ಅದಮ್ಯ ಸಾಹಸದ ಕ್ರಾಂತಿಕಾರಿ ರಾಮ ಪ್ರಸಾದ್ ಬಿಸ್ಮಿಲ್

Bismla 10 June 20
Published on

| ಶ್ರೀವತ್ಸ ಚಳ್ಳಕೆರೆ

ದೇಶವನ್ನು ದಾಸ್ಯಶೃಂಖಲೆಯಿಂದ ಬಿಡಿಸಲು ಅನನ್ಯ ಶ್ರದ್ಧೆಯಿಂದ ಶ್ರಮಿಸಿದ ಅಮೋಘ ಯುವ ಕ್ರಾಂತಿಕಾರಿ ರಾಮ ಪ್ರಸಾದ್ ಬಿಸ್ಮಿಲ್. 1897 ಜೂನ್ 11ರಂದು ಉತ್ತರ ಪ್ರದೇಶದ ಶಹಜಹಾನ್​ಪುರದಲ್ಲಿ ಜನನ. ಹಿಂದಿ, ಇಂಗ್ಲಿಷ್, ಉರ್ದು ಮತ್ತು ಬಂಗಾಳಿಯನ್ನು ಚೆನ್ನಾಗಿ ಬಲ್ಲವನಾಗಿದ್ದ. ಈತನೊಬ್ಬ ಕವಿ, ಲೇಖಕ. ‘ಅಮೆರಿಕ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ’ ಪುಸ್ತಕವನ್ನು ಹಿಂದಿಯಲ್ಲಿ ರಚಿಸಿ ‘ಬಾಬು ಹರಿವಂಶ ಸಹಾಯ್’ ಎಂಬ ಕಾಲ್ಪನಿಕ ಹೆಸರಿನಲ್ಲಿ ಸ್ವಾಮಿ ಸೋಮದೇವರ ಸಹಕಾರದೊಂದಿಗೆ ಪ್ರಕಟಿಸಿದ. ಪುಸ್ತಕ ಪ್ರಕಟವಾದ ತಕ್ಷಣವೇ ಬ್ರಿಟಿಷ್ ಸರ್ಕಾರವು ಅದನ್ನು ನಿಷೇಧಿಸಿಬಿಟ್ಟಿತು. ಧೃತಿಗೆಡದ ಬಿಸ್ಮಿಲ್ ‘ಮಾತೃವೇದಿ’ ಎಂಬ ಕ್ರಾಂತಿಕಾರಿ ಸಂಘ ಕಟ್ಟಿದ. ಸಂಘಟನೆಯ ಆರ್ಥಿಕ ಅವಶ್ಯಕತೆಗಳಿಗಾಗಿ ಬ್ರಿಟಿಷ್​ರನ್ನು ಲೂಟಿ ಮಾಡಲು ನಿಶ್ಚಯಿಸಿ ಮೂರು ಹಂತಗಳಲ್ಲಿ ಕಾರ್ಯಗತಗೊಳಿಸಲಾಯಿತು. ಆಗಿನ್ನೂ ಬಿಸ್ಮಿಲ್ 21ರ ಹರೆಯದ ಯುವಕ.

ಕೆಲವೇ ದಿನಗಳಲ್ಲಿ ದೆಹಲಿ ಮತ್ತು ಆಗ್ರಾ ನಡುವೆ ರೈಲಿನಲ್ಲಿ ಸಾಗಿಸುತ್ತಿದ್ದ ಸರ್ಕಾರಿ ಖಜಾನೆಯನ್ನು ಲೂಟಿಗೈಯ್ಯಲು ಯೋಜಿಸಿದರು. ಪೊಲೀಸರು ಎಲ್ಲ ಕಡೆಯಿಂದಲೂ ನುಗ್ಗಿದರು. ಬಿಸ್ಮಿಲ್ ಯಮುನಾ ನದಿಯಲ್ಲಿ ಧುಮುಕಿ ಕಣ್ಮರೆಯಾಗಿಬಿಟ್ಟ. ಪೊಲೀಸರು ಆತ ಸತ್ತನೆಂದೇ ಭಾವಿಸಿದರು. ಸಹಯೋಗಿ ಜೆಂಡಾ ಲಾಲ್ ಬಂಧಿತರಾಗಿ ಆಗ್ರಾ ಫೋರ್ಟ್​ನಲ್ಲಿ ಇರಿಸಲ್ಪಟ್ಟರು. ಆದರೆ ಅಲ್ಲಿಂದಲೂ ತಪ್ಪಿಸಿಕೊಂಡು ದೆಹಲಿಯನ್ನು ಸೇರಿ ಭೂಗತರಾಗಿಬಿಟ್ಟರು. ಕೋರ್ಟ್ ಮಾತ್ರ ಈರ್ವರನ್ನು ‘ಅಬ್​ಸ್ಕಾಂಡರ್​ಗಳು’ ಎಂದು ಘೊಷಿಸಿತು.

ಇಬ್ಬರೂ ಭೂಗತರಾಗಿಯೇ ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಸಂಚರಿಸಿ ಜನರನ್ನು ಕ್ರಾಂತಿಗೆ ಸಜ್ಜುಗೊಳಿಸಿದರು. ಕೆಲದಿನಗಳ ತರುವಾಯ ಮೈನ್​ಪುರಿ ಸಂಚಿನ ಕೇಸಿನಿಂದ ಎಲ್ಲರೂ ಬಿಡುಗಡೆಯಾದ ನಂತರ ಬಿಸ್ಮಿಲ್ ತನ್ನ ಊರಾದ ಶಹಜಹಾನ್​ಪುರಕ್ಕೆ ಹಿಂದಿರುಗಿದ. ಚೌರಿಚೋರಾ ಎಂಬಲ್ಲಿ 1922ನೇ ಇಸವಿಯಲ್ಲಿ ಚಳವಳಿ ನಿರತ ರೈತಾಪಿಗಳು, ಕೆಲವರು ಪೊಲೀಸರ ದೌರ್ಜನ್ಯದಿಂದ ಹತರಾಗಲ್ಪಟ್ಟಾಗ ಜನರು ರೊಚ್ಚಿಗೆದ್ದು, 22 ಪೊಲೀಸರನ್ನು ಪೊಲೀಸ್ ಠಾಣೆಯಲ್ಲಿಯೇ ಜೀವಂತವಾಗಿ ಸುಟ್ಟರು. ಗಾಂಧೀಜಿ ವಾಸ್ತವವನ್ನು ಅರಿಯುವ ಗೋಜಿಗೂ ಹೋಗದೆ ಅಸಹಕಾರ ಚಳವಳಿಯನ್ನು ನಿಲ್ಲಿಸಿಬಿಟ್ಟರು. ಬಿಸ್ಮಿಲ್ ಮಾತ್ರ ಯುವಜನರನ್ನು ಕೂಡಿಸಿ ‘ಹಿಂದೂಸ್ಥಾನ್ ರಿಪಬ್ಲಿಕನ್ ಸಂಘ’ ಸಂಘಟನೆಯನ್ನು ಕಟ್ಟಲು ಮುಂದಾದ.

1925ರ ಆಗಸ್ಟ್​ನಲ್ಲಿ ಸರ್ಕಾರಿ ಖಜಾನೆಯನ್ನು ರೈಲಿನಲ್ಲಿ ಸಾಗಿಸುವಾಗ ಲಖನೌ ಹತ್ತಿರದ ಕಾಕೋರಿಯಲ್ಲಿ ಲೂಟಿ ಮಾಡಲು ಬಿಸ್ಮಿಲ್ ಯೋಜನೆ ಸಿದ್ಧಪಡಿಸಿದ. ಬಲಗೈ ಬಂಟನಾದ ಅಷ್ಪಾಕ್ ಉಲ್ಲಾ ಖಾನ್ ತನ್ನ ರಿವಾಲ್ವಾರನ್ನು ಮನ್ಮಥನಾಥ ಗುಪ್ತನೆಂಬ ಸಹಕ್ರಾಂತಿಕಾರಿಗೆ ನೀಡಿದ. ಮನ್ಮಥನಾಥನು ಅಚಾತುರ್ಯದಿಂದ ಗುಂಡನ್ನು ಹಾರಿಸಿದ್ದರಿಂದ ಪ್ರಯಾಣಿಕನೊಬ್ಬ ಬಲಿಯಾದ. ಪೊಲೀಸರು 40 ಕ್ರಾಂತಿಕಾರಿಗಳನ್ನು ಬಂಧಿಸಿ ಮೊಕದ್ದಮೆ ಹೂಡಿದರು. ಒಂದೂವರೆ ವರ್ಷಗಳ ಬಳಿಕ ನ್ಯಾಯಾಲಯವು ರಾಮ ಪ್ರಸಾದ್ ಬಿಸ್ಮಿಲ್, ಅಷ್ಪಾಕ್ ಉಲ್ಲಾ ಖಾನ್, ರೋಷನ್ ಸಿಂಗ್ ಮತ್ತು ರಾಜೇಂದ್ರನಾಥ್ ಲಾಹಿರಿಗೆ ಮರಣದಂಡನೆಯ ಶಿಕ್ಷೆ ನೀಡಿತು.

ಗೋರಖ್​ಪುರದ ಜೈಲಿನಲ್ಲಿ 1927 ಡಿಸೆಂಬರ್ 19ರಂದು ಈ ಯುವ ದೇಶಭಕ್ತರನ್ನು ನೇಣಿಗೇರಿಸಲಾಯಿತು. ಆಗಲೂ ಬಿಸ್ಮಿಲ್ ಅಳುಕದೆ, ‘ಯಾರೂ ಚಿಂತಿಸಬೇಕಾದ ಅವಶ್ಯಕತೆಯಿಲ್ಲ. ದೇವರ ದಯೆಯಿಂದ ಮತ್ತೆ ಇಲ್ಲಿಯೇ ಹುಟ್ಟಿ ಬರುತ್ತೇನೆ. ದೇಶಕ್ಕೆ ಪೂರ್ಣ ಸ್ವರಾಜ್ಯವನ್ನು ಪಡೆಯುವುದೇ ನನ್ನ ಗುರಿ’ ಎಂದು ಘೊಷಿಸಿದ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net