

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, 2023ರ ಅಂತ್ಯದೊಳಗೆ ಮಂದಿರ ನಿರ್ಮಾಣವಾಗಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ನೋಡಬಹುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ದಕ್ಷಿಣ ಭಾರತದ ಏಕೈಕ ಸದಸ್ಯ, ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಮಂದಿರ ನಿರ್ಮಾಣ ಸ್ಥಳದಲ್ಲಿ ಹಳೇ ಕಟ್ಟಡಗಳನ್ನು ತೆರವುಗೊಳಿಸಿ, ಜಾಗ ಸಮತಟ್ಟುಗೊಳಿಸಿದಾಗ ಅಲ್ಲಿ ಸುಮಾರು 200 ಅಡಿ ಆಳದವರೆಗೆ ಮರಳು ಮಣ್ಣು ಇರುವುದು ಕಂಡುಬಂದಿದೆ. ತಳಪಾಯ ಭದ್ರಗೊಳಿಸದೆ ಶಿಲಾಮಯ ಮಂದಿರ ನಿರ್ಮಾಣ ಸಾಧ್ಯವಿಲ್ಲ ಎನ್ನುವ ವಾಸ್ತುಶಿಲ್ಪಿಗಳ ಅಭಿಪ್ರಾಯದಂತೆ 40-50 ಅಡಿ ಆಳದವರೆಗೆ ಮರಳು ತೆಗೆದು ಬೃಹದಾಕಾರದ ಸರೋವರದ ಮಾದರಿ ನಿರ್ವಿುಸಲಾಯಿತು. ಬಳಿಕ ಅದಕ್ಕೆ ಹಂತಹಂತವಾಗಿ ಸಿಮೆಂಟ್, ಜಲ್ಲಿ ಮಿಶ್ರಣವನ್ನು ಹಾಕಿ ಭೂಕಂಪನಕ್ಕೂ ಕಟ್ಟಡಕ್ಕೆ ಏನೂ ಆಗದಂತೆ ತಳಪಾಯ ದೃಢಗೊಳಿಸಲಾಗಿದೆ ಎಂದು ಸ್ವಾಮೀಜಿ ವಿವರಿಸಿದರು.
ದೇವನಹಳ್ಳಿಯ ಗ್ರಾನೈಟ್: ತಳಪಾಯದ ಮೇಲೆ ಕಟ್ಟೆ ನಿರ್ಮಾಣ ಮಾಡಲು ಕರ್ನಾಟಕದ ದೇವನಹಳ್ಳಿಯಿಂದ ಅಯೋಧ್ಯೆಗೆ ರವಾನಿಸಲಾದ ಗ್ರಾನೈಟ್ ಶಿಲೆ ಬಳಸಲಾಗುತ್ತಿದೆ. ಆ ಕಟ್ಟೆಯ ಮೇಲೆ ಭವ್ಯ ರಾಮಮಂದಿರ ನಿರ್ಮಾಣ ಪ್ರಕ್ರಿಯೆ ಆರಂಭವಾಗಲಿದೆ. ವಿದೇಶಿಯರ ಆಕ್ರಮಣದಿಂದ ಹಿಂದುಗಳ ಪಾಲಿಗೆ ಇಲ್ಲವಾಗಬೇಕಾಗಿದ್ದ ಮಂದಿರ, ಎಲ್ಲ ಹೋರಾಟಗಳ ಫಲವಾಗಿ, ಸವೋಚ್ಚ ನ್ಯಾಯಾಲಯವೂ ಮಂದಿರ ನಿರ್ವಣದ ಪರವಾಗಿ ತೀರ್ಪು ನೀಡಿದೆ. ಕೇಂದ್ರ ಸರ್ಕಾರ ವಿಶ್ವಸ್ಥ ಮಂಡಳಿ ರಚಿಸಿ ಮಂದಿರ ನಿರ್ವಣದ ಜವಾಬ್ದಾರಿ ವಹಿಸಿದೆ. ಮಂದಿರದಲ್ಲಿ ಪ್ರತಿಯೊಬ್ಬ ಭಕ್ತರ ಕೊಡುಗೆ ಇರಬೇಕು ಎಂದು ಸಮಾಜದ ಬಳಿಗೆ ಹೋದಾಗ ಅಗತ್ಯಕ್ಕಿಂತ ಹೆಚ್ಚು ದೇಣಿಗೆ ನೀಡಿ, ತಮ್ಮ ಭಾವನೆಯನ್ನು ತೋರಿಸಿಕೊಟ್ಟಿದೆ. ಸುಮಾರು 3 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗಿದೆ.
ಧರ್ಮ ಸಂಸತ್ತು ಮುನ್ನುಡಿ: ಮುಂಚೆ ಅಯೋಧ್ಯೆಯಲ್ಲಿ ಶ್ರೀರಾಮನ ಗುಡಿಗೆ ಬೀಗ ಹಾಕಲಾಗಿತ್ತು. ಪೂಜೆಗೆ ಅವಕಾಶವೇ ಇರಲಿಲ್ಲ. ಗುರು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಪಂಚಮ ಪರ್ಯಾಯ ಸಂದರ್ಭ ಆಯೋಜಿಸಲಾದ ಧರ್ಮ ಸಂಸತ್ತು-ಸಂತ ಸಮಾವೇಶದಲ್ಲಿ ಎಲ್ಲರ ಒಕ್ಕೊರಲ ಆಗ್ರಹ ರಾಮಪೂಜೆಗೆ ಅವಕಾಶ ನೀಡಬೇಕು ಎನ್ನುವುದಾಗಿತ್ತು. ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲಾಯಿತು. ಅದಕ್ಕೆ ಮಣಿದ ಸರ್ಕಾರ ಬೀಗ ತೆಗೆದು ಸಾರ್ವಜನಿಕರಿಗೆ ದರ್ಶನ, ಪೂಜೆಗೆ ಅವಕಾಶ ಕಲ್ಪಿಸಿತು. ರಾಮ ಜನ್ಮಭೂಮಿಯನ್ನು ಹಿಂದು ಸಮಾಜಕ್ಕೆ ಒಪ್ಪಿಸಬೇಕು ಎನ್ನುವ ಆಗ್ರಹವೂ ಅದೇ ಸಮ್ಮೇಳನದಲ್ಲಿ ವ್ಯಕ್ತವಾಗಿತ್ತು. ದೇಶದ ಪ್ರತಿಯೊಬ್ಬ ಭಗವದ್ಭಕ್ತರನ್ನು ಪ್ರತಿನಿಧಿಸುವ ಸಂತರನ್ನು ಒಗ್ಗೂಡಿಸಿ ತೆಗೆದುಕೊಂಡ ನಿರ್ಣಯವೇ ಇಂದಿನ ಬೆಳವಣಿಗೆಗೆ ದೊಡ್ಡ ಕಾರಣ.
ಕರಸೇವೆ ನೆನಪು: ಮೊದಲನೇ ಕರಸೇವೆ ನಡೆದಾಗ ಅಯೋಧ್ಯೆಗೆ ತೆರಳಿದ್ದೆ. ಆದರೆ ಎರಡನೇ ಬಾರಿ ಕರಸೇವೆ ಸಂದರ್ಭ ಉಡುಪಿಯ ಎಲ್ಲ ಮಠಗಳ ಯತಿಗಳು ಅಯೋಧ್ಯೆಗೆ ಹೊರಟು ನಿಂತಿದ್ದರು. ಆ ಕಾರಣ, ಉಡುಪಿಯಲ್ಲಿ ಶ್ರೀಕೃಷ್ಣನ ಪೂಜೆಗಾಗಿ ನಾನು ನಿಲ್ಲಬೇಕಾದ ಅನಿವಾರ್ಯತೆ ಬಂತು ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೆನಪಿಸಿದರು. ಇದೇ ವೇಳೆ ತಮ್ಮ ಗುರುಗಳು ಹೇಳಿದ ಪ್ರಸಂಗವನ್ನು ಸ್ವಾಮೀಜಿ ವಿವರಿಸಿದರು. ಕರಸೇವೆಯಲ್ಲಿ ಅಚಾನಕ್ ಆಗಿ ಹಳೆಯ ಗುಂಬಜ್ ನೆಲಸಮವಾಯಿತು. ಅಲ್ಲಿದ್ದ ರಾಮನ ಮೂರ್ತಿಯನ್ನು ಕರಸೇವಕರು ಹೊರಗೆ ತಂದು, ಗುರುಗಳ ಕೈಗೆ ನೀಡಿದರು. ಅಲ್ಲಿ ರಾಮನಿಗೆ ಮಂದಿರ ನಿರ್ವಿುಸಿಯೇ ಹೊರಡಬೇಕು ಎಂದು ಅವರು ಅದೇಶ ನೀಡಿದರು. ರಾತ್ರೋರಾತ್ರಿ ವೇದಿಕೆ, ಮಂಟಪ ನಿರ್ವಣವಾಯಿತು. ಗುರುಗಳು ಅಲ್ಲಿ ರಾಮನನ್ನು ಪ್ರತಿಷ್ಠಾಪನೆ ಮಾಡಿ ಹೊರಬಂದರು. ಅವರು ಕೇಂದ್ರ ಸರ್ಕಾರಕ್ಕೆ ‘ಇವತ್ತಿನಿಂದ ಶ್ರೀರಾಮನ ಆರಾಧನೆ ನಿರಂತರವಾಗಿ ನಡೆಯಬೇಕು, ಇಲ್ಲದಿದ್ದರೆ ನಾವು ಹೊರಡುವುದಿಲ್ಲ’ ಎಂದು ಎಚ್ಚರಿಸಿದ ಪರಿಣಾಮ, ಸರ್ಕಾರ ನಿತ್ಯಪೂಜೆಗೆ ಅವಕಾಶ ನೀಡಿತು.
ನಿತ್ಯ ಭಜನೆಯ ಸಂಕಲ್ಪ: ಮಂದಿರ ನಿರ್ವಣಕ್ಕೆ ಶ್ರೀರಾಮನ ಅನುಗ್ರಹವೂ ಬೇಕು ಎನ್ನುವ ನೆಲೆಯಲ್ಲಿ ಪ್ರತಿಯೊಬ್ಬ ಭಕ್ತರೂ ಪ್ರಯತ್ನಿಸಬೇಕು. ಅದರಂತೆ ಮುಂದಿನ ಮಕರ ಸಂಕ್ರಾತಿಯ ಮರುದಿನದಿಂದ ಅಯೋಧ್ಯೆಯಲ್ಲಿ ಭಜನೆ, ಚತುರ್ವೆದ, ರಾಮಾಯಣ, ಮಹಾಭಾರತ, ಪುರಾಣದ ಪಾರಾಯಣ ನಿತ್ಯ ನಡೆಯಲಿದೆ. ಅದಕ್ಕೆ ಪೂರಕವಾಗಿ ಎಲ್ಲರೂ ಮನೆಯಲ್ಲಿ ನಿತ್ಯ ಮುಸ್ಸಂಜೆ ವೇಳೆ ಭಜನೆಯಲ್ಲಿ ತೊಡಗಿಸಿಕೊಳ್ಳಬೇಕು. ಭಜನೆ ಗೊತ್ತಿಲ್ಲ ಎಂದಾದರೆ ರಾಮನಾಮ, ಕೃಷ್ಣನಾಮ ಸಂಕೀರ್ತನೆಯನ್ನಾದರೂ ಮಾಡಿ.
ಸದ್ಯ ಕರಸೇವೆಗೆ ಅವಕಾಶವಿಲ್ಲ: ರಾಮ ಮಂದಿರ ನಿರ್ವಣಕ್ಕೆ ಸಂಬಂಧಿಸಿದ ಕರಸೇವೆಗೆ ಅವಕಾಶ ನೀಡಬೇಕು ಎನ್ನುವುದು ದೇಶಾದ್ಯಂತ ರಾಮಭಕ್ತರ ಒಕ್ಕೊರಲ ಆಗ್ರಹವಾಗಿದೆ. ಟ್ರಸ್ಟ್ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದಾಗ ಅದಕ್ಕೆ ನಕಾರಾತ್ಮಕ ಉತ್ತರ ಲಭಿಸಿದೆ. ಕಾರಣ, ಪ್ರಸ್ತುತ ಅಯೋಧ್ಯೆಯಲ್ಲಿ ದೊಡ್ಡ ದೊಡ್ಡ ಯಂತ್ರ ಬಳಸಿ, ಭಾರಿ ಗಾತ್ರದ ಶಿಲೆಗಳನ್ನು ಎತ್ತಿ ಜೋಡಿಸಲಾಗುತ್ತಿದೆ. ಅದರ ನಡುವೆ ಜನರು ಕರಸೇವೆಯಲ್ಲಿ ತೊಡಗಿಸಿಕೊಂಡಾಗ ಆಕಸ್ಮಿಕ ಅವಘಡಗಳು ಉಂಟಾದರೆ...? ಹಾಗಾಗಿ ಅವಕಾಶ ನೀಡಲಾಗುತ್ತಿಲ್ಲ. ಮುಂದೆ ಅವಕಾಶ ಇದ್ದರೆ ಸಮಾಜಕ್ಕೆ ಕರೆ ನೀಡಲಾಗುವುದು. ಆಗ ಎಲ್ಲರೂ ಕರಸೇವೆಗೆ ಕೈಜೋಡಿಸಬಹುದು ಎಂದು ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಸಂವಾದದಲ್ಲಿ ಭಾಗಿಯಾದವರು: ಕರ್ನಾಟಕ ಗಾನಕಲಾ ಪರಿಷತ್ ಉಪಾಧ್ಯಕ್ಷ ಡಾ.ವಿದ್ಯಾಭೂಷಣ, ರಾಜ್ಯ ಬಿಜೆಪಿ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್, ವಿಶ್ವ ಹಿಂದು ಪರಿಷತ್ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಹಾಗೂ ಬಜರಂಗದಳದ ರಾಷ್ಟ್ರೀಯ ಸಹಸಂಯೋಜಕ ಸೂರ್ಯನಾರಾಯಣ ಸಂವಾದದಲ್ಲಿ ಪಾಲ್ಗೊಂಡರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು.
| ಡಾ.ವಿದ್ಯಾಭೂಷಣ
| ಕ್ಯಾ.ಗಣೇಶ್ ಕಾರ್ಣಿಕ್
| ಎಂ.ಬಿ. ಪುರಾಣಿಕ್
| ಸೂರ್ಯನಾರಾಯಣ