ರಾಜಸ್ಥಾನ ರಾಜಕೀಯ: ಸಚಿನ್ ಮನವೊಲಿಕೆಗೆ 2 ದಿನಗಳಲ್ಲಿ 29 ಫೋನ್​ ಕರೆ

Sachin Pilot 1
Published on

ಜೈಪುರ: ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್​ನ ಭಿನ್ನಮತ ಸ್ಫೋಟವಾಗಿದ್ದು, ಉಪಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಅಧ್ಯಕ್ಷರೂ ಆಗಿದ್ದ ಸಚಿನ್​ ಪೈಲಟ್​ ಮತ್ತು ಬೆಂಬಲಿಗರು ಪಕ್ಷದ ಮತ್ತು ಸಚಿವ ಸಂಪುಟದ ಪ್ರಮುಖ ಹೊಣೆಗಾರಿಕೆ ಕಳೆದುಕೊಂಡಿದ್ದಾರೆ. ಈ ವಿದ್ಯಮಾನಕ್ಕೂ ಮೊದಲು ಕಳೆದ ಎರಡು ದಿನಗಳ ಅವಧಿಯಲ್ಲಿ ಸಚಿನ್ ಪೈಲಟ್ ಅವರ ಮನವೊಲಿಕೆಗಾಗಿ 29 ಫೋನ್​ ಕರೆಗಳು ಹೋಗಿವೆ.

29 ಫೋನ್​ಕರೆಗಳ ಪೈಕಿ ಪ್ರಿಯಾಂಕಾ ವಾದ್ರಾ 4 ಕರೆ, ಹಿರಿಯ ನಾಯಕ ಪಿ.ಚಿದಂಬರಂ ಅವರಿಂದ 6 ಕರೆ, ಕೆ.ಸಿ.ವೇಣುಗೋಪಾಲ್ ಅವರಿಂದ 3, ರಾಹುಲ್ ಗಾಂಧಿ ಅವರಿಂದ ಒಂದು ಕರೆ ಪೈಲಟ್ ಅವರಿಗೆ ಹೋಗಿತ್ತು. ಏತನ್ಮಧ್ಯೆ ಶನಿವಾರ ರಾತ್ರಿ ಇನ್ನೋರ್ವ ಹಿರಿಯ ನಾಯಕ ಅಹ್ಮದ್ ಪಟೇಲ್ ನೇರವಾಗಿ ಸಚಿನ್ ಪೈಲಟ್ ಅವರನ್ನು ಭೇಟಿಯಾಗಿದ್ದರು. ಪಿ.ಚಿದಂಬರಂ ಆರು ಬಾರಿ ಕರೆ ಮಾಡಿದ್ದು, ಸಮಸ್ಯೆ ಬಗೆಹರಿಸೋದಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಅದ್ಯಾವುದೂ ಪ್ರಯೋಜನಕ್ಕೆ ಬಂದಿಲ್ಲ. ಈ ನಡುವೆ, ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಎರಡು ಬಾರಿ ಕರೆದು ಹಾಜರಾಗುವಂತೆ ಅವಕಾಶ ನೀಡಿದರೂ ಪೈಲಟ್ ಮತ್ತು ಬೆಂಬಲಿಗರು ಹಾಜರಾಗಿರಲಿಲ್ಲ.

ಈ ಎಲ್ಲ ಬೆಳವಣಿಗೆಗಳ ನಡುವೆ ಸಚಿನ್ ಪೈಲಟ್​ ದೆಹಲಿಗೆ ತೆರಳಿ ಕಾಂಗ್ರೆಸ್​ನ ಮಾಜಿ ನಾಯಕ, ಸದ್ಯ ಬಿಜೆಪಿ ಸಂಸದರೂ ಆಗಿರುವ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳು ಗೆಹ್ಲೋಟ್​ ಪಾಲಿಗೆ ಮುಳ್ಳಾಗಿ ಕಾಡತೊಡಗಿತ್ತು. ಈ ಎಲ್ಲದ ಪರಿಣಾಮವೇ ಇಂದಿನ ವಿದ್ಯಮಾನ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net