

ಗಂಗಾಧರ್ ಬೈರಾಪಟ್ಟಣ ರಾಮನಗರ
ಎರಡು ದಶಕಗಳ ಹಿಂದೆ ಚನ್ನಪಟ್ಟಣ ತಾಲೂಕಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿದ್ದ ಚನ್ನಪಟ್ಟಣದ ಡೂಮ್‌ಲೈಟ್ ವೃತ್ತದ ಬಳಿ ಇರುವ ಪೆಟ್ಟಾ ಶಾಲೆ ಈಗ ಕುಸಿಯುವ ಹಂತ ತಲುಪಿದ್ದು, ಶಾಲೆ ಪುನರಾರಾಂಭ ಇಲ್ಲಿ ಸಂಭ್ರಮವನ್ನೇ ತರಲಿಲ್ಲ.
ರಾಮನಗರ ಜಿಲ್ಲೆಯಾಗುವ ಮುಂಚೆ ಚನ್ನಪಟ್ಟಣ ತಾಲೂಕುಮಟ್ಟದ ಕ್ರೀಡಾ ಕೂಟಗಳಿಗೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಿದ್ದ ಅಷ್ಟೇ ಅಲ್ಲದೆ ಅದೆಷ್ಟೋ ಜಿಲ್ಲಾಮಟ್ಟದ ಕ್ರೀಡಾಕೂಟಗಳಿಗೆ ಆಶ್ರಯ ನೀಡಿದ್ದ ಶಾಲೆ ಕುಸಿಯುವ ಹಂತ ತಲುಪಿದ್ದು, ಇದನ್ನು ಸರಿಪಡಿಸಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ.
ಬೀಳುತ್ತಿದೆ ಛಾವಣಿ
ಸುಮಾರು ದಶಕಗಳೇ ಕಳೆದಿರುವ ಹಳೆಯ ಕಟ್ಟಡವನ್ನು ಹೊಂದಿರುವ ಪೆಟ್ಟಾ ಶಾಲೆಯಲ್ಲಿ ಇರುವ 10 ಕೊಠಡಿಗಳಲ್ಲಿ ಎಲ್ಲದರ ಛಾವಣಿಯೂ ಕುಸಿಯುತ್ತಿದೆ. ಇದರಲ್ಲಿಯೇ ಮಕ್ಕಳು ಪಾಠ ಕೇಳಬೇಕಾದ ಅನಿವಾರ್ಯತೆ ಇದೆ. ಪ್ರತಿದಿನ ಪಾಠ ಮಾಡಲು ಶಿಕ್ಷಕರು ಹಿಂದೇಟು ಹಾಕಿದರೆ, ಯಾವಾಗ ಛಾವಣಿ ಕುಸಿಯುವುದೋ ಎನ್ನುವ ಆತಂಕದಲ್ಲಿಯೇ ವಿದ್ಯಾರ್ಥಿಗಳು ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಟ್ಟಲು ಬಂದು ಹಿಂದೆ ಹೋದರು
ಪೆಟ್ಟಾ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 160 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ಇದ್ದ ಕೊಠಡಿಗಳಲ್ಲಿ ಪಾಠ ಕೇಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಕೆಲವು ವರ್ಷಗಳ ಹಿಂದೆ ಹೊಸದಾಗಿ 3 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಈ ಕೊಠಡಿಗಳು ಸಾಲದ ಕಾರಣ ಅನಿವಾರ್ಯವಾಗಿ ಹಳೇ ಕೊಠಡಿಗಳಲ್ಲೇ ಕುಳಿತು ಪಾಠ ಕೇಳಬೇಕಿದೆ. ಈ ಹಿನ್ನೆಲೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಸಂಸ್ಥೆ ತನ್ನ ಸಿಎಸ್ ಆರ್ ನಿಧಿಯಲ್ಲಿ 10 ಕೊಠಡಿಗಳನ್ನು ನಿರ್ಮಾಣ ಮಾಡಿಕೊಡಲು ಮುಂದೆ ಬಂದಿತ್ತು. ಆದರೆ ಶಾಲೆ ಇನ್ನೂ ಶಿಕ್ಷಣ ಇಲಾಖೆ ಹೆಸರಿಗೆ ಖಾತೆ ಆಗದ ಕಾರಣ ಕೊಠಡಿ ಕಟ್ಟಲು ಬಂದವರು ಹಿಂದೆ ಸರಿದರು.
ಖಾತೆಗೂ ಕ್ಯಾತೆ?
ಲಭ್ಯ ಮಾಹಿತಿ ಪ್ರಕಾರ ಆಟದ ಮೈದಾನವೂ ಸೇರಿ ಒಟ್ಟು 8 ಎಕರೆ ಜಾಗದಲ್ಲಿ ಪೆಟ್ಟಾ ಶಾಲೆ ಇದೆ. ಆದರೆ ಈಗ ಕೇವಲ 7-8 ಗುಂಟೆ ಜಮೀನಿಗಷ್ಟೇ ಖಾತೆ ಮಾಡಿಕೊಡುವ ಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಖಾತೆ ಮಾಡಿಕೊಡುವುದಾದರೆ ಆಟದ ಮೈದಾನವನ್ನು ಸೇರಿಸಿಕೊಂಡು ಖಾತೆ ಮಾಡಿಕೊಡಲಿ, ಇಲ್ಲವಾದರೆ ಖಾತೆ ಮಾಡಿಕೊಡುವುದೇ ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಇದುವರೆಗೂ ಖಾತೆ ಮಾಡಿಕೊಡುವ ಕೆಲಸ ಆಗಿಲ್ಲ.
ಆಟದ ಮೈದಾನವೂ ಬೇಕಿದೆ
ಒಂದು ಕಾಲದಲ್ಲಿ ಒಂದಿಲ್ಲೊಂದು ಕ್ರೀಡಾ ಚಟುವಟಿಕೆಗಳ ತಾಣವಾಗಿದ್ದ ಪೆಟ್ಟಾ ಶಾಲಾ ಮೈದಾನ ಈಗ ಕಸ ಹಾಕುವ ತಾಣವಾಗಿದೆ. ಇದರಿಂದಾಗಿಯೇ ಬಹುತೇಕ ಆಟದ ಮೈದಾನ ತಿಪ್ಪೆಗುಂಡಿಯಂತೆ ಆಗಿದೆ. ಒಂದು ಕಡೆ ಗಿಡಗಂಟಿಗಳು ಬೆಳೆದಿದ್ದರೆ ಮತ್ತೊಂದು ಕಡೆ ಪಕ್ಕದಲ್ಲಿಯೇ ಇರುವ ಎಪಿಎಂಸಿಯ ಕಸವೂ ಇಲ್ಲಿಗೆ ಬಂದು ಸೇರುತ್ತಿದೆ. ಒಂದು ವೇಳೆ ಮೈದಾನವನ್ನು ಉಳಿಸಿಕೊಳ್ಳಲಿಲ್ಲ ಎಂದರೆ ಮುಂದೊಂದು ದಿನ ಇಡೀ ಆಟದ ಮೈದಾನ ಭೂಗಳ್ಳರ ಪಾಲಾಗಲಿದೆ.
ಜನಪ್ರತಿನಿಧಿಗಳು ಗಮನ ಹರಿಸಲಿ
ಇತಿಹಾಸವುಳ್ಳ ಡೂಂಲೈಟ್ ಬಳಿಯ ಪೆಟ್ಟಾ ಶಾಲೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮುಂದಾಗಬೇಕು. ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಶಾಲೆಯ ದುರಸ್ತಿಗಿಂತ ಹೆಚ್ಚಾಗಿ ಹೊಸ ಕಟ್ಟಡವನ್ನೇ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಈ ಶಾಲೆಗೆ ಗತವೈಭವ ತಂದುಕೊಡುವ ಕೆಲಸವನ್ನು ಶಾಲಾ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳು ಮಾಡಬೇಕಿದೆ.
ಖಾತೆ ಮಾಡಿಸಿಕೊಳ್ಳದೆ ಏನೂ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ತಹಸೀಲ್ದಾರ್ ಕಚೇರಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಖಾತೆ ನಂತರ ಸಿಎಸ್‌ಆರ್ ನಿಧಿಯಲ್ಲಿ ಕೊಠಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
ಮರಿಗೌಡ, ಬಿಇಒ, ಚನ್ನಪಟ್ಟಣ