ದೈಹಿಕ ಸಂಬಂಧಕ್ಕೆ ಸಿದ್ಧರಿಲ್ಲದಿದ್ದರೆ ಮದುವೆ ಆಗಬಾರದು; ವಿವಾದ ಹುಟ್ಟಿಸಿದ ರಾಖಿ ಮಾಜಿ ಪತಿಯ ಹೇಳಿಕೆ..

Untitled-design-2024-09-16T162728.010
Published on

ಮುಂಬೈ: ರಾಖಿ ಸಾವಂತ್​ ಮತ್ತು ಆಕೆಯ ಮಾಜಿ ಪತಿ ಆದಿಲ್​ ಖಾನ್​ ದುರಾನಿ ಆಗಾಗ್ಗೆ ವಿವಾದಗಳಿಂದ ಸುದ್ದಿಯಲ್ಲಿರುತ್ತಾರೆ. ರಾಖಿ ತನ್ನ ಮಾಜಿ ಪತಿ ಆದಿಲ್ ವಿರುದ್ಧ ಹಲ್ಲೆ, ಅತ್ಯಾಚಾರ ಮತ್ತು ಕಿರುಕುಳ ನೀಡಿರುವುದಾಗಿ ಆರೋಪ ಮಾಡಿದ್ದಾರೆ. ಆರೋಪ ಮಾಡಿದ ಬಳಿಕ ರಾಖಿ ಸಾವಂತ್​ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಆದರೆ ಪ್ರಸ್ತುತ ಆದಿಲ್​ ಖಾನ್​ ದುರಾನಿ ನೀಡಿರುವ ಹೇಳಿಕೆ ವಿವಾದವನ್ನುಂಟು ಮಾಡಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ರಾಖಿ ಸಾವಂತ್​ ಮಾಡಿರುವ ಅತ್ಯಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಆದಿಲ್​ ಖಾನ್​ ದುರಾನಿ, ಕೋಲ್ಕತಾದಲ್ಲಿ ನಡೆದಿರುವುದು ಅತ್ಯಾಚಾರ ಆದರೆ ವೈವಾಹಿಕ ಜೀವನದಲ್ಲಿ ನಡೆಯುವುದನ್ನು ಅತ್ಯಾಚಾರ ಎಂದು ಹೇಳಲಾಗುವುದಿಲ್ಲ. ನಾನು ನೋಡಿದ ಮಟ್ಟಿಗೆ ಸಮಾಜದಲ್ಲಿ ವೈವಾಹಿಕ ಅತ್ಯಾಚಾರಗಳು ಅಷ್ಟಾಗಿ ನಡೆಯುತ್ತಿಲ್ಲ. ನಾನು ಬಹಳಷ್ಟು ಜನರನ್ನು ನೋಡಿದ್ದೇನೆ ಮತ್ತು ವಿದೇಶಗಳಲ್ಲಿ ನನಗೆ ಅನೇಕ ಸ್ನೇಹಿತರಿದ್ದಾರೆ. ವೈವಾಹಿಕ ಜೀವನದಲ್ಲಿ ಅತ್ಯಾಚಾರ ನಡೆದಿದೆ ಎಂಬುದನ್ನು ನಾನು ಇದುವರೆಗೂ ಕೇಳಿಲ್ಲ ಎಂದು ಹೇಳಿದ್ದಾರೆ.

ಇನ್ನು ಪರಸ್ಪರ ಸಂಬಂಧದಲ್ಲಿ ಇಬ್ಬರ ಒಪ್ಪಿಗೆಯ ಬಗ್ಗೆ ಮಾತನಾಡಿದ ಆದಿಲ್​, ಹುಡುಗ ಮತ್ತು ಹುಡುಗಿ ಯಾವುದಾದರೊಂದು ವಿಷಯದ (ದೈಹಿಕ ಸಂಬಂಧದ) ಬಗ್ಗೆ ಖಚಿತವಾಗಿಲ್ಲದಿದ್ದರೆ ಅವರು ಮದುವೆಯಾಗಬಾರದು. ಇಬ್ಬರ ನಡುವೆ ಏನನ್ನಾದರೂ ಮಾಡಲು ಸಮ್ಮತಿ ಇಲ್ಲದಿದ್ದರೆ ಅವರ ನಡುವೆ ಪ್ರೀತಿಯ ಕೊರತೆಯಿದೆ ಎಂದರ್ಥ. ಪತಿ ಪತ್ನಿಯ ಮೇಲೆ ಒತ್ತಡ ಹೇರಿದರೆ ಇಬ್ಬರೂ ಜತೆಯಾಗಿ ಬಾಳುವುದು ಬೇಡ, ಏಕೆಂದರೆ ಅವರ ನಡುವೆ ಪ್ರೀತಿಯೇ ಇಲ್ಲ ಎಂದು ಹೇಳಿದ್ದಾರೆ.

ಮಾಜಿ ಪತ್ನಿ ರಾಖಿ ಸಾವಂತ್ ಅವರೊಂದಿಗಿನ ವಿಚ್ಛೇದನದ ಕುರಿತು ಮಾತನಾಡಿ ಮುಂದಿನ ವಿಚಾರಣೆಯನ್ನು ಈ ವರ್ಷದ ನವೆಂಬರ್‌ನಲ್ಲಿ ನಡೆಸಲಾಗುವುದು. ಅದಕ್ಕಾಗಿ ರಾಖಿ ಭಾರತಕ್ಕೆ ವಾಪಸ್ ಬರಬೇಕು ಎಂದು ಹೇಳಿದರು. ಈ ವರ್ಷದ ಆರಂಭದಲ್ಲಿ ಆದಿಲ್​ ಬಿಗ್​ಬಾಸ್​ ಸೀಸನ್​ 12ರ ಸ್ಪರ್ಧಿಯಾಗಿದ್ದ ಸೋಮಿ ಖಾನ್​ ಅವರನ್ನು ವಿವಾಹವಾದರು.

ಅಂದ್ಹಾಗೆ ಆದಿಲ್ ಖಾನ್ ದುರಾನಿ ವಿರುದ್ಧ ಈಗಾಗಲೇ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ರಾಖಿ ಸಾವಂತ್ ತನ್ನ ಮಾಜಿ ಪತಿ ವಿರುದ್ಧ ವಿವಾಹೇತರ ಸಂಬಂಧ ಮತ್ತು ಅತ್ಯಾಚಾರ ಸೇರಿದಂತೆ ಇತರ ಆರೋಪಗಳನ್ನು ಮಾಡಿದ್ದಾರೆ. ಫೆಬ್ರವರಿ 2023ರಲ್ಲಿ ಆದಿಲ್ ಖಾನ್ ಮೇಲೆ ಅತ್ಯಾಚಾರ ಮತ್ತು ಸುಳ್ಳು ವಿವಾಹದ ಭರವಸೆ ನೀಡಿದ್ದಾಗಿ ಇರಾನ್ ಮಹಿಳೆಯೊಬ್ಬರು ಆರೋಪಿಸಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net