ಲಿ ಪರಿಸ್ಥಿತಿ ಸರಿಹೋಗುತ್ತದೆ. ಅಲ್ಲಿಯವರಗೆ ರೈತರು ಕಷ್ಟ ಸಹಿಸಿಕೊಳ್ಳಿ. ಹೈನೋದ್ಯಮದ ಸಂಕಷ್ಟ ಪರಿಹರಿಸಲು ಸಹಕಾರ ನೀಡುತ್ತೇನೆ ಎಂದು ಜಯಮುತ್ತು ತಿಳಿಸಿದರು.
12.72 ಲಕ್ಷ ರೂ. ಪ್ರತಿಭಾ ಪುರಸ್ಕಾರ
ಬಮುಲ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಐಟಿಐ, ಪಿಯುಸಿ, ಪದವಿ, ಮೆಡಿಕಲ್, ಇಂಜಿನಿಯರಿಂಗ್ ಸೇರಿ ವಿವಿಧ ತರಗತಿಗಳಲ್ಲಿ ಅಧ್ಯಯನ ನಡೆಸುತ್ತಿರುವ 377 ಹಾಲು ಉತ್ಪಾದಕರ ಮಕ್ಕಳಿಗೆ 12.72 ಲಕ್ಷ ರೂ. ಮೊತ್ತದ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರಿಗೆ ವೈದ್ಯಕೀಯ ವೆಚ್ಚವನ್ನು ಮರುಪಾವತಿ ಮಾಡಲಾಯಿತು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಜೆಡಿಎಸ್ ನಗರ ಅಧ್ಯಕ್ಷ ಅಜಯ್ ಕುಮಾರ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬೈರನರಸಿಂಹಯ್ಯ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, ಜೆಡಿಎಸ್ ಮುಖಂಡರಾದ ಚಕ್ಕೆರೆ ರಾಜು. ಶಶಿಕುಮಾರ್, ಶ್ರೀನಿವಾಸ್, ಸತೀಶ್, ಬೋರ್‌ವೆಲ್ ರಾಮಚಂದ್ರು, ಬಮುಲ್ ಉಪವ್ಯವಸ್ಥಾಪಕ ಹೇಮಂತ್ ಮುಂತಾದವರು ಉಪಸ್ಥಿತರಿದ್ದರು.