31 ಬಾರಿ ಕೋವಿಡ್ ಪಾಸಿಟಿವ್​: ಟೆಸ್ಟ್​ ಮಾಡಿದಾಗಲೆಲ್ಲ ಬಿಡದ ಕರೊನಾ, ಮಹಿಳೆಯ ರಿಪೋರ್ಟ್​ ನೋಡಿ ವೈದ್ಯರು ಶಾಕ್​!​​

Corona 1
Published on

ಜೈಪುರ: ರಾಜಸ್ಥಾನ ಮೂಲದ 35 ವಯಸ್ಸಿನ ಮಹಿಳೆಯೊಬ್ಬಳು ಕಳೆದ ಐದು ತಿಂಗಳಲ್ಲಿ 31 ಬಾರಿ ಕರೊನಾ ಪಾಸಿಟಿವ್​ಗೆ ಒಳಗಾಗುವ ಮೂಲಕ ಎಲ್ಲ ವೈದ್ಯಕೀಯ ಸಿದ್ಧಾಂತಗಳಿಗೆ ಸವಾಲಾಗೊ ಪರಿಣಮಿಸಿದ್ದಾಳೆ.

ಮಹಿಳೆಯ ಫಲಿತಾಂಶವು ಕರೊನಾ ವೈರಸ್​ನ 14 ದಿನಗಳ​ ಇಂಕ್ಯೂಬೇಶನ್ ಅವಧಿ (ಮನುಷ್ಯನಿಗೆ ವೈರಸ್ ತಗುಲಿ ರೋಗಲಕ್ಷಣಗಳು ಪ್ರಾರಂಭಗೊಳ್ಳುವುದರ ಮಧ್ಯದ ಸಮಯ​)ಗೆ ವಿರುದ್ಧವಾಗಿರುವುದು ವೈದ್ಯರಿಗೆ ಸವಾಲಾಗಿದೆ.

ಒಟ್ಟು 17 ಆರ್​ಟಿ-ಪಿಸಿಆರ್​ ಮತ್ತು 14 ರ್ಯಾಪಿಟ್​ ಆ್ಯಂಟಿಜೆನ್​ ಪರೀಕ್ಷೆಗಳಲ್ಲೂ ಮಹಿಳೆಗೆ ಕರೊನಾ ಪಾಸಿಟಿವ್​ ವರದಿಯಾಗಿದೆ ಎಂದು ಮಹಿಳೆ ಉಳಿದುಕೊಂಡಿರುವ ಆಶ್ರಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿವರಣೆಗೆ ಬರುವುದಾರೆ ರೋಗಿ ಶಾರದಾ ದೇವಿ ಎಂಬಾಕೆ ರಾಜಸ್ಥಾನದ ಆಪ್ನ ಆಶ್ರಮದ ನಿವಾಸಿ. ಕಳೆದ ಆಗಸ್ಟ್​ನಿಂದಲೂ ಆಶ್ರಮದಲ್ಲೇ ಉಳಿದಕೊಂಡಿದ್ದಾರೆ. ಆಶ್ರಮಕ್ಕೆ ಹೊಸದಾಗಿ ಸೇರ್ಪಡೆಗೊಂಡಿದ್ದರಿಂದ ನಿಯಮದಂತೆಯೇ ಕೋವಿಡ್​ ಪರೀಕ್ಷೆ ಮಾಡಲಾಯಿತು. ವರದಿಯಲ್ಲಿ ಪಾಸಿಟಿವ್​ ಬಂದಿತು. ಅಂದಿನಿಂದಲೂ ಆಕೆ ಪ್ರತ್ಯೇಕವಾಗಿದ್ದು, ಆಲೋಪತಿಕ್​, ಹೋಮಿಯೋಪತಿಕ್​ ಮತ್ತು ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಆದರೆ, ಪ್ರತಿ ಬಾರಿ ಟೆಸ್ಟ್​ ಮಾಡಿಸಿದಾಗಲೂ ಕರೊನಾ ಪಾಸಿಟಿವ್​ ಬರುತ್ತಿದೆ.

ಅಚ್ಚರಿಯೆಂದರೆ, ಕರೊನಾ ಪಾಸಿಟಿವ್​ ಇದ್ದರು ಆಕೆ ಆರೋಗ್ಯವಾಗಿದ್ದಾಳೆ ಮತ್ತು 7 ರಿಂದ 8 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾಳೆಂದು ಆಶ್ರಮದ ವೈದ್ಯ ಡಾ. ಬಿ.ಎಂ. ಭಾರದ್ವಜ್​ ತಿಳಿಸಿದ್ದಾರೆ. ಇಲ್ಲಿಗೆ ಬಂದಾಗ ಆಕೆ ತುಂಬಾ ಬಸವಳಿದಿದ್ದಳು ಮತ್ತು ಸರಿಯಾಗಿ ನಿಂತುಕೊಳ್ಳಲು ಆಗುತ್ತಿರಲಿಲ್ಲ. ಆದರೆ, ಪ್ರಸ್ತುತ ಆರೋಗ್ಯಯುತವಾಗಿರುವುದು ನಮಗೆ ಸಮಾಧಾನಕರವಾಗಿದೆ. ಆದರೆ, ಆಕೆಯ ಕೋವಿಡ್​ ಸ್ಥಿತಿಯಿಂದ ಚಿಂತೆಗೀಡಾಗಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.

ಶಾರಾದರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ವೈದ್ಯರು ನಿರಂತರವಾಗಿ ನಿಗಾವಹಿಸಿದ್ದಾರೆ. ಆರಂಭದಲ್ಲಿ ಆಕೆಯ ಮಾನಸಿಕ ಸ್ಥಿತಿಯು ಉತ್ತಮವಾಗಿರಲಿಲ್ಲವಂತೆ. ಸದ್ಯ ಆಕೆಯಿನ್ನು ಪ್ರತ್ಯೇಕವಾಗಿ ಉಳಿದುಕೊಂಡಿದ್ದು, ಕಡಿಮೆ ಇಮ್ಯುನಿಟಿಯಿಂದಲೇ ಆಕೆಗೆ ನಿರಂತರವಾಗಿ ಕರೊನಾ ಪಾಸಿಟಿವ್​ ವರದಿಯಾಗುತ್ತಿರಬಹುದೆಂದು ಡಾ. ಭಾರದ್ವಜ್​ ಅಂದಾಜಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net