ಮನೆಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದ ನೇಪಾಳಿಗಳಿಬ್ಬರ ಬಂಧನ

Thief
Published on

ಬೆಂಗಳೂರು: ಬೀಗ ಹಾಕಿರುವ ಮನೆಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ನೇಪಾಳಿಗಳನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಶಿವಾಜಿನಗರದ ತಿಲಕ್ ಅಲಿಯಾಸ್ ಜೀವನ್ (23) ಮತ್ತು ಮಹದೇವಪುರದ ರೋಷನ್ ಪದಮ್ ಶಾಹಿ (27) ಬಂಧಿತರು. ಆರೋಪಿಗಳ ವಿಚಾರಣೆ ವೇಳೆ ಎರಡು ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, 70 ಗ್ರಾಂ ಚಿನ್ನಾಭರಣ ಮತ್ತು 500 ಗ್ರಾಂ ಬೆಳ್ಳಿ ತಂಬಿಗೆ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳ ಮೂಲದ ತಿಲಕ್ ಮತ್ತು ರೋಷನ್ ನೌಕರಿ ಬಯಸಿ ಬೆಂಗಳೂರಿಗೆ ಬಂದಿದ್ದರು. ನೌಕರಿ ಮಾಡದೆ ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶಕ್ಕೆ ಕಳ್ಳತನಕ್ಕೆ ಕೈ ಹಾಕಿದ್ದರು. ನಗರದ ಎಲ್ಲೆಡೆ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ನಿಗಾ ವಹಿಸುತ್ತಿದ್ದರು.

ಯಾರು ಇಲ್ಲದೆ ಇರುವುದನ್ನು ಖಚಿತ ಪಡಿಸಿಕೊಂಡು ಮನೆ ಬೀಗ ಒಡೆದು ಒಳನುಗ್ಗಿ ಚಿನ್ನಾಭರಣ ದೋಚುತ್ತಿದ್ದರು. ಕದ್ದ ವಸ್ತುಗಳನ್ನು ಮಾರ್ಚ್ 5ರಂದು ರಾಮಮೂರ್ತಿನಗರ ಮುಖ್ಯ ರಸ್ತೆಯಲ್ಲಿ ಇರುವ ಆಭರಣ ಮಳಿಗೆಗೆ ಮಾರಾಟಕ್ಕೆ ಆರೋಪಿಗಳು ಬಂದಿದ್ದರು.

ಖಚಿತ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ಎಚ್.ಎಂ. ರಂಗಸ್ವಾಮಿ ನೇತೃತ್ವದ ತಂಡ ಆರೋಪಿಗಳನ್ನು ಮತ್ತು ಬೆಳ್ಳಿ ಬಿಂದಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎರಡು ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿವೆ. 2022ರ ಅಕ್ಟೋಬರ್‌ನಲ್ಲಿ ಎನ್‌ಆರ್‌ಐ ಲೇಔಟ್‌ನಲ್ಲಿ ಮನೆಯೊಂದರಲ್ಲಿ ಕಳ್ಳತನ ಎಸಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net