ರಾಮಮಂದಿರ ನಿರ್ಮಾಣ: ಬುನಾದಿ ಸ್ಥಳದಲ್ಲಿ ಸರಯೂ ನದಿ ನೀರಿನ ಸೆಲೆ

Ram Mandir 2
Published on

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬುನಾದಿ ಹಾಕುವುದಕ್ಕೆ ನಿಗದಿ ಪಡಿಸಿದ ಸ್ಥಳದಲ್ಲಿ ಸರಯೂ ನದಿ ನೀರಿನ ಸೆಲೆ ಕಾಣಿಸಿಕೊಂಡಿದೆ. ಆದ್ದರಿಂದ ಅಲ್ಲಿಗೆ ಸೂಕ್ತ ಅತ್ಯುತ್ತಮ ಬುನಾದಿ ಮಾದರಿಗಾಗಿ ರಾಮಮಂದಿರ ಟ್ರಸ್ಟ್ ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿಗಳ ನೆರವು ಕೋರಿದೆ.

ಮೂಲಗಳ ಪ್ರಕಾರ, ಪ್ರಧಾನಿಯವರ ಮಾಜಿ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಮುಖ್ಯಸ್ಥರಾಗಿರುವ ಮಂದಿರ ನಿರ್ಮಾಣ ಸಮಿತಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಪರಿಹಾರ ಕ್ರಮವನ್ನು ಅನ್ವೇಷಿಸಿದೆ. ಸದ್ಯ ಹಾಕಿಕೊಂಡಿರುವ ಯೋಜನೆ ಪ್ರಕಾರ ಬುನಾದಿ ನಿರ್ಮಿಸಿದರೆ ಅದಕ್ಕೆ ಸರಯೂ ನದಿ ನೀರಿನ ಸೆಲೆಯ ಒತ್ತಡವನ್ನು ತಾಳಿಕೊಳ್ಳಲಾಗದು ಎಂಬುದು ಸಭೆಯಲ್ಲಿ ನಡೆದ ಮಾತುಕತೆ ವೇಳೆ ಎಲ್ಲರಿಗೂ ಮನವರಿಕೆಯಾಗಿದೆ.

ನಿರ್ಮಾಣ ಸಮಿತಿಯ ಎದುರು ಸದ್ಯ ಎರಡು ಆಯ್ಕೆಗಳಿದ್ದು, ಒಂದು ವಿಬ್ರೋ ಸ್ಟೋನ್​ ಸ್ತಂಭ (ಹುಡಿಮಾಡಿದ ಕರ್ಗಲುಗಳ ಸ್ತಂಭ)ವನ್ನು ನಿರ್ಮಿಸಿ ಬುನಾದಿಗೆ ಬೆಂಬಲ ಒದಗಿಸುವುದು. ಇನ್ನೊಂದು ಎಂಜಿನಿಯರಿಂಗ್ ಪರಿಹಾರದ ಮೂಲಕ ಆ ಮಣ್ಣಿನ ಗುಣಮಟ್ಟ ಮತ್ತು ಸುದೃಢತೆಯನ್ನು ಹೆಚ್ಚಿಸುವುದು. ಇವುಗಳ ಪರಿಶೀಲನೆಯೂ ನಡೆಯುತ್ತಿದೆ.

ಹೆಚ್ಚುವರಿ ಪರಿಹಾರವೇನಾದರೂ ಸಿಗಬಹುದೆಂಬ ಆಶಯದೊಂದಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇಥ್ರ ಟ್ರಸ್ಟ್​, ರಾಮ ಮಂದಿರ ನಿರ್ಮಾಣಕ್ಕೆ ಸೂಕ್ತವಾದ ಸುಭದ್ರ ಬುನಾದಿಗೆ ಸರಿಯಾದ ಮಾದರಿಗಳನ್ನು ಸೂಚಿಸುವಂತೆ ಐಐಟಿಗಳ ಮೊರೆ ಹೋಗಿದೆ. ಸದ್ಯದ ಯೋಜನೆ ಪ್ರಕಾರ ರಾಮ ಮಂದಿರ ನಿರ್ಮಾಣಕಾರ್ಯ 2023ರ ವೇಳೆಗೆ ಪೂರ್ಣಗೊಳ್ಳಬೇಕಾಗಿದೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net