ರಾಜ್ಯೋತ್ಸವ ಪ್ರಶಸ್ತಿ ಇಂದು ಫೈನಲ್; 10 ಸಾವಿರ ಹೆಸರು ಚರ್ಚೆಗೆ

Untitled design (4)
Published on

ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗಾಗಿ ಅಂತಿಮ ಚರಣದ ಪ್ರಕ್ರಿಯೆ ಇಂದು (ಅ.28) ನಡೆಯಲಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಆಯ್ಕೆ ಸಮಿತಿ ಸಭೆ ಸಂಜೆ 6 ಗಂಟೆಯಿಂದ ನಡೆಯಲಿದ್ದು, 160 ಸಾಧಕ ವ್ಯಕ್ತಿಗಳು ಹಾಗೂ ಸಂಘಟನೆಗಳ ಹೆಸರಿರುವ ಪಟ್ಟಿಯಲ್ಲಿ 80 ಮಂದಿಯನ್ನು ಅಂತಿಮಗೊಳಿಸಲಾಗುತ್ತದೆ.

ಲಭ್ಯ ಮಾಹಿತಿಗಳ ಪ್ರಕಾರ ಈ ಬಾರಿ ಸರ್ಕಾರ ಪ್ರಶಸ್ತಿಗೆ ಅರ್ಜಿ ಕರೆಯುವ ಸಂಪ್ರದಾಯ ಕೈಬಿಟ್ಟಿತ್ತು. ಆದರೆ, ಅರ್ಜಿ ಸಲ್ಲಿಕೆಗೆ ಅವಕಾಶ ಮುಕ್ತವಾಗಿಟ್ಟಿತ್ತು. ಈ ಅವಕಾಶ ಬಳಸಿಕೊಂಡು ಸೇವಾ ಸಿಂಧು ಪೋರ್ಟಲ್ ಮೂಲಕ 500 ಮಂದಿ ಅರ್ಜಿ ಸಲ್ಲಿಸಿದ್ದರು. ಉಳಿದಂತೆ 3-4 ಹಂತದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 10 ಸಾವಿರ ಹೆಸರು ಚರ್ಚೆಗೆ ಬಂದಿದ್ದವು ಎಂದು ಸಮಿತಿ ಸದಸ್ಯರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಎರಡು ದಿನಗಳ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವರ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 160 ಹೆಸರು ಅಂತಿಮಗೊಳಿಸಲಾಗಿದೆ. ಮಂಗಳವಾರ ನಡೆಯುವ ಸಭೆಯಲ್ಲಿ 80 ಹೆಸರನ್ನು ಆಯ್ಕೆ ಮಾಡಲು ಚರ್ಚೆ ನಡೆಸಲಾಗುತ್ತದೆ. ನವೆಂಬರ್ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ.

ಅಂದಹಾಗೆ, ಕೊನೆಯ ಹಂತದಲ್ಲಿ ಪ್ರಶಸ್ತಿ ಅಪೇಕ್ಷಿತರು ತಮ್ಮ ಹೆಸರನ್ನು ಪಟ್ಟಿಗೆ ಸೇರಿಸಲು ಕಸರತ್ತು ನಡೆಸಿದ್ದರು. ಸೋಮವಾರ ವಿಧಾನಸೌಧದಲ್ಲಿ ಶಿಕ್ಷಕರೊಬ್ಬರು ತಮಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸುವಂತೆ ಸಚಿವರು, ಅಧಿಕಾರಿಗಳಿಗೆ ದಂಬಾಲು ಬಿದ್ದಿದ್ದು ಕಾಣಿಸಿತು. ಹಾಗೆಯೇ, ಶಾಸಕರು, ಸಚಿವರ ಮುಖೇನ ಹಲವು ಆಕಾಂಕ್ಷಿಗಳು ಒತ್ತಡ ಹೇರಿರುವ ಬೆಳವಣಿಗೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net